ADVERTISEMENT

ಬೊಮ್ಮಾಯಿ ದೇವೇಗೌಡರ ಭೇಟಿಗೆ ಅಪಾರ್ಥ ಬೇಡ; ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 13:02 IST
Last Updated 8 ಆಗಸ್ಟ್ 2021, 13:02 IST
ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರನ್ನು ಭಾನುವಾರ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸನ್ಮಾನಿಸಲಾಯಿತು
ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರನ್ನು ಭಾನುವಾರ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸನ್ಮಾನಿಸಲಾಯಿತು   

ಉಡುಪಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾದ ಬಗ್ಗೆ ಅಪಾರ್ಥ ಬೇಡ ಎಂದು ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.

ಭಾನುವಾರ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಮಾತನಾಡಿ, ಈಚೆಗೆ ಶಾಸಕ ಪ್ರೀತಂ ಗೌಡ ಅವರು ಬೊಮ್ಮಾಯಿ ಹಾಗೂ ದೇವೇಗೌಡರ ಸೌಹಾರ್ದ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಹೇಳಿಕೆ ಹುಚ್ಚುತನದಿಂದ ಕೂಡಿದೆ ಎಂದರು

ಹಿಂದೆ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ದೇವೇಗೌಡರನ್ನು ಭೇಟಿಯಾಗಿ ಸಲಹೆ ಪಡೆದಿದ್ದಾರೆ. ರಾಜಕೀಯ ಹಾಗೂ ವೈಯಕ್ತಿಕ ವರ್ಚಸ್ಸು ಹೊಂದಿರುವ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಅವರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ ಎಂದರು.

ADVERTISEMENT

ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿದವರು. ತಂದೆ ಎಸ್.ಆರ್.ಬೊಮ್ಮಾಯಿ ಪುತ್ರ ಎಂಬ ಕಾರಣಕ್ಕೆ ಬೊಮ್ಮಾಯಿ ಅವರ ಮೇಲೆ ದೇವೇಗೌಡರು ವಿಶೇಷ ಪ್ರೀತಿ ಹೊಂದಿದ್ದಾರೆ. ಭೇಟಿಯ ಹಿಂದೆ ರಾಜಕೀಯ ಉದ್ದೇಶಗಳಿಲ್ಲ ಎಂದು ಕೋನರೆಡ್ಡಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಜೆಡಿಎಸ್‌ ಬಲವರ್ಧನೆಗೆ ಕುಮಾರಸ್ವಾಮಿ ಹಾಗೂ ದೇವೇಗೌಡರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ದೇಶದ ವಿವಿಧೆಡೆಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಮತದಾರರು ಬೆಂಬಲಿಸಿರುವಂತೆ ರಾಜ್ಯದಲ್ಲಿ ಜೆಡಿಎಸ್ ಬೆಂಬಲಿಸಲಿದ್ದು, ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಪಕ್ಷ ಅಧಿಕಾರಕ್ಕೆ ಬರಲಿದೆ. 2023ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಪಕ್ಷ ಬಲಪಡಿಸಲು ಕಾರ್ಯ ಯೋಜನೆ ರೂಪಿಸಲಾಗಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆಯಲಿದ್ದು, 20 ಹಿರಿಯ ನಾಯಕರ ತಂಡ ರಚಿಸಿ ಪಕ್ಷ ಬಲವರ್ಧನೆಗೆ ಪೂರಕ ಸಹಕಾರ ನೀಡಲಾಗುವುದು ಎಂದರು.

ಕೋವಿಡ್‌ ನಿಯಮಾವಳಿ ಪಾಲಿಸಬೇಕಾದ ಜನಪ್ರತಿನಿಧಿಗಳೇ ನಿಯಮ ಉಲ್ಲಂಘಿಸುತ್ತಿದ್ದಾರೆ. ಕೋವಿಡ್‌ ನಿರ್ವಹಣೆ ಮತ್ತು ನೆರೆ ಸಮಸ್ಯೆ ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದರೆ, ಸಚಿವರು ಅಭಿನಂದನೆ ಕಾರ್ಯಕ್ರಮ, ಮೆರವಣಿಗೆ ಮಾಡುವ ಮೂಲಕ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಕೋನರೆಡ್ಡಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ಜಯಕುಮಾರ್ ಪರ್ಕಳ, ವಾಸುದೇವರಾವ್, ಜಯರಾಮ ಆಚಾರ್ಯ, ಇಕ್ಬಾಲ್ ಅತ್ರಾಡಿ, ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ, ಅಬ್ದುಲ್ ರಜಾಕ್ ಉಚ್ಚಿಲ, ರಂಗ ಆರ್.ಕೊಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.