ADVERTISEMENT

ಉಡುಪಿ: ಪರಿಷತ್ ಚುನಾವಣೆ- ಶೇ 99.48 ಮತದಾನ

ಹೆಬ್ರಿ, ಬೈಂದೂರು ತಾಲ್ಲೂಕುಗಳಲ್ಲಿ ಶೇ 100 ಮತದಾನ: ಹಕ್ಕು ಚಲಾಯಿಸಲು ಮತದಾರರ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 14:49 IST
Last Updated 10 ಡಿಸೆಂಬರ್ 2021, 14:49 IST
ಪೆರ್ಡೂರಿನ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ಮತದಾರರು.
ಪೆರ್ಡೂರಿನ ಮತಗಟ್ಟೆಯೊಂದರಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ಮತದಾರರು.   

ಉಡುಪಿ: ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ಮುಕ್ತಾಯವಾಗಿದ್ದು ಜಿಲ್ಲೆಯಲ್ಲಿ ಶೇ 99.48ರಷ್ಟು ಮತದಾನ ನಡೆದಿದೆ.

ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು ಸೇರಿ ಜಿಲ್ಲೆಯಲ್ಲಿ ಮತದಾನ ಮಾಡಲು ಅರ್ಹತೆ ಪಡೆದಿದ್ದ 2,505 ಮತದಾರರ ಪೈಕಿ 2,492 ಮತದಾರರು ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ 1,203 ಪುರುಷರು ಹಾಗೂ 1,289 ಮಹಿಳಾ ಸದಸ್ಯರು ಇದ್ದಾರೆ.

ಮತದಾನ ಮಾಡಲು ಉತ್ಸಾಹ:

ADVERTISEMENT

ಬೆಳಿಗ್ಗೆ 8 ಗಂಟೆಗೆ ಆರಂಭಗೊ೦ಡ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು ಕಂಡುಬಂತು. ಮತದಾನ ಆರಂಭವಾಗಿ ಕೇವಲ 2 ಗಂಟೆಯಲ್ಲಿ ಅಂದರೆ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ 43.91ರಷ್ಟು ಮತದಾನ ನಡೆದಿತ್ತು.

ಕುಂದಾಪುರ ತಾಲ್ಲೂಕಿನ ಆಲೂರು, ಚಿತ್ತೂರು,74 ಉಳ್ಳೂರು, ಹಾರ್ದಳ್ಳಿ-ಮಂಡಳ್ಳಿ, ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು, ಬಾರ್ಕೂರು, ಹೆಬ್ರಿ ತಾಲ್ಲೂಕಿನ ಮಾಡಾಮಕ್ಕಿ, ನಾಡ್ಪಾಲು, ಕಾರ್ಕಳ ತಾಲೂಕಿನ ಎರ್ಲಪಾಡಿ, ಹಿರ್ಗಾನ, ಕೆರ್ವಾಶೆ, ದುರ್ಗಾ, ಪಳ್ಳಿ, ನಿಟ್ಟೆ, ನಲ್ಲೂರು, ರೆಂಜಾಳ, ಬೋಳ, ನಂದಳಿಕೆ, ಮು೦ಡ್ಕೂರು ಗ್ರಾಮ ಪಂಚಾಯಿತಿಗಳಲ್ಲಿ ಶೇ 100 ಮತದಾನ ನಡೆದಿತ್ತು. ಬಹುತೇಕ ಎಲ್ಲ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದ ದೃಶ್ಯ ಕಂಡುಬಂತು.

ಮಧ್ಯಾಹ್ನ 12 ಗಂಟೆಯ ವೇಳೆಗೆ ಬೈಂದೂರು ತಾಲ್ಲೂಕಿನ 9, ಕುಂದಾಪುರ ತಾಲ್ಲೂಕಿನ 22, ಬ್ರಹ್ಮಾವರ ತಾಲ್ಲೂಕಿನ 20, ಉಡುಪಿ ತಾಲ್ಲೂಕಿನ 10, ಕಾಪು ತಾಲ್ಲೂಕಿನ 12, ಹೆಬ್ರಿ ತಾಲ್ಲೂಕಿನ 5 , ಕಾರ್ಕಳ ತಾಲ್ಲೂಕಿನ 12 ಗ್ರಾ,ಮ ಪಂಚಾಯಿತಿಗಳಲ್ಲಿ ಶೇ 100 ಮತದಾನ ನಡೆದಿತ್ತು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಹೆಬ್ರಿ ತಾಲ್ಲೂಕಿನಲ್ಲಿ ಶೇ 100 ಮತದಾನವಾಗಿತ್ತು.

ಪರಿಷತ್ ಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 158 ಮತಗಟ್ಟೆಗಳನ್ನು ತೆರೆದು ಮತಗಟ್ಟೆಗೆ ಒಬ್ಬರಂತೆ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮೈಕ್ರೋ ಅಬ್ಸರ್‌ವರ್‌ಗಳು, ರೂಫ್ ಡಿ, ರೂಟ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಚುನಾವಣಾ ಆಯೋಗದ ನಿರ್ದೇಶನ ಹಾಗೂ ಕೋವಿಡ್‌ ಮಾರ್ಗಸೂಚಿಗಳಂತೆ ಮತದಾನ ಪ್ರಕ್ರಿಯೆ ನಡೆದಿದ್ದು, ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 8ಕ್ಕೆ ಆರಂಭವಾದ ಮತದಾನ ಸಂಜೆ 4ಕ್ಕೆ ಮುಕ್ತಾಯವಾಯಿತು. 130 ಸಾಮಾನ್ಯ, 26 ಸೂಕ್ಷ್ಮ ಹಾಗೂ 2 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ತೆರೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.