ADVERTISEMENT

‘ಯಕ್ಷಗಾನ ನಾಡಿನ, ದೇಶದ ಕಲೆಯಾಗಲಿ’: ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟ

ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟದಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 14:44 IST
Last Updated 14 ನವೆಂಬರ್ 2021, 14:44 IST
ಯಕ್ಷಗಾನ ಕೇಂದ್ರ ಇಂದ್ರಾಳಿ, ಮಾಹೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉದ್ಘಾಟಿಸಿದರು.
ಯಕ್ಷಗಾನ ಕೇಂದ್ರ ಇಂದ್ರಾಳಿ, ಮಾಹೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉದ್ಘಾಟಿಸಿದರು.   

ಉಡುಪಿ: ಯಕ್ಷಗಾನವು ಎಲ್ಲ ಕಲಾ ಪ್ರಕಾರಗಳನ್ನು ಒಳಗೊಂಡ ಸಮ್ಮಿಶ್ರ ಕಲೆಯಾಗಿದ್ದು ವಿಶ್ವಮಾನ್ಯತೆ ಪಡೆದ ಕಲೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.

ಯಕ್ಷಗಾನ ಕೇಂದ್ರ ಇಂದ್ರಾಳಿ, ಮಾಹೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ನಿಟ್ಟಿನಲ್ಲಿ ಯಕ್ಷಗಾನ ಕಲಾಕೇಂದ್ರ ಕಟಿಬದ್ಧವಾಗಿ ಶ್ರಮಿಸುತ್ತಿದ್ದು, ನೂರಾರು ಯಕ್ಷಗಾನ ಕಲಾವಿದರನ್ನು ತಯಾರು ಮಾಡುತ್ತಿದೆ. ಶಾಸ್ತ್ರೀಯ ಯಕ್ಷಗಾನ ಕಲಿಕೆಯ ಮೂಲಕ ಯಕ್ಷಗಾನ ಕೇಂದ್ರ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ADVERTISEMENT

ಸಾಹಿತಿ ಭುವನ ಪ್ರಸಾದ್ ಹೆಗ್ಡೆ ಮಾತನಾಡಿ, ಯಕ್ಷಗಾನ ನಾಡಿನ ಸರ್ವಾಂಗೀಣ ಕಲೆಯಾಗಬೇಕು. ವೈಶಿಷ್ಟ್ಯಪೂರ್ಣವಾದ ಯಕ್ಷಗಾನ ಕಲೆ ನಾಡಿನ ಕಲೆಯಾಗಬೇಕು, ದೇಶದ ಕಲೆಯಾಗಬೇಕು. ಆದರೆ, ಯಕ್ಷಗಾನಕ್ಕೆ ಸಿಗಬೇಕಾದ ಮನ್ನಣೆ ಸಿಗದಿರುವುದು ಬೇಸರದ ಸಂಗತಿ ಎಂದರು.

ತಿಂಗಳೆ ವಿಕ್ರಮಾರ್ಜುನ ಹೆಗಡೆ ಮಾತನಾಡಿ, ಯಕ್ಷಗಾನದ ಜೀವ, ಭಾವವಾಗಿ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ಧಾರೆ ಎರೆಯುತ್ತಿದ್ದಾರೆ. ಯಕ್ಷಗಾನ ಕೇಂದ್ರದಲ್ಲಿ ಕಲಿಕೆಗೆ ಅವಕಾಶ ಸಿಕ್ಕಿರುವುದು ಅದೃಷ್ಟವೇ ಸರಿ ಎಂದರು.

ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾಕೇಂದ್ರ ಶಿಸ್ತುಬದ್ಧ ಕಲಿಕಾ ಕೇಂದ್ರವಾಗಿದ್ದು, ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಯಕ್ಷಗಾನ ಕಲಿಸಲಾಗುತ್ತಿದೆ. ಭಾಷಾ ಶುದ್ಧತೆಗೆ, ದೈಹಿಕ ಸದೃಢತೆಗೆ, ಏಕಾಗ್ರತೆ ಸಾಧನೆಗೆ ಯಕ್ಷಗಾನ ಕಲಿಕೆ ಸಹಕಾರಿ ಎಂದರು.

ತರಬೇತಿ ಕಮ್ಮಟದಲ್ಲಿ ವಿವಿಧ ರಾಜ್ಯಗಳ 14 ವಿದ್ಯಾರ್ಥಿಗಳು ಭಾಗವಹಿಸಿದ್ದು, ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಪ್ರಾಥಮಿಕ ಶಿಕ್ಷಣ ನೀಡುವುದರ ಜತೆಗೆ, ಹಾವ, ಭಾವ, ಭಂಗಿ, ಹಾಗೂ ವೇಷ ಭೂಷಣಗಳ ಕುರಿತು ಸಮಗ್ರ ತರಬೇತಿ ನೀಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಡಾ.ಪಿಎಲ್‌ಎನ್.ರಾವ್, ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ, ಸತೀಶ್ ಕಾಮತ್, ಪಡುಕುದ್ರು ಲಕ್ಷ್ಮೀ ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.