ADVERTISEMENT

ಪಡುಬಿದ್ರಿ | ಮೆಸ್ಕಾಂ ಜನಸಂಪರ್ಕ ಸಭೆ: ಸಮಸ್ಯೆ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 14:27 IST
Last Updated 14 ಆಗಸ್ಟ್ 2024, 14:27 IST
ಕಾಪು ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ನಡೆದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳಾದ ದಿನೇಶ್ ಉಪಾಧ್ಯಾಯ, ಪ್ರಸನ್ನಕುಮಾರ್, ರಮೇಶ್, ಅರವಿಂದ್ ಕೆ.ಎಸ್, ಆನಂದ್ ಎಸ್.ಪಾಲ್ಗೊಂಡಿದ್ದರು.
ಕಾಪು ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ನಡೆದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳಾದ ದಿನೇಶ್ ಉಪಾಧ್ಯಾಯ, ಪ್ರಸನ್ನಕುಮಾರ್, ರಮೇಶ್, ಅರವಿಂದ್ ಕೆ.ಎಸ್, ಆನಂದ್ ಎಸ್.ಪಾಲ್ಗೊಂಡಿದ್ದರು.   

ಪಡುಬಿದ್ರಿ: ಅಪಾಯಕಾರಿಯಾಗಿರುವ ಹಳೆ ತಂತಿ ಬದಲಾಯಿಸಿ, ಲೋ ವೋಲ್ಟೇಜ್ ಸಮಸ್ಯೆ ನಿವಾರಿಸಬೇಕು. ಶಿರ್ವ ಶಾಖೆ ವಿಭಜಿಸಿ ಶಂಕರಪುರ ಶಾಖೆ ತೆರೆಯಬೇಕು. ಪಡುಬಿದ್ರಿ ಶಾಖೆಯನ್ನು ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕು ಸಹಿತ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಬುಧವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಆಗ್ರಹಿಸಿದರು.

ಬಂಟಕಲ್ಲು ವ್ಯಾಪ್ತಿಯಲ್ಲಿ ಹಳೆಯ ವಿದ್ಯುತ್ ತಂತಿಗಳಿಂದ ಅಪಾಯ ಭೀತಿಯಿದೆ. ಅವುಗಳನ್ನು ಬದಲಾಯಿಸುವಂತೆ ಜನಸಂಪರ್ಕ ಸಭೆಯಲ್ಲಿ ಅಹವಾಲು ಮಂಡಿಸಿದರೂ ಪ್ರಯೋಜನವಾಗಿಲ್ಲ. ಶಿರ್ವ ಶಾಖೆಗೆ ಹೆಚ್ಚುವರಿ ಪವರ್‌ಮೆನ್‌ ನಿಯೋಜಿಸುವಂತೆ ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್.‌ಪಾಟ್ಕರ್ ಆಗ್ರಹಿಸಿದರು.

ಶಿರ್ವ ಶಾಖಾ ವ್ಯಾಪ್ತಿಯಲ್ಲಿ 2023–24ರ ಕ್ರಿಯಾಯೋಜನೆಯಲ್ಲಿ ₹35 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪ್ರಗತಿಯಲ್ಲಿವೆ. ಹೆಚ್ಚುವರಿ ಪವರ್‌ಮೆನ್‌ ನಿಯೋಜನೆಗೆ ಸಂಬಂಧಿಸಿ ಮಳೆಗಾಲದ ತುರ್ತು ಕೆಲಸಗಳಿಗೆ ಮಾನ್ಸೂನ್ ಗ್ಯಾಂಗ್‌ಮೆನ್‌ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ವಿದ್ಯುತ್ ಪರಿವರ್ತಕದ ನೆಪದಲ್ಲಿ ಗ್ರಾ.ಪಂ. ಸದಸ್ಯರ ಹೊಸಮನೆಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸತಾಯಿಸುತ್ತಿರುವ ಪಡುಬಿದ್ರಿ ಮೆಸ್ಕಾಂ ಶಾಖೆ ಸಹಾಯಕ ಎಂಜಿನಿಯರ್ ಅವರನ್ನು ತರಾಟೆಗೆ ತೆಗದುಕೊಂಡರು.

ತೆಂಕ ಗ್ರಾಮದ ಸಂತೋಷ್ ಅವರು ಪ್ರತಿನಿಧಿಸುತ್ತಿರುವ ವಾರ್ಡ್‌ನಲ್ಲಿ ಲೋ ವೋಲ್ಟೇಜ್ ಸಮಸ್ಯೆಗೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಗ್ರಾಮಸ್ಥರ ಪರವಾಗಿ ಈ ಹಿಂದೆ ಬೇಡಿಕೆ ಸಲ್ಲಿಸಿದ್ದರು. ಈವರೆಗೂ ಈಡೇರಿಲ್ಲ. ಈಚೆಗೆ ಹೊಸಮನೆ ಕಟ್ಟಿಸಿದ್ದ ಸಂತೋಷ್, ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದು, ಲೋ ವೋಲ್ಟೇಜ್ ನೆಪದಲ್ಲಿ ಸಂಪರ್ಕ ಕಲ್ಪಿಸಲು ಸತಾಯಿಸುತ್ತಿದ್ದಾರೆ ಎಂದು ತೆಂಕ ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಧ್ಯಪ್ರವೇಶಿಸಿದ ಮೆಸ್ಕಾಂ ಉಡುಪಿ ವೃತ್ತ ಕಚೇರಿ ಆಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯಾಯ ಶಾಖಾಧಿಕಾರಿಗೆ ಶೀಘ್ರ ಸಂಪರ್ಕ ನೀಡುವಂತೆ ಸೂಚನೆ ನೀಡಿದರು.

ಪಡುಬಿದ್ರಿಯಲ್ಲಿ ಸ್ವಂತ ನಿವೇಶನವಿದ್ದರೂ ಬಾಡಿಗೆ ಕಟ್ಟಡದಲ್ಲಿ ಮೆಸ್ಕಾಂ ಕಚೇರಿ ನಿರ್ವಹಣೆಯಾಗುತ್ತಿರುವ ಬಗ್ಗೆ ಗ್ರಾ.ಪಂ. ಉಪಾಧ್ಯಕ್ಷ ಹೇಮಚಂದ್ರ ದೂರಿದರು. ಪಡುಬಿದ್ರಿಯಲ್ಲಿ 33/11 ಕೆ.ವಿ ಉಪಕೇಂದ್ರ ನಿರ್ಮಾಣದ ಪ್ರಸ್ತಾವನೆಯಿದ್ದು, ನಿರ್ಮಾಣವಾದ ಬಳಿಕ ಜಾಗ ದೊರೆತರೆ ಕಚೇರಿ ರಚನೆಗೂ ಒತ್ತು ನೀಡಲಾಗುವುದು ಎಂದು ದಿನೇಶ್ ಉಪಾಧ್ಯಾಯ ವಿವರಿಸಿದರು.

ಪಡುಬಿದ್ರಿ ಶಾಖೆಯನ್ನು ವಿಸ್ತರಿಸಿ ಪಡುಬಿದ್ರಿ ಉಪವಿಭಾಗ ರಚಿಸುವಂತೆ, ಪವರ್‌ಮೆನ್‌ ನೇಮಕಕ್ಕೆ ಈಗಿರುವ ಶೇ 75 ಅಂಕದ ಮಾನದಂಡವನ್ನು ಶೇ 50ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆ.ಆರ್.ಪಾಟ್ಕರ್, ಗುತ್ತಿಗೆದಾರ ನಾಗರಾಜ ಭಟ್ ಪಾಂಗಾಳ ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ದಿನೇಶ್ ತಿಳಿಸಿದರು.

ಉಡುಪಿ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್, ವೃತ್ತ ಕಚೇರಿ ಉಪಲೆಕ್ಕ ನಿಯಂತ್ರಾಣಾಧಿಕಾರಿ ರಮೇಶ್, ಕಾಪು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರವಿಂದ್ ಕೆ.ಎಸ್, ಸಹಾಯಕ ಎಂಜಿನಿಯರ್ ಆನಂದ್ ಎಸ್. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.