ADVERTISEMENT

ಮೋದಿ ಮತ್ತೆ ಪ್ರಧಾನಿಯಾಗಲಿ; ಜೆಪಿಗೆ ಟಿಕೆಟ್‌ ಸಿಗಲಿ

ಮೋದಿ ಅಭಿಮಾನಿಗಳಿಂದ ಶ್ರೀಕೃಷ್ಣಮಠದಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 14:52 IST
Last Updated 14 ಮಾರ್ಚ್ 2019, 14:52 IST
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ, ಉಡುಪಿ ಚಿಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್‌ ಸಿಗಲಿ ಎಂದು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಶ್ರೀಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.‌
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ, ಉಡುಪಿ ಚಿಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್‌ ಸಿಗಲಿ ಎಂದು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಶ್ರೀಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.‌   

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ, ಉಡುಪಿ ಚಿಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್‌ ಸಿಗಲಿ ಎಂದು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಶ್ರೀಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.‌

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಚೇರ್ಕಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹರೀಶ್‌ ಶೆಟ್ಟಿ, ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಶ್ರೀಕೃಷ್ಣನ ಆಶೀರ್ವಾದ ಸಿಗಬೇಕು. ಕ್ಷೇತ್ರದ ಜನರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುವ ಜಯಪ್ರಕಾಶ್ ಹೆಗ್ಡೆ ಅವರಿಗೂ ಈ ಬಾರಿ ಬಿಜೆಪಿ ಟಿಕೆಟ್‌ ಸಿಗಬೇಕು ಎಂದು ಚಂದ್ರಮೌಳೀಶ್ವರ ಹಾಗೂ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.

‘ಬೇರೆಯವರಿಗೆ ಟಿಕೆಟ್‌ ಕೊಡಬೇಡಿ ಎಂದು ಹೇಳುವುದಿಲ್ಲ, ಜಯಪ್ರಕಾಶ್ ಹೆಗ್ಡೆ ಅವರಿಗೆ ಕೊಡಿ ಎಂಬ ಒತ್ತಾಯ ಮಾತ್ರ ನಮ್ಮದು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜೆಪಿ ಪರವಾಗಿ ಅಭಿಯಾನ ನಡೆಯುತ್ತಿದೆ. ಕ್ಷೇತ್ರದ ಮತದಾರರ ಭಾವನೆಗಳಿಗೆ ಬೆಲೆ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪಕ್ಷದ ಮುಖಂಡ ರಾಘವೇಂದ್ರ ಕಿಣಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಕಾರ್ಯಕರ್ತರ ಉದ್ದೇಶ. ಹಾಗೆಯೇ ಜನಾಭಿಪ್ರಾಯ ಹೊಂದಿರುವ, ಎಲ್ಲರೊಟ್ಟಿಗೆ ಬೆರೆಯುವ, ಹಿರಿಯ ನಾಯಕರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್‌ ಸಿಗಬೇಕು ಎಂಬುದು ಕ್ಷೇತ್ರದ ಕಾರ್ಯಕರ್ತರ ಒತ್ತಾಯ’ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ಶಕ್ತಿಮೀರಿ ಕೆಲಸಮಾಡಿದ್ದಾರೆ. ಆದರೆ, ಈ ಬಾರಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂಬುದು ಎಲ್ಲರ ಒತ್ತಾಯ. ಅದಕ್ಕೆ ಮನ್ನಣೆ ಸಿಗಲಿದೆ ಎಂಬ ವಿಶ್ವಾಸ ಇದೆ. ಇದುವರೆಗೆ ಯಾರಿಗೂ ಟಿಕೆಟ್ ಅಂತಿಮವಾಗಿಲ್ಲ. ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್‌ ಯಾರಿಗೆ ನೀಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಈಗಾಗಲೇ ಉಡುಪಿ–ಚಿಕಮಗಳೂರು ಕ್ಷೇತ್ರದಲ್ಲಿ ವರಿಷ್ಠರು ಆಂತರಿಕ ಸಮೀಕ್ಷೆ ನಡೆಸಿದ್ದಾರೆ. ಕಾರ್ಯಕರ್ತರ ಹಾಗೂ ಮತದಾರರ ಆಶಯದಂತೆ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದು ರಾಘವೇಂದ್ರ ಕಿಣಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಬಾಲಕೃಷ್ಣ ಶೆಟ್ಟಿ, ಪೃಥ್ವಿರಾ‌ಜ್ ಶೆಟ್ಟಿ, ಯೋಗೀಶ್ ಸಾಲ್ಯಾನ್, ಅಶೋಕ್‌, ಗಿರೀಶ್ ಕುಂದಾಪುರ, ಗೋಪಾಲ್ ಬಂಗೇರ, ಚಂದ್ರಶೇಖರ್ ಶೆಟ್ಟಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.