ADVERTISEMENT

ಅಪಘಾತ ತಡೆಗೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಶ್ರೀನಿವಾಸ

ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 3:59 IST
Last Updated 3 ಸೆಪ್ಟೆಂಬರ್ 2025, 3:59 IST
ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಉಡುಪಿ: ಜನ ಸಾಮಾನ್ಯರಿಂದ ಟೋಲ್ ಶುಲ್ಕ ಪಡೆಯುವ ಗುತ್ತಿಗೆದಾರರು ಹೆದ್ದಾರಿ ನಿರ್ವಹಣೆಯನ್ನು ಉತ್ತಮವಾಗಿ ಮಾಡುವುದರೊಂದಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈಚೆಗೆ ಹೆದ್ದಾರಿಯಲ್ಲಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿಗಳ ಪ್ರಗತಿಯ ಬಗ್ಗೆ ಚರ್ಚಿಸಲು ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷದಲ್ಲಿ 250 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ ಎರಡು ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ 8 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದರು.

ಹೆಚ್ಚು ಅಪಘಾತವಾಗುತ್ತಿರುವ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ವೈಜ್ಞಾನಿಕವಾಗಿ ಕಾಮಗಾರಿ, ದಾರಿದೀಪಗಳನ್ನು ಅಳವಡಿಸುವುದು, ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತಿತರ ಕಾರ್ಯಗಳನ್ನು ಒಂದು ತಿಂಗಳೊಳಗಾಗಿ ಕೈಗೊಳ್ಳುವುದರೊಂದಿಗೆ ಅಪಘಾತ ಮುಕ್ತ ವಲಯವನ್ನಾಗಿಸಬೇಕು ಎಂದು ಸೂಚನೆ ನೀಡಿದರು

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆಜಮಾಡಿಯಿಂದ ಕುಂದಾಪುರ ವರೆಗೂ 66 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಅವಶ್ಯಕತೆ ಇದ್ದು, ಪ್ರಸ್ತುತ ಕೋಟೇಶ್ವರದಿಂದ ಹೆಜಮಾಡಿವರೆಗೆ 26 ಕಿ.ಮೀ. ಸರ್ವಿಸ್ ರಸ್ತೆ ಹಾಗೂ 3 ಫೂಟ್ ಓವರ್ ಬ್ರಿಡ್ಜ್ ಕಾಮಗಾರಿಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಶೇ 70 ಕ್ಕೂ ಹೆಚ್ಚು ಕಾಮಗಾರಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಂಗ್ರಹಿಸಿ, ಶೇಖರಣೆಗೊಳಿಸುವುದರೊಂದಿಗೆ ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ತಿಳಿಸಿದರು.

ADVERTISEMENT

ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರಿ, ಬ್ರಹ್ಮಾವರ ಹಾಗೂ ಕೋಟದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಡಿ.ಪಿ.ಆರ್. ಅನ್ನು ಕೂಡಲೇ ತಯಾರಿಸಿ, ನೀಡಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ದೊರಕಿಸಿ ಕೊಡಲಾಗುವುದು. ಈ ಕಾರ್ಯಕ್ಕೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದರು.

ಪಡುಬಿದ್ರಿಯಲ್ಲಿ ದಾರಿದೀಪಗಳ ಸರಿಯಾದ ನಿರ್ವಹಣೆ ಇಲ್ಲದೇ ಅಪಘಾತಗಳು ಆಗುತ್ತಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ದಾರಿದೀಪಗಳನ್ನು ಅಳವಡಿಸಿದ್ದು, ಅವುಗಳು ಪ್ರಕಾಶಮಾನವಾಗಿ ಇಲ್ಲದೇ ಇರುವುದು ಕಂಡುಬರುತ್ತಿದೆ. ಕನಿಷ್ಠ 240 ವೋಲ್ಟ್‌ ಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವ ಬಲ್ಬ್‌ಗಳನ್ನು ಅಳವಡಿಸಬೇಕೆಂದು ಸೂಚನೆ ನೀಡಿದರು.

ಬ್ರಹ್ಮಾವರ ನಗರ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ, ಫ್ಲೈ ಓವರ್, ವಿದ್ಯುತ್ ದೀಪಗಳ ಅಳವಡಿಕೆ, ಮೇಲ್ಸೇತುವೆ ಕಾಮಗಾರಿ ಕೈಗೊಳ್ಳುವುದರೊಂದಿಗೆ ಅಪಘಾತಗಳು ಆಗದಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಉಳಿಸಿ ಸಮಿತಿಯ ಸದಸ್ಯರು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಸಹಾಯಕ ಆಯುಕ್ತೆ ರಶ್ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಭಾಗವಹಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವ ಹಾಗೆ ಕಾಮಗಾರಿಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸಬೇಕು
ಕೋಟ ಶ್ರೀನಿವಾಸ ಪೂಜಾರಿ ಸಂಸದ
ಉದ್ಯಾವರದಿಂದ ಬಲೈಪಾದೆವರೆಗಿನ ಸರ್ವಿಸ್ ರಸ್ತೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವುದರೊಂದಿಗೆ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಬೇಕು
ಯಶ್‌ಪಾಲ್ ಸುವರ್ಣ ಶಾಸಕ
ಪಡುಬಿದ್ರಿಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವಿನ ಪ್ರಕರಣಗಳು ಉಂಟಾಗುತ್ತಿವೆ. ಮೇಲ್ಸೇತುವೆ ಕಾಮಗಾರಿಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು
ಗುರ್ಮೆ ಸುರೇಶ್ ಶೆಟ್ಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.