ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕಾಗಿ ಉಡುಪಿಯ ಶ್ರೀಕೃಷ್ಣ ಮಠ ಸಿಂಗಾರಗೊಂಡು ಸಜ್ಜಾಗಿದ್ದು, ಭರದ ಸಿದ್ಧತೆ ನಡೆದಿದೆ.
ಅಷ್ಟಮಿ ಅಂಗವಾಗಿ ಸೆ.14ರಂದು ರಾತ್ರಿ 12.11ಕ್ಕೆ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, 15ರಂದು ವೈಭವದ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.
ವಿಟ್ಲಪಿಂಡಿ ದಿನದಂದು ಪ್ರದರ್ಶನ ನೀಡಲು ಹುಲಿವೇಷ ತಂಡಗಳು ಸಿದ್ಧತೆ ನಡೆಸಿವೆ. 15ರಂದು ಮಹಾರಾಷ್ಟ್ರದ ಪುಣೆಯ ಆಲಾರೆ ತಂಡದವರು ಕನಕ ಗೋಪುರದ ಎದುರು ಪ್ರದರ್ಶನ ನೀಡಲಿದ್ದಾರೆ.
ರಥಬೀದಿಯ ವಿವಿಧೆಡೆ ಮೊಸರು ಕುಡಿಕೆಗಾಗಿ 13 ಗುರ್ಜಿಗಳನ್ನು ನೆಡಲಾಗಿದೆ. ಈ ಗುರ್ಜಿಗಳಿಗೆ ನೇತುಹಾಕುವ ಮೊಸರು ಕುಡಿಕೆಗಳನ್ನು ವಿಟ್ಲಪಿಂಡಿ ಮಹೋತ್ಸವದ ವೇಳೆ ಗೊಲ್ಲ ವೇಷಧಾರಿಗಳು ಒಡೆಯಲಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚುವ ಸಲುವಾಗಿ ಚಕ್ಕುಲಿ, ಉಂಡೆಗಳ ತಯಾರಿಯೂ ನಡೆದಿದೆ.
ರಥಬೀದಿಯಲ್ಲಿ ಪೂಜಾ ಸಾಮಗ್ರಿ, ಆಟಿಕೆ ಸಾಮಗ್ರಿಗಳ ಮಾರಾಟ ಶನಿವಾರವೇ ಗರಿಗೆದರಿತ್ತು. ವಿಟ್ಲಪಿಂಡಿ ಮಹೋತ್ಸವದ ಸಂದರ್ಭದಲ್ಲಿ ಹುಲಿವೇಷಧಾರಿಗಳಿಗೆ ಪ್ರದರ್ಶನ ನೀಡಲು ವೇದಿಕೆಯನ್ನೂ ಸಿದ್ದಗೊಳಿಸಲಾಗಿದೆ. 14 ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ.
ಜನ್ಮಾಷ್ಟಮಿ ಅಂಗವಾಗಿ ಕೃಷ್ಣ ಮಠ, ರಾಜಾಂಗಣ, ರಥಬೀದಿ, ಗೀತಾ ಮಂದಿರ ಮೊದಲಾದೆಡೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ.
- ‘ಆತ್ಮೋದ್ಧಾರಕ್ಕೆ ಕಾರಣ
’ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಕೇವಲ ಐಚ್ಛಿಕ ಎಂದು ತಿಳಿದುಕೊಳ್ಳದೆ ಅದು ನಮ್ಮ ಆತ್ಮೋದ್ಧಾರಕ್ಕೆ ಮೂಲ ಕಾರಣವಾಗಲಿದೆ ಎಂದು ತಿಳಿದುಕೊಳ್ಳಬೇಕು. ಸತ್ಕರ್ಮಗಳನ್ನು ಮಾಡಿ ಭಗವಂತನನ್ನು ಪ್ರಸನ್ನಗೊಳಿಸಿ ಆತ್ಮೋದ್ಧಾರ ಸಾಧಿಸುವುದು ಜೀವನದ ಮುಖ್ಯ ಉದ್ದೇಶ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಸೌರ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಉಡುಪಿ ಕೃಷ್ಣಮಠದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ಅದರಂತೆ ಇದೇ 14 ಮತ್ತು 15ರಂದು ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಜನ್ಮಾಷ್ಟಮಿಯ ಮಹತ್ವವನ್ನು ಹಾಗೂ ಶ್ರೀಕೃಷ್ಣನ ಸಂದೇಶವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.
- ‘ಬಿಗಿ ಬಂದೋಬಸ್ತ್’
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣಮಠ ಹಾಗೂ ಪರಿಸರದಲ್ಲಿ ಭಾನುವಾರ ಹಾಗೂ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ಅಧಿಕಾರಿಗಳು ಸಿಬ್ಬಂದಿ ಸೇರಿ 400ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಅಕ್ರಮ ಚಟುವಟಿಕೆಗಳು ನಡೆಯದಂತೆಯೂ ಮುಂಜಾಗ್ರತೆ ವಹಿಸಲಾಗುವುದು ಎಂದರು. ರಥಬೀದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ನಗರಸಭೆಗೆ ಸೂಚಿಸಲಾಗಿದೆ. ರಥಬೀದಿಯ ಸುತ್ತಲೂ ಇರುವ ಕಟ್ಟಡಗಳು ಮನೆಯ ಗೇಟ್‌ಗಳನ್ನು ತೆರೆದಿಡುವಂತೆ ತಿಳಿಸಲಾಗಿದೆ. ದಟ್ಟಣೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಲೌಡ್‌ಸ್ಪೀಕರ್‌ನಲ್ಲಿ ಸೂಚನೆಗಳನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.