ADVERTISEMENT

ಲವ್ ಜಿಹಾದ್ ಕಾನೂನು ಜಾರಿ ಖಚಿತ: ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 8:29 IST
Last Updated 3 ಡಿಸೆಂಬರ್ 2020, 8:29 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಉಡುಪಿ: ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿ ನಿಶ್ಚಿತ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಮಾತನಾಡಿದ ಸಚಿವರು, ಉತ್ತರ ಪ್ರದೇಶ ಸರ್ಕಾರ ಈಚೆಗೆ ಲವ್ ಜಿಹಾದ್ ಕಾನೂನು ಜಾರಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ್ದು ಅದರ ಪ್ರತಿಯನ್ನು ಪಡೆದು ಪರಿಶೀಲಿಸಿ ಯಾವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಬೇಕು ಎಂದು ಚರ್ಚಿಸಿ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ ಎಂದು ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದರು.

ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿ ಖಚಿತ ಎಂದು ಹೇಳಿದ್ದಾರೆ. ಕಾನೂನು ಜಾರಿಗೆ ಸರ್ಕಾರದಲ್ಲಿ ಭಿನ್ನ ನಿಲುವುಗಳಿಲ್ಲ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ಮೊಘಲರ ಕಾಲದಿಂದಲೂ ಲವ್ ಜಿಹಾದ್ ಇದೆ ಎಂದು ಹೇಳಿರುವ ಸಿದ್ದರಾಮಯ್ಯ ಇನ್ನೂ ಮೊಘಲರ ಕಾಲದಲ್ಲಿಯೇ ಇದ್ದಾರೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ಡಿ.5ರಂದು ರಾಜ್ಯ ಬಂದ್ ದಿನ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಸುಪ್ರೀಂಕೋರ್ಟ್ ಬಂದ್ ಮಾಡದಂತೆ ಸೂಚನೆ ನೀಡಿದೆ. ಬಂದ್ ಮಾಡಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗಲಿದ್ದು ಬಂದ್ ಮಾಡದಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ನಾನೂ ಪ್ರತಿಭಟನಾಕಾರರಿಗೆ ಮನವಿ ಮಾಡುತ್ತೇನೆ. ಬಂದ್ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಮಾಡಲಾಗಿದೆ ಎಂದರು.

ಕೋವಿಡ್ ಹರಡುವಿಕೆ ತಡೆಯಲು ರಾತ್ರಿ ಕರ್ಫ್ಯೂ ಜಾರಿ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ. ಬದಲಿಗೆ, ಹೆಚ್ಚು ಜನ ಸೇರದಂತೆ ಎಚ್ಚರ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ಇನ್ನೆರಡು ದಿನಗಳಲ್ಲಿ ಸಭೆ ನಡೆಸಿ ಹೊಸ ವರ್ಷದ ಸಂಭ್ರಮಾಚರಣೆಗೆ ಹೆಚ್ಚು ಜನ ಸೇರದಂತೆ ತಡೆಯಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕೆಜೆ ಹಳ್ಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆಯಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.