ಉಡುಪಿ: ಟಿನ್ ಶೀಟ್ ಆಳವಡಿಸಿದ ಜೋಪಡಿಗಳಲ್ಲಿ ವಾಸ, ಮಳೆಗಾಲದಲ್ಲಿ ಥಂಡಿ, ಬೇಸಿಗೆಯಲ್ಲಿ ಬಿಸಿಲಿನ ಝಳ ಅನುಭವಿಸಿ ಕನಿಷ್ಠ ಸೌಲಭ್ಯಗಳಲ್ಲೇ ತೃಪ್ತಿಪಟ್ಟು ಬದುಕು ಸಾಗಿಸುವ ದುಡಿಯುವ ವರ್ಗವೊಂದಿದೆ. ಅವರೇ ವಲಸೆ ಕಾರ್ಮಿಕರು.
ಬದುಕಿನ ಬಂಡಿ ಸಾಗಿಸಲು ಊರು ಬಿಟ್ಟು ಊರಿಗೆ ತೆರಳಿ ಅಲ್ಲೇ ನೆಲೆಸಿ, ಶ್ರಮವನ್ನೇ ನಂಬಿ ಬದುಕುವ ಇವರು ಇಂದು ಎಲ್ಲಾ ಕೆಲಸಗಳಿಗೂ ಅನಿವಾರ್ಯವೆಂಬಂತಾಗಿದೆ. ಗಾರೆ ಕೆಲಸವಿರಲಿ, ಕಟ್ಟಡ ನಿರ್ಮಾಣ, ರಸ್ತೆ, ಮನೆಗೆಲಸ ಅಷ್ಟೇ ಅಲ್ಲದೆ ಕೃಷಿ ಕೆಲಸಗಳಿಗೂ ಇಂದು ಜಿಲ್ಲೆಯಲ್ಲಿ ಇವರನ್ನೇ ಆಶ್ರಯಿಸಬೇಕಾಗಿದೆ.
ಉತ್ತರ ಕರ್ನಾಟಕ ಮಾತ್ರವಲ್ಲದೆ ಉತ್ತರ ಭಾರತದ ವಲಸೆ ಕಾರ್ಮಿಕರು ಕೂಡ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚಿನವರು ಇಲ್ಲಿನ ಮತದಾರರಲ್ಲದ ಕಾರಣ ರಾಜಕಾರಣಿಗಳಾಗಲಿ ಇತರರಾಗಲಿ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಅಲ್ಪ ಸೌಲಭ್ಯದಲ್ಲೇ ಜೀವನ ಸಾಗಿಸುವ ಅನಿವಾರ್ಯ ಸ್ಥಿತಿ ಅವರದ್ದು.
ಉತ್ತರ ಕರ್ನಾಟಕದ ಕಲಬುರಗಿ, ಬಾಗಲಕೋಟೆ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧೆಡೆಯ ಸಾವಿರಾರು ಮಂದಿ ವಲಸೆ ಕಾರ್ಮಿಕರು ಉಡುಪಿಯಲ್ಲಿ ನೆಲೆಸಿದ್ದಾರೆ. ಕೆಲವರು ಸಣ್ಣ ಬಾಡಿಗೆ ಮನೆಗಳಲ್ಲಿ ವಾಸಿಸಿದರೆ ಬಹುತೇಕರು ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಟಿನ್ ಶೀಟ್‌ನ ಜೋಪಡಿ ಕಟ್ಟಿಕೊಂಡು ಬಾಡಿಗೆ ಆಧಾರದಲ್ಲಿ ವಾಸಿಸುತ್ತಾರೆ.
ಉಡುಪಿ ನಗರದ ಬೀಡಿನಗುಡ್ಡೆಯಲ್ಲಿ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಅಲ್ಲಿ 40ಕ್ಕೂ ಹೆಚ್ಚು ಟಿನ್ ಶೀಟ್ ಜೋಪಡಿಗಳಲ್ಲಿ ವಲಸೆ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿವೆ. ಟಿನ್ ಹಾಸಿದ ಜೋಪಡಿಗೆ ತಿಂಗಳಿಗೆ ₹1,200 ಬಾಡಿಗೆ ನೀಡಬೇಕು ಎನ್ನುತ್ತಾರೆ ಕಾರ್ಮಿಕರು. ಹೆಚ್ಚಿನ ಜೋಪಡಿಗಳಿಗೆ ಸೋಲಾರ್ ಬೆಳಕೇ ಆಶ್ರಯವಾಗಿದೆ.
‘ಕಟ್ಟಿಗೆ, ಟಿನ್ ಶೀಟ್ ಬಳಸಿಕೊಂಡು ನಾವೇ ಜೋಪಡಿ ನಿರ್ಮಿಸಿಕೊಂಡಿದ್ದೇವೆ. ಒಂದು ಜೋಪಡಿ ನಿರ್ಮಿಸಲು ಅಂದಾಜು ₹40 ಸಾವಿರ ವೆಚ್ಚ ತಗಲುತ್ತದೆ’ ಎನ್ನುತ್ತಾರೆ ಬೀಡಿನಗುಡ್ಡೆಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಕಾರ್ಮಿಕರು.
ವಲಸೆ ಕಾರ್ಮಿಕರಿಗಾಗಿ ಜಿಲ್ಲಾಡಳಿತವೇ ವಸತಿ ಸಮುಚ್ಚಯ ನಿರ್ಮಿಸಿ ಸಣ್ಣ ಬಾಡಿಗೆಗೆ ನೀಡಿದರೆ ನಮ್ಮಂಥವರಿಗೆ ತುಂಬಾ ಅನುಕೂಲವಾಗಬಹುದು ಎನ್ನುತ್ತಾರೆ ಅವರು.
ಮಲ್ಪೆ ಬಂದರಲ್ಲಿ ಕೂಡ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರಿದ್ದಾರೆ. ಮೀನುಗಾರಿಕೆ ಕೆಲಸದಿಂದ ಹಿಡಿದು, ಬಲೆ ದುರಸ್ತಿ ಕಾರ್ಯದವರೆಗೆ ಈ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ತೀರ ಪ್ರದೇಶಗಳಿಂದ ಮಲ್ಪೆಗೆ ಬರುವ ವಲಸೆ ಕಾರ್ಮಿಕರು. ಬೋಟ್‌ಗಳಲ್ಲಿ ತೆರಳಿ ಮೀನುಗಾರಿಕೆ ನಡೆಸುವಲ್ಲೂ ನುರಿತರಾಗಿದ್ದಾರೆ.
ಕೂಲಿ ಕೆಲಸಗಳಿಗೆ ಸ್ಥಳೀಯ ಕಾರ್ಮಿಕ ಕೊರತೆ ಇರುವುದರಿಂದ ವಲಸೆ ಕಾರ್ಮಿಕರನ್ನೇ ಆಶ್ರಯಿಸಿರುವುದಾಗಿ ಹೇಳುತ್ತಾರೆ ಬೋಟ್ ಮಾಲೀಕರು.
ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವಿವಿಧ ಸೌಲಭ್ಯಗಳು ವಲಸೆ ಕಾರ್ಮಿಕರಿಗೂ ಸಿಗುತ್ತವೆ. ಪಿಂಚಣಿ ಯೋಜನೆ ಹಾಗೂ ಗೃಹಲಕ್ಷ್ಮಿ ಸೇರಿದಂತೆ ವಿವಿಧ ಗ್ಯಾರೆಂಟಿ ಯೋಜನೆಗಳ ಪ್ರಯೋಜನಗಳೂ ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿ ಆಯುಷ್ಮಾನ್ ಭಾರತ್ ಇಎಸ್‌ಐ ಪ್ರಯೋಜನ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.
ಮಳೆ ಇರಲಿ ಬಿಸಿಲಿರಲಿ ಟಿನ್ ಹಾಸಿದ ಜೋಪಡಿಯಲ್ಲೇ ಬದುಕಬೇಕಾದ ಅನಿವಾರ್ಯತೆ ನಮಗಿದೆ. ದುಬಾರಿ ಬಾಡಿಗೆ ಕೊಟ್ಟು ಬಾಡಿಗೆ ಮನೆಗಳಲ್ಲಿ ವಾಸಿಸಲು ನಮಗೆ ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು ಇಲ್ಲೇ ಶಾಲೆಗೆ ಸೇರಿಸಿದ್ದೇವೆ–ಚೆನ್ನಪ್ಪ ರಾಠೋಡ್ ಬಾಗಲಕೋಟೆ
ಮಳೆಗಾಲ ಮತ್ತು ಅಯ್ಯಪ್ಪ ಮಾಲಾಧಾರಣೆಯ ಋತುವಲ್ಲಿ ನಮಗೆ ಕೆಲಸ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ಮನೆ ಬಾಡಿಗೆ ಕಟ್ಟಲೂ ಪರದಾಡಬೇಕಾಗುತ್ತದೆ. ಉಳಿದಂತೆ ಪ್ರತಿದಿನ ಕೆಲಸ ಸಿಗುತ್ತದೆ. ಗುತ್ತಿಗೆದಾರರು ವಾಹನಗಳಲ್ಲಿ ನಮ್ಮನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮ ಊರಿನಲ್ಲಿ ಕೆಲಸ ಸಿಗದ ಕಾರಣ ಇಲ್ಲಿಗೆ ಕುಟುಂಬ ಸಮೇತ ಬರುತ್ತೇವೆ. ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಊರಿಗೆ ಹೋಗುತ್ತೇವೆ–ನಾರಾಯಣ ವಲಸೆ ಕಾರ್ಮಿಕ ಬಾಗಲಕೋಟೆ
ಕಟ್ಟಡ ನಿರ್ಮಾಣ ಕಾಮಗಾರಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ನಮ್ಮನ್ನೇ ಹೆಚ್ಚಾಗಿ ಕರೆಯುತ್ತಾರೆ. ನಮಗೆ ಊರಲ್ಲಿ ಕೃಷಿ ಇಲ್ಲ ಅನಿವಾರ್ಯವಾಗಿ ಬೇರೆಡೆ ದುಡಿಯಲು ಹೋಗಬೇಕು. ಎಂಟು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ.–ಪೋವಪ್ಪ ವಲಸೆ ಕಾರ್ಮಿಕ ಬಾಗಲಕೋಟೆ
ಕಾಪು: ತಾಲ್ಲೂಕಿನ ಪಡುಬಿದ್ರಿ ಕಟಪಾಡಿ ಶಿರ್ವ ಪರಿಸರದಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಮೂಲಸೌಕರ್ಯವಿಲ್ಲದೆ ಶಾಲಾ ಮೈದಾನದಲ್ಲೂ ರಾತ್ರಿ ಮಲಗುವ ಶೋಚನೀಯ ಸ್ಥಿತಿ ಇದೆ. ಕೆಲವು ಕಾರ್ಮಿಕರು ಬಾಡಿಗೆ ಕೋಣೆ ಪಡೆದುಕೊಂಡು ವಾಸಿಸುತ್ತಿದ್ದಾರೆ. ಆದರೆ ಇದು ದುಬಾರಿಯಾಗಿದೆ. ಇದರಿಂದ ಬಾಡಿಗೆ ಕೋಣೆ ಪಡೆಯಲು ಆಗದೆ ಮೈದಾನ ಹಾಗೂ ಕೆಲವೊಂದು ಕಟ್ಟಡದ ಮುಂಭಾಗದಲ್ಲೇ ವಾಸಿಸುವ ಸ್ಥಿತಿ ಇದೆ ಎನ್ನುತ್ತಾರೆ ಕಾರ್ಮಿಕರು.
ಕಾರ್ಕಳ: ನಗರದಲ್ಲಿ ಹಲವು ವರ್ಷಗಳಿಂದ ವಲಸೆ ಕಾರ್ಮಿಕರ ದಂಡು ಕಾಣಸಿಗುತ್ತದೆ. ಪ್ರತಿದಿನ ಬೆಳಿಗ್ಗೆ 7.30ರ ಸುಮಾರಿಗೆ ಇಲ್ಲಿನ ಬಸ್ ನಿಲ್ದಾಣದ ಪಕ್ಕ ದಿನದ ದುಡಿಮೆಗಾಗಿ ಕಾರ್ಮಿಕರು ಕಾಯುತ್ತಾ ನಿಂತಿರುವುದು ಸಾಮಾನ್ಯವಾಗಿದೆ. ವಿಜಯಪುರ ಗಂಗಾವತಿ ಬಾದಾಮಿ ಹಾವೇರಿ ಕೊಪ್ಪಳ ಮೊದಲಾದ ಕಡೆಯ ಕಾರ್ಮಿಕರು ದಿನಗೂಲಿಗಾಗಿ ನಗರದಲ್ಲಿ ನೆಲೆಯೂರಿದ್ದು ಹೆಚ್ಚಾಗಿ ಕಟ್ಟಡ ನಿರ್ಮಾಣ ಗದ್ದೆ ತೋಟಗಳ ಕೆಲಸ ಮಾಡುತ್ತಾರೆ. ಬೆಳಿಗ್ಗೆ 8.30ರಿಂದ ಸಂಜೆ 6ರವರೆಗೆ ದುಡಿಮೆಗೆ ಊಟ ತಿಂಡಿ ಲೆಕ್ಕ ಬಿಟ್ಟು ಪುರುಷರಿಗೆ ₹750 ಹಾಗೂ ಮಹಿಳೆಯರಿಗೆ ₹600 ಸಂಬಳ ಕೊಡುತ್ತಾರೆ ಎಂದು ಹಾವೇರಿಯ ಚಂದಪ್ಪ ಹೇಳುತ್ತಾರೆ.
ಹೆಬ್ರಿ: ಸ್ಥಳೀಯ ಕೃಷಿ ಕೂಲಿ ಕಾರ್ಮಿಕರ ಅಲಭ್ಯತೆ ದುಬಾರಿ ಸಂಬಳದ ಸಮಸ್ಯೆಯಿಂದಾಗಿ ಬಹುತೇಕ ಮಂದಿ ಈಗ ಅನ್ಯ ಜಿಲ್ಲೆ ರಾಜ್ಯಗಳ ವಲಸೆ ಕಾರ್ಮಿಕರಿಂದ ಕೃಷಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಕೃಷಿಕರು ತಮ್ಮ ತೋಟ ಗದ್ದೆಗಳ ಕೆಲಸಕ್ಕೆ ಇವರನ್ನು ನೇಮಿಸುತ್ತಿದ್ದಾರೆ. ಅಲ್ಲದೆ ಗೇರುಬೀಜ ಕಾರ್ಖಾನೆಗಳಿಗೆ ಪಶು ಆಹಾರ ತಯಾರಿಕ ಘಟಕ ಹೋಟೆಲ್‌ಗಳಿಗೆ ಕೋಳಿ ಸಾಕಣೆ ಮಾರಾಟ ಅಂಗಡಿಗಳಲ್ಲೂ ವಲಸೆ ಕಾರ್ಮಿಕರು ದುಡಿಯುತ್ತಾರೆ.
ಅಸ್ಸಾಂ ಛತ್ತೀಸಗಢ ಬಿಹಾರ ರಾಜ್ಯಗಳ ಬಹುತೇಕ ಕಾರ್ಮಿಕರು ಇಲ್ಲಿದ್ದಾರೆ. ಉತ್ತರ ಪ್ರದೇಶ ಗುಜರಾತ್ ಸಹಿತ ಇತರ ರಾಜ್ಯಗಳ ಕಾರ್ಮಿಕರೂ ಇದ್ದಾರೆ. ಹೆಚ್ಚಿನ ಕಡೆಯಲ್ಲಿ ಉದ್ಯೋಗ ನೀಡುವವರೇ ಅವರಿಗೆ ಸಂಬಳದ ಜೊತೆಗೆ ಊಟ ವಸತಿ ಸೌಕರ್ಯ ಕಲ್ಪಿಸುತ್ತಿದ್ದಾರೆ. ‘ವಲಸೆ ಕಾರ್ಮಿಕರು ಶ್ರಮ ವಹಿಸಿ ದುಡಿಯುತ್ತಾರೆ. ಹೇಳಿದ ಕೆಲಸಗಳನ್ನು ತಪ್ಪದೆ ನಿರ್ವಹಿಸುತ್ತಾರೆ. ಕೆಲಸಗಳಲ್ಲಿ ಸಮಸ್ಯೆಗಳೇ ಬರಲ್ಲ’ ಎಂದು ಗುತ್ತಿಗೆದಾರ ಶ್ರೀನಿವಾಸ ಹೆಬ್ಬಾರ್ ಹೇಳಿದರು.
‘ಉಡುಪಿ ಮಂಗಳೂರಿನಲ್ಲಿ ಉದ್ಯೋಗದ ಜೊತೆಗೆ ಉತ್ತಮ ಸಂಬಳವೂ ದೊರೆಯುತ್ತದೆ’ ಎಂದು ಕಳೆದ 10 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶದ ನೂರಾಲ್ ಹೇಳಿದರು.
ಬೈಂದೂರು: ಇಲ್ಲಿನ ಆಂಜನೇಯ ದೇವಸ್ಥಾನದ ಬಳಿ ಪ್ರತಿದಿನ ಬೆಳಿಗ್ಗೆ 7ಕ್ಕೆ ನೂರಾರು ಜನ ವಲಸೆ ಕಾರ್ಮಿಕರು ಜಮಾಯಿಸುತ್ತಾರೆ. ಉತ್ತರ ಕರ್ನಾಟಕದ ಹಾವೇರಿ ಬಾಗಲಕೋಟೆ ವಿಜಯಪುರ ಹುಬ್ಬಳ್ಳಿ ಮುಂತಾದ ಊರುಗಳಲ್ಲದೆ ಬಿಹಾರ ಉತ್ತರ ಪ್ರದೇಶ ರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಗದ್ದೆ ಕೆಲಸ ಕಲ್ಲು ಮಣ್ಣು ಸಾಗಾಟ ಮುಂತಾದ ಕೂಲಿ ಕೆಲಸಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.
ಪೂರಕ ಮಾಹಿತಿ: ಹಮೀದ್ ಪಡುಬಿದ್ರಿ, ವಾಸುದೇವ ಭಟ್, ಸುಕುಮಾರ್ ಮುನಿಯಾಲ್, ವಿಶ್ವನಾಥ ಆಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.