ADVERTISEMENT

ಉಡುಪಿ: ಉದ್ಯಮ ಪರವಾನಗಿ ಶುಲ್ಕ ಹಚ್ಚಳಕ್ಕೆ ವಿರೋಧ; ಶುಲ್ಕ ಇಳಿಕೆಗೆ ಒತ್ತಾಯ

ನಗರಸಭೆ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 13:49 IST
Last Updated 26 ಫೆಬ್ರುವರಿ 2021, 13:49 IST
ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.   

ಉಡುಪಿ: ಪೌರಾಡಳಿತ ಕಾಯ್ದೆಯ ನಿಯಮಗಳ ಪ್ರಕಾರ ಉದ್ಯಮ ಪರವಾನಗಿಗೆ ಗರಿಷ್ಠ ₹ 500 ಶುಲ್ಕ ವಿಧಿಸಲು ಮಾತ್ರ ಅವಕಾಶವಿದ್ದರೂ, ನಿಗದಿಗಿಂತ ಹೆಚ್ಚು ಉದ್ಯಮ ಪರವಾನಗಿ ಶುಲ್ಕ ವಸೂಲಿಮಾಡುತ್ತಿದೆ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ಹೊರಹಾಕಿದರು.

ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಕೃಷ್ಣರಾವ್ ಕೊಡಂಚ, ನಗರಸಭೆ ವಿಧಿಸಿರುವ ಉದ್ಯಮ ಪರವಾನಗಿ ಶುಲ್ಕದಿಂದ ಉದ್ಯಮದಾರರಿಗೆ ಹೊರೆಯಾಗಿದೆ. ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ನಗರಸಭೆ ವ್ಯಾಪ್ತಿಯ 2014ರ ಕೌನ್ಸಿಲ್ ನಿರ್ಣಯದ ಪ್ರಕಾರ ಉದ್ಯಮ ಪರವಾನಿಗೆ ಶುಲ್ಕ ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಗೆಜೆಟ್ ಅಧಿಸೂಚನೆ ಬಾರದಿದ್ದರೂ ನಗರಸಭೆಯಿಂದ ಉದ್ಯಮ ಪರವಾನಿಗೆ ಪರಿಷ್ಕೃತ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸದಸ್ಯರು ದೂರಿದರು.

ADVERTISEMENT

ನಗರ ವಿಸ್ತಾರವಾಗಿ ಬೆಳೆದಿದ್ದು, ದೊಡ್ಡ ಕಂಪೆನಿಗಳು, ಉದ್ಯಮಗಳು, ಜ್ಯುವೆಲ್ಲರಿ ಮಾರಾಟ ಮಳಿಗೆಗಳು ನಗರದಲ್ಲಿವೆ. ಉದ್ಯಮ ಪರವಾನಗಿಯಿಂದ ನಗರಸಭೆಗೆ ಆದಾಯ ಬರುತ್ತಿದೆ ಎಂದು ಅಧಿಕಾರಿಗಳು ನಿರ್ಧಾರವನ್ನು ಸಮರ್ಥಿಸಿಕೊಂಡರು.ಇದಕ್ಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಸುಮಿತ್ರಾ ನಾಯಕ್‌ ಸರ್ಕಾರದ ಅಧಿಸೂಚನೆಯ ಬಳಿಕ ಉದ್ಯಮ ಪರವಾನಿಗೆ ಶುಲ್ಕ ಪರಿಷ್ಕರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸದಸ್ಯರಾದ ಗಿರೀಶ್ ಅಂಚನ್‌ ಮಾತನಾಡಿ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಉದ್ಯಾನದಲ್ಲಿ ಆಟವಾಡುವ ಮಕ್ಕಳ ಮೇಲೆ, ಬೈಕ್ ಸವಾರರ ಮೇಲೆ ದಾಳಿ ಮಾಡುತ್ತಿವೆ. ಬೀದಿ ನಾಯಿಗಳ ಉಪಟಳಕ್ಕೆ ತಡೆಹಾಕಬೇಕು. ನಗರಸಭೆಯಿಂದ ನಡೆಯುವ ಶ್ವಾನಗಳ ಸಂತಾನ ಹರಣ ಚಿಕಿತ್ಸೆ ಸರಿಯಾಗಿ ನಡೆಯಬೇಕು ಎಂದು ಒತ್ತಾಯಿಸಿದರು.

ಕಲ್ಮಾಡಿ ಪ್ರದೇಶದಲ್ಲಿ ಹಲವು ಮನೆಗಳಿಗೆ ಶೌಚಗುಂಡಿಗಳಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಸುಂದರ್ ಕಲ್ಮಾಡಿ ಒತ್ತಾಯಿಸಿದರು. ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ತಿಳಿಸಿದರು. ವಲಸೆ ಕಾರ್ಮಿಕರು ವಾಸವಿರುವ ಪ್ರದೇಶದಲ್ಲಿ ಸೂಕ್ತ ಮೂಲಸೌಕರ್ಯ, ಶೌಚಗೃಹ, ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹಲವು ಸದಸ್ಯರು ಒತ್ತಾಯಿಸಿದರು.

ವಲಸೆ ಕಾರ್ಮಿಕರಿಗೆ ಬಾಡಿಗೆ ನೀಡಿರುವ ಮಾಲೀಕರ ಸಭೆ ಕರೆದು ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಸೂಚನೆ ನೀಡಲಾಗುವುದು ಎಂದು ಪೌರಾಯುಕ್ತ ಉದಯಕುಮಾರ್ ಶೆಟ್ಟಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.