ADVERTISEMENT

ಉಡುಪಿ: ಕೊರೊನಾ ಭೀತಿ ಮಧ್ಯೆ ಸರಳ ನಾಗರ ಪಂಚಮಿ

ಮನೆಯಲ್ಲಿ ಸರಳವಾಗಿ ಹಬ್ಬ ಆಚರಣೆ; ದೇವಸ್ಥಾನಗಳಲ್ಲಿ ಪೂಜೆ, ಅಭಿಷೇಕ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 13:47 IST
Last Updated 25 ಜುಲೈ 2020, 13:47 IST
ಉಡುಪಿಯ ನಾಗಬನದಲ್ಲಿ ಶನಿವಾರ ಸರಳವಾಗಿ ನಾಗರಪಂಚಮಿ ನೆರವೇರಿತು.
ಉಡುಪಿಯ ನಾಗಬನದಲ್ಲಿ ಶನಿವಾರ ಸರಳವಾಗಿ ನಾಗರಪಂಚಮಿ ನೆರವೇರಿತು.   

ಉಡುಪಿ: ಕೊರೊನಾ ಸೋಂಕು ಭೀತಿಯ ಮಧ್ಯೆಯೂ ಉಡುಪಿಯಲ್ಲಿ ಸರಳವಾಗಿ ನಾಗರ ಪಂಚಮಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.

ಪ್ರತಿವರ್ಷ ಭಕ್ತರಿಂದ ತುಂಬಿರುತ್ತಿದ್ದ ನಾಗಬನ, ನಾಗ ದೇವಸ್ಥಾನಗಳಲ್ಲಿ ಈ ವರ್ಷ ಭಕ್ತರ ಸುಳಿವಿರಲಿಲ್ಲ. ಆದರೆ ಅರ್ಚಕರು ಸಂಪ್ರದಾಯದಂತೆ ಬೆಳಗಿನ ಜಾವ ದೇವಸ್ಥಾನದ ಬಾಗಿಲು ತೆರೆದು ದೇವರಿಗೆ ಪೂಜೆ, ಅಭಿಷೇಕ ನೆರವೇರಿಸಿ ಮತ್ತೆ ಬಾಗಿಲು ಮುಚ್ಚಿದರು.

ಜಿಲ್ಲಾಡಳಿತದ ಆದೇಶದಂತೆದೇವಸ್ಥಾನದೊಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಕೆಲವು ದೇಗುಲ ಹಾಗೂ ನಾಗಬನಗಳ ಮುಂದೆ ‘ತನು ಎರೆಯುವಂತಿಲ್ಲ, ಹಣ್ಣುಕಾಯಿ ಸಮರ್ಪಣೆ ಸೇವೆ ಹಾಗೂ ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ’ ಬ್ಯಾನರ್ ಅಳವಡಿಸಲಾಗಿತ್ತು.

ADVERTISEMENT

ಆದರೆ, ಕೆಲವು ನಾಗಬನಗಳಲ್ಲಿ ಮಾತ್ರ ಬೆರಳೆಣಿಕೆಯ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಎಳನೀರು ಹಾಗೂ ಹಾಲಿನ ಅಭಿಷೇಕ ಮಾಡಿದರು. ಎಲ್ಲರೂ ಮಾಸ್ಕ್‌ ಧರಿಸಿ ಪಾಲ್ಗೊಂಡಿದ್ದು ಕಂಡುಬಂತು.

ಪೊಲೀಸರ ನಿಯೋಜನೆ:

ದೇವಸ್ಥಾನಗಳಲ್ಲಿ ಭಕ್ತರು ಅಂತರ ಕಾಯ್ದುಕೊಳ್ಳುವಿಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಗುಂಡಿಬೈಲಿನ ಪ್ರಮುಖ ನಾಗಬನ ಸೇರಿ ನಗರದ ಹಲವೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿರ್ಬಂಧದ ನಡುವೆಯೂ ದೇವಸ್ಥಾನಕ್ಕೆ ಬಂದವರನ್ನು ಪೊಲೀಸರು ವಾಪಸ್‌ ಕಳುಹಿಸಿದರು.

ಕಾಣದ ಲವಲವಿಕೆ:

ನಾಗರ ಪಂಚಮಿಯ ದಿನ ನಗರದ ಹೂ ಮಾರುಕಟ್ಟೆ ಭಕ್ತರಿಂದ ಗಿಜಿಗುಡುತ್ತಿತ್ತು. ನಾಗನ ಮೂರ್ತಿಯ ಅಲಂಕಾರಕ್ಕೆ ಹೂವಿನ ಖರೀದಿ ಜೋರಾಗಿ ನಡೆಯುತ್ತಿತ್ತು. ಈ ವರ್ಷ ದಟ್ಟಣೆ ಕಡಿಮೆ ಇತ್ತು. ಮನೆಯಲ್ಲಿ ಸರಳವಾಗಿ ಪೂಜೆಗೆ ಬೇಕಾದಷ್ಟು ಹೂ ಹಣ್ಣು ಹಾಗೂ ಅಡಿಕೆ ಸಿಂಗಾರವನ್ನು ಸಾರ್ವಜನಿಕರು ಖರೀದಿಸಿದರು.

ಹಬ್ಬದ ದಿನ ಹೂ–ಹಣ್ಣಿನ ವ್ಯಾಪಾರಿಗಳು ಹಾಗೂ ಭಕ್ತರಿಂದ ತುಂಬಿರುತ್ತಿದ್ದ ಕೃಷ್ಣಮಠದ ರಥಬೀದಿ ಈ ಬಾರಿ ಕಳೆಗುಂದಿತ್ತು. ಹೊರ ಜಿಲ್ಲೆಗಳಿಂದ ಹೆಚ್ಚಿನ ವ್ಯಾಪಾರಿಗಳು ಕೂಡ ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.