ADVERTISEMENT

ಕೋಟ | ಮೂಡುಗಿಳಿಯಾರು ಶಾಲೆಯಲ್ಲಿ ವ್ಯಾಪಾರ ಮೇಳ

ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:44 IST
Last Updated 28 ಜನವರಿ 2026, 7:44 IST
ಮೂಡುಗಿಳಿಯಾರು ಶಾಲೆಯಲ್ಲಿ ವ್ಯಾಪಾರ ಮೇಳವನ್ನು ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು
ಮೂಡುಗಿಳಿಯಾರು ಶಾಲೆಯಲ್ಲಿ ವ್ಯಾಪಾರ ಮೇಳವನ್ನು ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು   

ಕೋಟ (ಬ್ರಹ್ಮಾವರ): ಕೋಟ ಮೂಡುಗಿಳಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಪಾರ ಮೇಳ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ವ್ಯಾಪಾರದ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಕೌಶಲಾಭಿವೃದ್ಧಿ, ಸ್ವಉದ್ಯೋಗ ಸೃಷ್ಟಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಂತೆ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಶಾಲಾ ಪ್ರಾಂಗಣದೊಳಗೆ ಮಿನಿಸಂತೆಯ ವಾತಾವರಣ ಸೃಷ್ಟಿಸಿದ್ದರು. ಬಸಳೆ, ಮೂಲಂಗಿ, ಹರಿವೆ ಸೊಪ್ಪು, ಬೀಟ್‌ರೂಟ್‌, ಕೊತ್ತಂಬರಿ ಸೊಪ್ಪು, ನುಗ್ಗೆ ಸೇರಿದಂತೆ ಹಲವು ತರಕಾರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ವಿದ್ಯಾರ್ಥಿಗಳು ₹16,944 ಬಂಡವಾಳ ಹಾಕಿ ₹27,545 ಮೊತ್ತದ ವ್ಯಾಪಾರ ನಡೆಸಿ ₹10,601 ಲಾಭ ಗಳಿಸಿದರು.

ಬೆಳಿಗ್ಗೆ ಪ್ರಾರಂಭಗೊಂಡ ಸಂತೆಯಲ‌್ಲಿ ಶಾಲಾ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳ ಪೋಷಕರು ಭಾಗಿಯಾಗಿ ತರಕಾರಿ, ಇನ್ನಿತರ ಪರಿಕರಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು ಗ್ರಾಮೀಣ ಭಾಷೆಯಲ್ಲಿ ‘ಹೊಯ್ ಇಲ್ ಬನ್ನಿ... ಇಲ್ ತಕಣಿ ಕಡ್ಮಿ ರೇಟ್ ಇಲ್ ಇತ್ ಕಾಣಿ...’ ಎಂದು ಕೂಗುತ್ತಿದ್ದುದು ಗ್ರಾಮಸ್ಥರನ್ನು ಪುಳಕಗೊಳಿಸಿತ್ತು. 

ADVERTISEMENT

ವಿಶೇಷತೆ: ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ಲಾಸ್ಟಿಕ್ ಜರಿಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಕೋಟದ ಪಂಚವರ್ಣ ಸಂಘಟನೆಗೆ ಬೆಂಗಳೂರಿನ ಕ್ಯಾಪ್ಸ್ ಫೌಂಡೇಷನ್ ಕೊಡಮಾಡಿದ ಬಟ್ಟೆ ಚೀಲಗಳನ್ನು ಖರೀದಿದಾರರಿಗೆ ನೀಡಿ ‘ಪ್ಲಾಸ್ಟಿಕ್ ಬಳಕೆ ಬದಲು ಬಟ್ಟೆ ಚೀಲ ಬಳಸಿ’ ಎಂದು ಸಲಹೆ ನೀಡಿದರು. 

ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಮಾರ್ಗದರ್ಶನ ಮಾಡಿದ್ದರು. ವ್ಯಾಪಾರ ಮೇಳವನ್ನು ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ವಸಂತಿ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದರು. ನಿವೃತ್ತ ಮುಖ್ಯಶಿಕ್ಷಕ ರಮೇಶ ಭಟ್, ಶಿಕ್ಷಕರಾದ ಶೇಖರ ಪೂಜಾರಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಜೂಲಿಯಟ್ ಕ್ರಾಸ್ತ, ವಿಜಯ ಕುಮಾರ್, ಪಂಚವರ್ಣ ಸಂಘಟನೆಯ ಲಲಿತಾ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಯೋಗೇಂದ್ರ ಪೂಜಾರಿ ಭಾಗವಹಿಸಿದ್ದರು.

₹16,944 ಬಂಡವಾಳ ಹಾಕಿ ₹27,545 ಮೊತ್ತದ ವ್ಯಾಪಾರ ₹10,601 ಲಾಭ ಗಳಿಸಿದ ವಿದ್ಯಾರ್ಥಿಗಳು

ವ್ಯಾಪಾರ ವ್ಯವಹಾರ ಜ್ಞಾನ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ಶಾಲೆಯಲ್ಲಿ ನಿರಂತರ ನಡೆಯಬೇಕು. ಇದರಿಂದ ಮಕ್ಕಳ ಮನೋಸ್ಥೈರ್ಯ ಜ್ಞಾನ ವೃದ್ಧಿ ಸ್ವಉದ್ಯಮ ಜೀವನ ನಿರ್ವಹಣೆಗೆ ಪ್ರೇರಕ ಶಕ್ತಿಯಾಗುತ್ತದೆ

-ಯೋಗೇಂದ್ರ ಪೂಜಾರಿ ಎಸ್‌ಡಿಎಂಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.