ADVERTISEMENT

ವಿಷ ಬೀಜ ಬಿತ್ತಿ, ಭಾವನೆ ಒಡೆಯುವ ಕೆಲಸ : ಶಾಸಕ ಯಶಪಾಲ್‌ ಸುವರ್ಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:50 IST
Last Updated 12 ಸೆಪ್ಟೆಂಬರ್ 2025, 5:50 IST
   

ಬ್ರಹ್ಮಾವರ: ವಿಶ್ವದ ಒಂದೇ ಒಂದು ಹಿಂದೂ ರಾಷ್ಟ್ರವಾದ ಭಾರತದಲ್ಲಿ ಇರುವ ಹಿಂದುತ್ವದ ಭಾವನೆಯನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ವಿಷಬೀಜ ಬಿತ್ತಲಾಗುತ್ತಿದೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.

ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಬ್ರಹ್ಮಾವರ ತಾಲ್ಲೂಕು ವತಿಯಿಂದ ಗುರುವಾರ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲಿನ ವೈಚಾರಿಕ ದಾಳಿಯನ್ನು ಖಂಡಿಸಿ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಶ್ರದ್ಧೆಯ ಕೇಂದ್ರಗಳ ವಿರುದ್ಧ ಷಡ್ಯಂತರ ಮಾಡುವವರಿಗೆ ಸಾಗರದ ಅಲೆಯಂತೆ ಹಿಂದುಗಳು ಒಗ್ಗಟ್ಟಾಗಿ, ಬಂದು ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ADVERTISEMENT

ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ಆನಂದ ಸಿ. ಕುಂದರ್ ಮಾತನಾಡಿ, ‘ಧರ್ಮಸ್ಥಳ ಇತಿಹಾಸದಿಂದಲೂ ನಮ್ಮ ಆರಾಧ್ಯ ಮತ್ತು ನಂಬಿಕೆಯ ಕ್ಷೇತ್ರ. ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯು ಸರಿಯಾದ ಶಿಕ್ಷೆ ನೀಡಲಿ’ ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರ್ರಾಮೀಣ ಭಾಗದ ಮಹಿಳೆಯರಲ್ಲಿ ಶಕ್ತಿ ತುಂಬಲು ಉತ್ತಮ ಕೆಲಸ ಮಾಡಿರುವ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ಸಂಸ್ಕೃತಿ ಉಳಿಸಿಕೊಳ್ಳಲು, ಧರ್ಮ ಮತ್ತು ಧರ್ಮಸ್ಥಳವನ್ನು ಉಳಿಸಿಕೊಳ್ಳಲು ರಾಜಕೀಯ ರಹಿತವಾಗಿ ಹಿಂದೂಗಳೆಲ್ಲರೂ ಒಂದಾಗಿ ಹೋರಾಡಬೇಕು ಎಂದರು.

ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್, ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಅಧ್ಯಕ್ಷ ಎಚ್‌.ಧನಂಜಯ ಶೆಟ್ಟಿ, ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಗೌರವಾಧ್ಯಕ್ಷ ಶೇಡಿಕೊಡ್ಲು ವಿಠಲಶೆಟ್ಟಿ, ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಾಂತರಾಮ ಶೆಟ್ಟಿ, ಕಚ್ಚೂರು ಬ್ರಹ್ಮಲಿಂಗ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್, ಬಾರ್ಕೂರು ಮಾಲ್ತಿದೇವಿ ಮತ್ತು ಬಬ್ಬುಸ್ವಾಮಿ ಮೂಲ ಕ್ಷೇತ್ರದ ಧರ್ಮದರ್ಶಿ ಗೋಕುಲದಾಸ್ ಬಾರ್ಕೂರು, ಧರ್ಮಸ್ಥಳ ಅಭಿಮಾನಿಗಳ ವೇದಿಕೆ ಗೌರವಾಧ್ಯಕ್ಷ ಶ್ರೀನಿವಾಸ ಉಡುಪ ಕೂಡ್ಲಿ, ನಾರಾಯಣಗುರು ಸೇವಾಸಂಘದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಕಾಜರಳ್ಳಿ ವನದುರ್ಗಾ ಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಅಲ್ತಾರು ನಿರಂಜನ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಪೂಜಾರಿ,ಪ್ರಕಾಶ ಶೆಟ್ಟಿ , ನಳಿನಿ ಪ್ರದೀಪ್‌ ರಾವ್, ರಾಮಯ್ಯ ಜೋಗಿ ಯಡ್ತಾಡಿ, ಭಜನಾ ಪರಿಷತ್ ಅಧ್ಯಕ್ಷ ಪ್ರಸನ್ನ ಕುಮಾರ್, ಶಶಿಧರ ಶೆಟ್ಟಿ ಮಡಾಮಕ್ಕಿ ಇದ್ದರು.

ವಕೀಲ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿದರು. ವೇದಿಕೆಯ ಕಾರ್ಯಾಧ್ಯಕ್ಷ ಬಿರ್ತಿ ರಾಜೇಶ ಶೆಟ್ಟಿ ನಿರ್ಣಯ ಓದಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.

ನಂತರ ಧರ್ಮಸಂರಕ್ಷಣಾ ಜಾಥಾ ಮೂಲಕ ಬ್ರಹ್ಮಾವರ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರಭಾರಿ ತಹಶೀಲ್ದಾರ್ ಪಿ.ಆರ್. ಗುರುರಾಜ್ ಅವರಿಗೆ ಮನವಿ ನೀಡಲಾಯಿತು.

ಬ್ರಹ್ಮಾವರದಲ್ಲಿ ಗುರುವಾರ ಧರ್ಮಸಂರಕ್ಷಣಾ ಬೃಹತ್ ಸಭೆಯ ನಂತರ ಬ್ರಹ್ಮಾವರ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರಭಾರಿ ತಹಶೀಲ್ದಾರ್ ಪಿ.ಆರ್. ಗುರುರಾಜ್ ಅವರಿಗೆ ಮನವಿ ನೀಡಲಾಯಿತು
ವಿದೇಶ ಹಾಗೂ ದೇಶದ ಕೆಲವು ಭಾಗಗಳಿಂದ ಈ ಷಡ್ಯಂತರಕ್ಕೆ ಬೆಂಬಲ ದೊರೆತಿರುವ ಸಂದೇಹ ವ್ಯಕ್ತವಾಗುತ್ತಿರುವುದರಿಂದ ಪ್ರಕರಣವನ್ನು ಎನ್‌ಐಎ ಅಥವಾ ಸಿ.ಬಿ.ಐ.ಗೆ ವಹಿಸಬೇಕು.
ರಘುಪತಿ ಭಟ್‌ ಮಾಜಿ ಶಾಸಕ

ಕಾನೂನಾತ್ಮಕ ಕಠಿಣ ಕ್ರಮಕ್ಕೆ ಆಗ್ರಹ ವಿಶೇಷ ತನಿಖಾ ಸಂಸ್ಥೆಯನ್ನು ರಚಿಸಿ ಪಾರದರ್ಶಕ ಮತ್ತು ನ್ಯಾಯಯುತ ತನಿಖೆಗೆ ಅನುಕೂಲ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಧನ್ಯವಾದ. ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ರಾಷ್ಟ್ರ ಮಟ್ಟದ ಈ ವ್ಯವಸ್ಥಿತ ಷಡ್ಯಂತ್ರವನ್ನು ಮತ್ತು ಸಾಮಾಜಿಕ ಜಾಲತಾಣಗಳ ಹಾಗೂ ದೃಶ್ಯ ಮಾಧ್ಯಮದ ಮೂಲಕ ನಡೆಯುತ್ತಿರುವ ಸುಳ್ಳು ಪ್ರಕರಣವನ್ನು ಕಠಿಣವಾಗಿ ಖಂಡಿಸಬೇಕು. ಇಂತಹ ಪ್ರಚಾರ ಮತ್ತು ಪ್ರಸಾರವನ್ನು ತಕ್ಷಣ ತಡೆಗಟ್ಟಬೇಕು ಮತ್ತು ಇದನ್ನು ನಡೆಸುತ್ತಿರುವ ವ್ಯಕ್ತಿಗಳ ಸಂಘ ಸಂಸ್ಥೆಗಳ ಹಾಗೂ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವ ವಾಹಿನಿಗಳ ವಿರುದ್ಧ ಸರ್ಕಾರ ಕಾನೂನಾತ್ಮಕ ನಿರ್ದಾಕ್ಷಿಣ್ಯ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.