ADVERTISEMENT

ಉದ್ಯಮಿ ಕೊಲೆ ಪ್ರಕರಣ: ನಾಲ್ವರ ಬಂಧನ

ಉಡುಪಿ: ಮುಂಬೈ ಮೂಲದ ಹೋಟೆಲ್ ಉದ್ಯಮಿ ವಶಿಷ್ಟ ಸತ್ಯನಾರಾಯಣ ಯಾದವ್ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 8:51 IST
Last Updated 12 ಫೆಬ್ರುವರಿ 2020, 8:51 IST

ಉಡುಪಿ: ಮುಂಬೈ ಮೂಲದ ಹೋಟೆಲ್ ಉದ್ಯಮಿ ವಶಿಷ್ಟ ಸತ್ಯನಾರಾಯಣ ಯಾದವ್ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಹುಸ್‌ಮನ್‌ಪುರ ಮೂಲದ ಸುಮಿತ್ ಮಿಶ್ರಾ, ಸುರತ್ಕಲ್‌ನಅಬ್ದುಲ್ ಶುಕೂರ್, ಮಂಗಳೂರಿನ ತೆಂಕಮಿಜಾರಿನ ಅವಿನಾಶ್ ಕರ್ಕೆರಾ, ಕುಂಜಿಬೆಟ್ಟು ಶಿವಳ್ಳಿಯ ಮೊಹಮ್ಮದ್ ಶರೀಪ್ ಬಂಧಿತ ಆರೋಪಿಗಳು.

ಆರೋಪಿಗಳ ಪೈಕಿ ಸುಮಿತ್ ಮಿಶ್ರಾ ಮೃತ ವಶಿಷ್ಟ ಯಾದವ್‌ ಮಾಲೀಕತ್ವದ ಮುಂಬೈನ ಮಾಯಾ ಬಾರ್‌ನಲ್ಲಿ ಹಿಂದೆ ಕೆಲಸ ಮಾಡಿಕೊಂಡಿದ್ದ. ಮೂರು ತಿಂಗಳ ಹಿಂದಷ್ಟೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ. ಇನ್ನುಳಿದ ಮೂವರು ಆರೋಪಿಗಳುಎಕೆಎಂಎಸ್ ಬಸ್‌ನ ಉದ್ಯೋಗಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಭಾನುವಾರ ರಾತ್ರಿ ವಶಿಷ್ಟರನ್ನು ಕೊಲೆಮಾಡಿದ ಆರೋಪಿಗಳು ಶವವನ್ನು ಹಿರಿಯಡ್ಕದ ಬೆಳ್ಳಂಪಳ್ಳಿಯ ರಸ್ತೆ ಬದಿಯ ಪೊದೆಗೆ ಎಸೆದು ಪರಾರಿಯಾಗಿದ್ದರು. ಎಸ್‌ಪಿ ವಿಷ್ಣುವರ್ಧನ್‌ ಪ್ರಕರಣದ ತನಿಖೆಗೆ ಬ್ರಹ್ಮಾವರ ಸರ್ಕಲ್ ಇನ್‌ಸ್ಪೆಕ್ಟರ್ಅನಂತ ಪದ್ಮನಾಭ ಹಾಗೂ ಹಿರಿಯಡ್ಕ ಪಿಎಸ್‌ಐ ಸುಧಾಕರ ತೋನ್ಸೆ ಅವರ ನೇತೃತ್ವ ವಿಶೇಷ ತಂಡ ರಚಿಸಿದ್ದರು.

ಕೃತ್ಯಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿಎಎಸ್ಐ ಗಂಗಪ್ಪ, ಜಯಂತ, ಎಚ್‌ಸಿಗಳಾದ ಯಶವಂತ್, ಸದಾಶಿವ, ರಘು, ಕಾನ್‌ಸ್ಟೆಬಲ್‌ಗಳಾದ ದಿನೇಶ್, ಇಂದ್ರೇಶ್, ಬಸವರಾಜ್, ನಿತೀನ್, ರಾಕೇಶ್ ಶೆಟ್ಟಿ, ಭೀಮಪ್ಪ, ಆನಂದ್ ಭಾಗವಹಿಸಿದ್ದರು.

ಮತ್ತೊಂದೆಡೆ, ಪತ್ನಿ ನೀತಾ ಯಾದವ್ ಮಂಗಳವಾರ ಉಡುಪಿಗೆ ಬಂದು ಪತಿಯ ಶವವನ್ನು ತೆಗೆದುಕೊಂಡು ಹೋದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, 15 ದಿನಗಳ ಹಿಂದೆ ಪತಿ ವ್ಯವಹಾರ ಸಂಬಂಧ ಉಡುಪಿಗೆ ಬಂದಿದ್ದರು. ಕೆಲ ದಿನಗಳ ಬಳಿಕ ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ಅವರ ಕೊಲೆಯಾಗಿರುವ ವಿಚಾರ ತಿಳಿಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.