ಉಡುಪಿ: ನಾಗರಪಂಚಮಿ ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಎಳನೀರು, ಹೂವು ಮತ್ತು ಹಣ್ಣುಗಳ ಖರೀದಿಗಾಗಿ ಜನರು ಮುಗಿಬಿದ್ದಿದ್ದರು. ಸರ್ವೀಸ್ ಬಸ್ ನಿಲ್ಧಾಣ, ರಥಬೀದಿ, ಡಯಾನ ಸರ್ಕಲ್ ರಸ್ತೆ, ಚಿತ್ತರಂಜನ್ ಸರ್ಕಲ್, ಕೆ.ಎಂ. ಮಾರ್ಗ ಮೊದಲಾದೆಡೆ ಹೂವುಗಳ ಮಾರಾಟ ಗರಿಗೆದರಿತ್ತು.
ಸೇವಂತಿಗೆ, ಚೆಂಡು ಹೂವು, ಗುಲಾಬಿ ಮೊದಲಾದವುಗಳ ಮಾರಾಟವು ರಸ್ತೆ ಬದಿಯಲ್ಲಿ ನಡೆದಿತ್ತು. ಪ್ರತಿ ವರ್ಷವೂ ಹಬ್ಬದ ಸಂದರ್ಭದಲ್ಲಿ ಹಾಸನ, ಮಂಡ್ಯ ಮೊದಲಾದೆಡೆಗಳಿಂದ ಹೂವಿನ ವ್ಯಾಪಾರಿಗಳು ನಗರಕ್ಕೆ ಬಂದು ಹೂವಿನ ವ್ಯಾಪಾರ ನಡೆಸುತ್ತಾರೆ. ಈ ಬಾರಿಯೂ ಹಲವೆಡೆ ಹೂವಿನ ಮರಾಟ ನಡೆಸಿದ್ದಾರೆ.
ನಾಗರಪಂಚಮಿ ಹಬ್ಬಕ್ಕೆ ಅಗತ್ಯವಾದ ಹಿಂಗಾರ ಮತ್ತು ಕೇದಗೆ ಹೂವಿನ ಮಾರಾಟವೂ ಜೋರಾಗಿತ್ತು. ಅಡಿಕೆ ಮರದ ಹಿಂಗಾರದ ದರ ₹200 ದಾಟಿತ್ತು. ಏಲಕ್ಕಿ ಬಾಳೆ ಹಣ್ಣಿನ ದರವೂ ₹100ರ ಗಡಿ ದಾಟಿದೆ. ಕೇದಗೆ ಹೂವಿನ ದರವು ₹80 ಕ್ಕೆ ಏರಿಕೆಯಾಗಿದೆ.
‘ಕಳೆದೊಂದು ತಿಂಗಳಿನಿಂದ ವಿಪರೀತ ಮಳೆಯಾಗಿರುವುದರಿಂದ ಹೂವಿನ ಬೆಳೆ ನಾಶವಾಗಿದೆ. ಈ ಕಾರಣಕ್ಕೆ ಕೆಲವು ಹೂವುಗಳ ದರ ಏರಿಕೆಯಾಗಿದೆ’ ಎಂದು ಹೂವಿನ ವ್ಯಾಪಾರಿಗಳು ತಿಳಿಸಿದರು.
ಗಗನಕ್ಕೇರಿದ ಎಳನೀರು ದರ
ನಾಗರ ಪಂಚಮಿಯ ಸಂದರ್ಭದಲ್ಲಿ ನಾಗನ ಮೂರ್ತಿಗೆ ಎಳನೀರು ಅಭಿಷೇಕ ಮಾಡುವುದರಿಂದ ಎಳನೀರಿಗೆ ವಿಪರೀತ ಬೇಡಿಕೆ ಇರುತ್ತದೆ. ಈ ಬಾರಿ ಸಾಮಾನ್ಯ ಎಳನೀರಿನ ದರ ₹ 60 ಕ್ಕೇರಿದರೆ ಗೆಂದಾಳಿ ಎಳನೀರಿನ ದರ ₹80 ರಿಂದ ₹100ರ ಅಸುಪಾಸಿನಲ್ಲಿತ್ತು. ‘ಹಬ್ಬದ ಸಂದರ್ಭದಲ್ಲಿ ಎಳನೀರು ಅತ್ಯಗತ್ಯವಾಗಿದೆ. ಈ ಕಾರಣಕ್ಕೆ ದರ ಏರಿಕೆಯಾದರೂ ಕೊಂಡುಕೊಳ್ಳುವ ಅನಿವಾರ್ಯತೆ ಇದೆ. ಈ ಬಾರಿ ಏಳನೀರು ದರ ವಿಪರೀತ ಏರಿಕೆಯಾಗಿದೆ’ ಎಂದು ಗ್ರಾಹಕರೊಬ್ಬರು ತಿಳಿಸಿದರು.
ಹಬ್ಬದ ಸಂದರ್ಭದಲ್ಲಿ ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ನಾಗರ ಕಟ್ಟೆಗಳ ಬಳಿ ಪ್ರತಿವರ್ಷದಂತೆ ನಗರಸಭೆಯ ವತಿಯಿಂದ ಕಸದ ಬುಟ್ಟಿಗಳನ್ನಿಡಲು ಸೂಚಿಸಲಾಗಿದೆ–ಮಹಾಂತೇಶ ಹಂಗರಗಿ, ಉಡುಪಿ ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.