ADVERTISEMENT

ದೈವ ನರ್ತಕರಿಗೆ ಮಾಸಾಶನ: ನೋಂದಣಿ ಆರಂಭ

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 14:40 IST
Last Updated 22 ಅಕ್ಟೋಬರ್ 2022, 14:40 IST

ಉಡುಪಿ: 58 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ₹ 2,000 ಮಾಸಾಶನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕರಾವಳಿ ಸೇರಿ ಐದಾರು ಜಿಲ್ಲೆಗಳಲ್ಲಿರುವ ದೈವ ನರ್ತಕರ ಮಾಹಿತಿಯನ್ನು ಸ್ಥಳೀಯ ದೈವ ನರ್ತಕರ ಸಂಘಗಳಿಂದ ಪಡೆಯಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾಸಾಶನ ನೀಡಲಾಗುವುದು ಎಂದರು.

ರಾಜ್ಯದ ತುಳು, ಲಂಬಾಣಿ, ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಸಂಸದರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಆದರೆ, ಇದುವರೆಗೂ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಇತರೆ ರಾಜ್ಯಗಳಿಂದಲೂ 180 ಭಾಷೆಗಳನ್ನು 8ನೇ ಪರಿಚ್ಚೇದದಡಿ ಸೇರಿಸುವಂತೆ ಪ್ರಸ್ತಾವ ಸಲ್ಲಿಕೆಯಾಗಿದೆ. ಪಟ್ಟಿ ದೊಡ್ಡದಿರುವ ಕಾರಣ ತಡವಾಗುತ್ತಿದೆ ಎಂದರು.

ADVERTISEMENT

ಹಿಂದೆ, ತುಳು ಅಕಾಡೆಮಿ ಹಾಗೂ ಶಿಕ್ಷಣ ಇಲಾಖೆಯಿಂದ ತುಳು ಶಿಕ್ಷಕರ ನೇಮಕಾತಿ ಮಾಡಿಕೊಂಡು ಗೌರವ ಧನ ನೀಡಲಾಗುತ್ತಿತ್ತು. ಕೋವಿಡ್‌ ಸಂದರ್ಭದಲ್ಲಿ ಗೌರವ ಧನ ಬಿಡುಗಡೆಯಾಗಿರಲಿಲ್ಲ. ಬಾಕಿ ಗೌರವಧನ ಬಿಡುಗಡೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತುಳು ಶಿಕ್ಷಕರ ನೇಮಕಾತಿ ವಿಚಾರ ಶಿಕ್ಷಣ ಇಲಾಖೆಗೆ ಬಿಟ್ಟಿದ್ದು ಎಂದು ಸಚಿವರು ತಿಳಿಸಿದರು.

ತುಳುವನ್ನು ರಾಜ್ಯಭಾಷೆಯನ್ನಾಗಿ ಮಾಡಲು ರಚಿಸಲಾಗಿದ್ದ ಸಮಿತಿಯ ಶಿಫಾರಸನ್ನು ಕಾನೂನು ವಿಭಾಗಕ್ಕೆ ಕಳುಹಿಸಲಾಗಿದ್ದು, ಸಚಿವ ಸಂಪುಟದಲ್ಲಿ ಮಂಡನೆಯಾದ ಬಳಿಕ ಅಧಿಕೃತವಾಗಿ ರಾಜ್ಯಭಾಷೆಯನ್ನಾಗಿ ಘೋಷಿಸಲಾಗುವುದು ಎಂದು ಸಚಿವರು ತಿಳಿಸಿದರು.

ಗ್ರಾಮ ಪಂಚಾಯಿತಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಇಂಧನ ಇಲಾಖೆಗೆ ₹ 6,000 ಕೋಟಿ ವಿದ್ಯುತ್ ಬಿಲ್ ಬಾಕಿ ಬರಬೇಕಿದ್ದು, ಈ ಸಮಸ್ಯೆ ಪರಿಹರಿಸಲು ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಪ್ರೀಪೇಯ್ಡ್‌ ಮೀಟರ್ ಅಳವಡಿಸಲಾಗುವುದು. ಹಿಂದೆ, ಸರ್ಕಾರಿ ಇಲಾಖೆಗಳು ಬಾಕಿ ಉಳಿಸಿಕೊಂಡಿದ್ದ 7 ರಿಂದ 8 ಸಾವಿರ ಕೋಟಿಯನ್ನು ಮುಖ್ಯಮಂತ್ರಿಗಳು ಪಾವತಿಸಿದ್ದು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬೆಳಕು ಯೋಜನೆಯಡಿ ವಿದ್ಯುತ್ ಇಲ್ಲದೆ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಖಾಸಗಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ತಾಂತ್ರಿಕ ಸಮಸ್ಯೆಯಿಂದ ಸಂಪರ್ಕ ನೀಡಲಾಗುತ್ತಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡುವೆ ವೈರುಧ್ಯಗಳಿಲ್ಲ. ದೀಪಾವಳಿ ಮುಗಿದ ನಂತರ ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಸಭೆ ನಡೆಸಲಾಗುವುದು. ಮುಖ್ಯಮಂತ್ರಿ ಬಜೆಟ್‌ನಲ್ಲಿ ₹ 20 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಇದನ್ನು ಬಳಸಿಕೊಂಡು ಅದ್ಧೂರಿ ಆಚರಣೆ ಮಾಡಲಾಗುವುದು. ಈ ಸಂಬಂಧ ಸಾಹಿತ್ಯ ಪರಿಷತ್ ಅಧ್ಯಕ್ಷರ ಜತೆ ಚರ್ಚಿಸಲಾಗುವುದು ಎಂದರು.

ಕನ್ನಡದ ಸಮಗ್ರ ಮಸೂದೆ ತರಲಾಗುತ್ತಿದ್ದು ಜಾರಿಯಾದರೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲಿದೆ. ಎಲ್ಲ ಇಲಾಖೆಗಳ ಆದೇಶ ಕನ್ನಡದಲ್ಲಿಯೇ ಪ್ರಕಟವಾಗಲಿದೆ ಎಂದರು.

‘ನಂಬಿಕೆ, ಶ್ರದ್ಧೆಇಲ್ಲದವರಿಂದ ಟೀಕೆ’
ದೈವಗಳು ತುಳುನಾಡಿನ ಜನರ ಶ್ರದ್ಧೆ ಹಾಗೂ ನಂಬಿಕೆಗಳಾಗಿವೆ. ನಂಬಿಕೆ, ಶ್ರದ್ಧೆಯ ಮೇಲೆಯೇ ಇಲ್ಲಿನ ಜನ ಬದುಕುತ್ತಿದ್ದಾರೆ. ನಂಬಿಕೆ ಹಾಗೂ ಸಂಸ್ಕೃತಿ ಇಲ್ಲದವರು ತುಳುನಾಡಿನ ಆಚರಣೆ, ಸಂಸ್ಕೃತಿಯ ವಿರುದ್ಧ ಮಾತನಾಡುತ್ತಾರೆ. ಕರಾವಳಿಯ ದೈವಾರಾಧನೆಯನ್ನು ಕಾಂತಾರ ಚಿತ್ರದಲ್ಲಿ ಅತ್ಯುತ್ತಮವಾಗಿ ಬಿಂಬಿಸಲಾಗಿದೆ. ನಟನೆಯ ಜತೆಗೆ ದೈವಗಳ ಕೃಪೆಯ ಕಾರಣಕ್ಕೆ ಚಿತ್ರದ ದೊಡ್ಡ ಯಶಸ್ಸು ಕಂಡಿದೆ.

‘ತಡವಾಗಿ ಹೆಚ್ಚೆತ್ತುಕೊಂಡ ಕಾಂಗ್ರೆಸ್‌’
ಕಾಂಗ್ರೆಸ್‌ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ತಡವಾಗಿ ಎಚ್ಚೆತ್ತುಕೊಂಡಿದೆ. ಗಾಂಧಿ ಕುಟುಂಬದ ಕೈನಲ್ಲಿ ಅಧಿಕಾರ ಇರಲೇಬೇಕು ಎಂಬ ಕಾರಣಕ್ಕೆ ನೆಪಮಾತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. 75 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್‌ನಲ್ಲಿ ಮತದಾರರ ಪಟ್ಟಿ ಸಿಕ್ಕಿದೆ. ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಲೋಪಗಳು ನಡೆದಿವೆ ಎಂದು ಸ್ವತಃ ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಆರೋಪಿಸಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದರು.

‘ಶೇ 33ರಷ್ಟು ಮಹಿಳಾ ಮೀಸಲಾತಿ’
ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಬೂತ್ ಮಟ್ಟದಿಂದ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತದೆ. ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿ ಅಧಿಕಾರ ಹಂಚಿಕೆ ಮಾಡುವಾಗ ಶೇ 33ರಷ್ಟು ಮಹಿಳಾ ಮೀಸಲಾತಿ ನೀಡಲಾಗುತ್ತಿದೆ. ಅನಿವಾರ್ಯವಾದರೆ ಉಡುಪಿ ಜಿಲ್ಲೆಯಲ್ಲಿಯೂ ಮಹಿಳಾ ಅಭ್ಯರ್ಥಿಗೆ ವಿಧಾನಸಭಾ ಚುನಾವಣೆಗೆ ಟಿಕೆಟ್‌ ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.

‘ಶಿವರಾಜ್ ಪಾಟೀಲ್ ಹೇಳಿಕೆ ಖಂಡನೀಯ’
ಭಗವದ್ಗೀತೆಯನ್ನು ಜಿಹಾದ್‌ಗೆ ಹೋಲಿಸಿರುವ ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್‌ ಹೇಳಿಕೆ ಖಂಡನೀಯ. ಹೇಳಿಕೆ ವೈಯಕ್ತಿಕವೇ ಅಥವಾ ಕಾಂಗ್ರೆಸ್ ಪಕ್ಷದ್ದೇ ಎಂಬುದು ಸ್ಪಷ್ಟವಾಗಬೇಕು. ಪಿಎಫ್‌ಐ ಮುಖವಾಡಗಳು ಬಯಲಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಇಂತಹ ಬೇಜಬ್ದಾರಿ ಹೇಳಿಕೆ ನೀಡಿರುವುದು ಅಕ್ಷಮ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.