ADVERTISEMENT

ಕನ್ನಡ ವಿಮರ್ಶೆ, ಸಾಹಿತ್ಯ ಚಿಂತನೆಯಲ್ಲಿ ರಾಜಕೀಯ

ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದ್ವಾಂಸ ಪ್ರಭಾಕರ ಜೋಶಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 10:00 IST
Last Updated 8 ಮಾರ್ಚ್ 2020, 10:00 IST
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಕೊಡಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಪ್ರಭಾಕರ ಜೋಶಿ ಅವರಿಗೆ ಪ್ರದಾನ ಮಾಡಲಾಯಿತು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಕೊಡಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಪ್ರಭಾಕರ ಜೋಶಿ ಅವರಿಗೆ ಪ್ರದಾನ ಮಾಡಲಾಯಿತು.   

ಉಡುಪಿ: ಪ್ರಸ್ತುತ ಯಕ್ಷಗಾನ ಬಹುವಿಧವಾಗಿ ಬೆಳೆದು ನಿಂತಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ವಿಮರ್ಶಾ ಪಂಥಕ್ಕೂ ಯಕ್ಷಗಾನಕ್ಕೂ ಸಂಬಂಧವಿಲ್ಲದಂತಾಗಿದ್ದು, ಯಕ್ಷಗಾನದಲ್ಲಿ ವಿಮರ್ಶಾ ಪಂಥ ಬೆಳೆದರೆ ಮುಳಿಯ ತಿಮ್ಮಪ್ಪಯ್ಯನವರಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಕೊಡಮಾಡುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಾಮೂಹಿಕವಾಗಿದ್ದ ಯಕ್ಷಗಾನ ವೈಯಕ್ತಿಕವಾಗುತ್ತಿರುವ ಕಾಲಘಟ್ಟದಲ್ಲಿ ತಿಮ್ಮಪ್ಪಯ್ಯನವರ ವ್ಯಕ್ತಿತ್ವ, ಯೋಗ್ಯತೆ, ಕೃತಿಗಳು ಹಾಗೂ ಬದುಕಿದ ರೀತಿ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಂಸ್ಕೃತ ವಿದ್ವಾಂಸರಾಗಿದ್ದ ತಿಮ್ಮಪ್ಪಯ್ಯನವರು ಕನ್ನಡದಲ್ಲಿ ಸಂಸ್ಕೃತದ ಅತಿರೇಕದ ಬಳಕೆ ತೊಂದರೆ ಎಂದು ಹೇಳಿದ್ದರು. ಜತೆಗೆ, ಕನ್ನಡಾಂತರ್ಗತ ತುಳುವನ್ನು ಬಲವಾಗಿ ಪ್ರತಿಪಾದನೆ ಮಾಡಿದ್ದರು ಎಂದರು.

ಯೋಗ್ಯತೆಗೂ ಮೀರಿದ ಮನ್ನಣೆ ನನಗೆ ಸಿಕ್ಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಣ್ಣ ಸಾಧನೆಗೆ ಮುಳಿಯ ತಿಮ್ಮಪ್ಪಯ್ಯನವರ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಸಂತಸವಾಗಿದೆ. ಕರಾವಳಿಯ ಜನರು ತೋರಿಸಿದ ಪ್ರೀತಿಗೆ ಋಣಿಯಾಗಿದ್ದೇನೆ ಎಂದರು.

ವಿದ್ವಾಂಸರಾದ ಪ್ರೊ.ಬಿ.ಎ. ವಿವೇಕ ರೈ ಮಾತನಾಡಿ, ಸಂಶೋಧನೆಗಳಿಗೆ ಅಲ್ಪ ಅಥವಾ ಅರ್ಧ ವಿರಾಮಗಳಿಲ್ಲ. ಕೊನೆ ಕ್ಷಣದವರೆಗೂ ನಡೆಯವಂಥದ್ದು ಸಂಶೋಧನೆ. ಉಜಿರೆ, ಮಂಗಳೂರು, ಉಡುಪಿಯ ಸಂಶೋಧನಾ ಕೇಂದ್ರಗಳಲ್ಲಿ ನಿರಂತರ ಸಂಶೋಧನಾ ಚಟುವಟಿಕೆಗಳು ನಡೆಯಬೇಕು ಎಂದರು.

ಜಾತಿ ಎನ್ನುವುದು ಕಠಾರಿಯೂ, ಗುರಾಣಿಯೂ ಆಗಿರುವ ಇಂದಿನ ಸಂದರ್ಭದಲ್ಲಿ ಬರಹಗಳಲ್ಲಿ ಜಾತಿಯ ವಿಮರ್ಶೆಗೂ ತೊಡಗಿಕೊಂಡ ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯವನ್ನು ಅವಲೋಕಿಸಬೇಕಿದೆ. ಅವರಅಧ್ಯಯನ ಮಾದರಿ ಅನುಕರಣೆಯಾಗಬೇಕು ಎಂದರು.

ಅಕಾಡೆಮಿ ಆಫ್ ಜನರಲ್ ಎಜುಕೇಷನ್‌ ಮಣಿಪಾಲದ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್, ಪ್ರೊ.ಎಂ.ಎಲ್. ಸಾಮಗ ಹಾಗೂ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಮಾತನಾಡಿದರು.

ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಮನೋರಮ ಎಂ.ಭಟ್, ಮುಳಿಯ ತಿಮ್ಮಪ್ಪಯ್ಯನವರ ಮಕ್ಕಳಾದ ಗೋಪಾಲಕೃಷ್ಣ ಭಟ್, ಮುಳಿಯ ರಾಘವಯ್ಯ ಉಪಸ್ಥಿತರಿದ್ದರು. ಭ್ರಮರಿ ಶಿವಪ್ರಕಾಶ ಸ್ವಾಗತ ಗೀತೆ ಹಾಡಿದರು. ಸುಶ್ಮಿತಾ ವಂದಿಸಿದರು. ಡಾ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.