ADVERTISEMENT

ಧರ್ಮಸ್ಥಳ ಯೋಜನೆಯಿಂದ ಹೊಸ ಚೇತನ: ವಸಂತ ಸಾಲಿಯಾನ್. 

ಚೈತನ್ಯ ಯುವ ವೃಂದದ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ವಿಚಾರಗೋಷ್ಠಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:46 IST
Last Updated 4 ಫೆಬ್ರುವರಿ 2023, 5:46 IST
ವಿಚಾರಗೋಷ್ಠಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ವಸಂತ ಸಾಲಿಯಾನ್‌ ಉದ್ಘಾಟಿಸಿದರು
ವಿಚಾರಗೋಷ್ಠಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ವಸಂತ ಸಾಲಿಯಾನ್‌ ಉದ್ಘಾಟಿಸಿದರು   

ಹೆಬ್ರಿ: ಗ್ರಾಮೀಣ ಪ್ರದೇಶದ ಮಹಿಳೆಯರ ಬದುಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳಿಂದ ಬದಲಾಗಿದೆ. ಸಬಲೀಕರಣ, ಜ್ಞಾನವಿಕಾಸದಿಂದಾಗಿ ಕೀಳರಿಮೆ ಮತ್ತು ಆತಂಕ ದೂರವಾಗಿ ಕೌಶಲ ಹೊರಹೊಮ್ಮಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ವಸಂತ ಸಾಲಿಯಾನ್‌ ಹೇಳಿದರು.

ಹೆಬ್ರಿ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ವತಿಯಿಂದ ಚೈತನ್ಯ ಯುವ ವೃಂದದ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ನಡೆದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಒತ್ತಡ, ಬದುಕಿನ ಜಂಜಾಟದಿಂದ ಬಳಲುತ್ತಿದ್ದ ಬಹುತೇಕ ಮಹಿಳೆಯರು ಯೋಜನೆಯಿಂದಾಗಿ ಸ್ವಾವಲಂಬಿ ಜೀವನ ನಡೆಸಿ ಪ್ರಾಪಂಚಿಕ ಜ್ಞಾನ ಪಡೆದಿ‌ದ್ದಾರೆ. ಜೀವನ ನಡೆಸಲು ಯೋಜನೆ ಸಹಕಾರಿಯಾಗಿದೆ ಎಂದು ಮಹಿಳೆಯರೇ ಮುಕ್ತವಾಗಿ ಹೇಳುತ್ತಾರೆ ಎಂದು ಅವರು ನುಡಿದರು.

ADVERTISEMENT

ಉದ್ಯೋಗದ ಜೊತೆ ಸಂಸಾರ ನಿರ್ವಹಣೆ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಸ್ವಾಷ್ಟ್‌ ಸೀಲ್‌ ಸಂಸ್ಥೆಯ ತರಬೇತುದಾರೆ ಜ್ಯೋತಿ ಪ್ರಶಾಂತ್‌, ಮಹಿಳೆಯರು ಸಮಸ್ಯೆಯನ್ನು ಮೆಟ್ಟಿನಿಂತು ಜೀವನದಲ್ಲಿ ವಿಶೇಷ ಸಾಧನೆ ಮಾಡಬೇಕಿದೆ ಎಂದರು.

ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಸ್ವಸಹಾಯ ಸಂಘದ ವಿನುತಾ ಮತ್ತು ಗುಣವತಿ ಅವರು ಯೋಜನೆಯ ಬಗ್ಗೆ ಮಾತನಾಡಿದರು. ಯೊಜನೆಯ ಸದಸ್ಯರಿಗೆ ಅಟೊ ರಿಕ್ಷಾ ಚಾಲನೆ ಪತ್ರ, ಗಾಲಿ ಕುರ್ಚಿ ಮತ್ತಿತರ ಸವಲತ್ತುಗಳನ್ನು ವಿತರಿಸಲಾಯಿತು.

ಹೆಬ್ರಿ ಚೈತನ್ಯ ಯುವ ವೃಂದದ ಗೌರವಾಧ್ಯಕ್ಷ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ದನ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರವೀಣ್‌ ಹೆಗ್ಡೆ, ಉದ್ಯಮಿ ಎಚ್.ನರೇಂದ್ರ ನಾಯಕ್‌ ಇದ್ದರು.

ಯೋಜನಾಧಿಕಾರಿ ಲೀಲಾವತಿ ಸ್ವಾಗತಿಸಿದರು. ಜ್ಞಾನವಿಕಾಸ ಯೋಜನೆಯ ಚಂದ್ರವತಿ ವರದಿ ಮಂಡಿಸಿದರು. ಮೇಲ್ವಿಚಾರಕ ಉದಯ ಕುಲಾಲ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.