ADVERTISEMENT

‘ನಿರಂಜನರ ನೂರರ ನೆನಪು’ | ಮಕ್ಕಳ ಮಿದುಳು ಕೋಮುವಾದಿ ಕೈಗಿಡಬೇಡಿ: ಮುಕುಂದರಾಜ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 7:14 IST
Last Updated 28 ಜುಲೈ 2025, 7:14 IST
ಕಾರ್ಯಕ್ರಮವನ್ನು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಉದ್ಘಾಟಿಸಿದರು   

ಉಡುಪಿ: ‘ಕರಾವಳಿಯ ತಾಯಂದಿರೇ ನಿಮ್ಮ ಮಕ್ಕಳ ಮಿದುಳನ್ನು ರಾಜಕಾರಣಿಗಳ, ಕೋಮುವಾದಿಗಳ ಕೈಗೆ ಕೊಡಬೇಡಿ. ಅವರನ್ನು ಭಾರತದ ಸಂವಿಧಾನದ ಪ್ರಕಾರ ಬೆಳೆಸಲು ಪ್ರಯತ್ನಿಸಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌. ಮುಕುಂದರಾಜ್‌ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಥಬೀದಿ ಗೆಳೆಯರು ಉಡುಪಿ ವತಿಯಿಂದ ನಗರದ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಿರಂಜನರ ನೂರರ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಯಂದಿರು ತಮ್ಮ ಮಕ್ಕಳಿಗೆ ಇನ್ನೊಬ್ಬರನ್ನು ಹೇಗೆ ಪ್ರೀತಿಸಬೇಕು, ಗೌರವಿಸಬೇಕು ಎಂಬುದನ್ನು ಕಲಿಸಿಕೊಡುವ ಮೂಲಕ ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ’ ಎಂದು ಹೇಳಿದರು.

ADVERTISEMENT

ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,‘ಹಿಂದಿನ ಸಾಹಿತಿಗಳನ್ನು ಕಿರಿಯರಿಗೆ ಪರಿಚಯಿಸುವ ಕೆಲಸವಾಗಬೇಕು ಆ ಕೆಲಸವನ್ನು ಕನ್ನಡ ಸಾಹಿತ್ಯ ಅಕಾಡೆಮಿ ಮಾಡಬೇಕು. ಈ ವಿಚಾರದಲ್ಲಿ ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ ಸಂಪೂರ್ಣವಾಗಿ ವಿಫಲವಾಗಿದೆ. ಅದು ಕೇವಲ ಸಭೆ, ಸಮಾರಂಭಗಳಿಗಷ್ಟೆ ಸೀಮಿತವಾಗಿದೆ’ ಎಂದು ಹೇಳಿದರು.

‘12ನೇ ಶತಮಾನದ ಚಳುವಳಿ ಬಹುದೊಡ್ಡ ಕಾರ್ಮಿಕ ಚಳುವಳಿ. ಕಾಯಕ ಜೀವಿಗಳು ಕಟ್ಟಿದ ಈ ಚಳುವಳಿಯ ಉದ್ದೇಶವು ಸ್ಥಾಪಿತವಾದ ವ್ಯವಸ್ಥೆಯನ್ನು ಒಡೆದು ಸಮ ಸಮಾಜ ಕಟ್ಟುವುದಾಗಿತ್ತು. ಚಾತುರ್ವರ್ಣದ ವಿರುದ್ಧ ಬಂಡೆದ್ದ ರಚನೆಗಳಾದ ವಚನಗಳು ಬೇರೆ ಯಾವುದೇ ಭಾಷೆಗಳಲ್ಲಿ ಕಾಣ ಸಿಗುವುದಿಲ್ಲ. ಈ ಚಳುವಳಿಯನ್ನು ಅರ್ಥೈಸದೆ ನಮ್ಮ ಓದು ದಾರಿ ತಪ್ಪಿದೆ’ ಎಂದು ಪ್ರತಿಪಾದಿಸಿದರು.

‘ನಿರಂಜನರ ಚಿರಸ್ಮರಣೆ ಕಾದಂಬರಿಯು ವರ್ಣ ಸಂಘರ್ಷದ ಸೂಕ್ಷ್ಮವನ್ನು ಅರ್ಥೈಸುವ ಮಾಹಿತಿಯನ್ನು ಒಳಗೊಂಡಿದೆ. ಅಂತಹ ಸಾಹಿತಿಗಳನ್ನು ಅರ್ಥ ಮಾಡಿಕೊಳ್ಳಲು ಸೂಕ್ಷ್ಮ ಓದಿನ ಗುಣ ಬೇಕು’ ಎಂದರು.

ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್‌ ಕುಮಾರ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಜಯಪ್ರಕಾಶ್‌ ಶೆಟ್ಟಿ ಎಚ್‌., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ಜಿ.ಪಿ. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.

‘ಪ್ರಗತಿಶೀಲ ಸಾಹಿತ್ಯದ ಹಿನ್ನೆಲೆಯಲ್ಲಿ ನಿರಂಜನರ ಬರಹಗಳು’ ವಿಷಯದ ಕುರಿತು ಸಾಹಿತಿ ಕೆ. ಕೇಶವ ಶರ್ಮ ವಿಚಾರ ಮಂಡಿಸಿದರು. ನವೀನ್‌ ಕುಮಾರ್ ಹಾಸನ ಪ್ರತಿಸ್ಪಂದನೆ ನೀಡಿದರು.

‘ನಿರಂಜನರ ಕಿರಿಯರ ವಿಶ್ವಕೋಶ ಮತ್ತು ವಿಶ್ವ ಕಥಾಕೋಶದ ಕಾಯಕ’ ವಿಷಯದ ಕುರಿತು ವರದರಾಜ ಚಂದ್ರಗಿರಿ ವಿಚಾರ ಮಂಡಿಸಿದರು. ಚಿಂತಕ ಕೆ. ಫಣಿರಾಜ್‌ ಅವರು ನಿರಂಜನರ ಕುರಿತ ಸಾಕ್ಷ್ಯಚಿತ್ರದ ನಿರ್ವಹಣೆ ಮಾಡಿದರು. ವಿಶ್ರಾಂತ ಕುಲಪತಿ ಸಬಿಹಾ ಭೂಮಿ ಗೌಡ ಅವರು ಸಮಾರೋಪ ಭಾಷಣ ಮಾಡಿದರು.

ಚಾತುರ್ವರ್ಣ ವ್ಯವಸ್ಥೆಯಿಂದ ನರಳುತ್ತಿರುವವರ ಬಗ್ಗೆ ಬರೆಯದವರಿಗೆ ಉತ್ತಮ ಬರಹಗಾರರಾಗಲು ಸಾಧ್ಯವಿಲ್ಲ. ಸಂವೇದನಶೀಲತೆ ಇರುವವರೇ ನಿಜವಾದ ಸಾಹಿತಿಗಳು
– ಎಸ್‌.ಜಿ. ಸಿದ್ದರಾಮಯ್ಯ, ಸಾಹಿತಿ
ಕನ್ನಡ ಸಾಹಿತ್ಯ ಪರಂಪರೆಯನ್ನು ಜನರ ಯುವ ಸಮುದಾಯದ ಪ್ರಜ್ಞೆಯಿಂದ ದೂರ ಮಾಡಿರುವ ಹೊಣೆಯನ್ನು ನಾವು ಕನ್ನಡ ಮೇಸ್ಟ್ರುಗಳು ಹೊರಬೇಕು
– ಎಲ್‌.ಎನ್‌. ಮುಕುಂದರಾಜ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

‘ಸಾಮಾಜಿಕ ಜವಾಬ್ದಾರಿಯ ಲೇಖಕ’

‘ಬಹುಪಾಲು ಪ್ರಗತಿಶೀಲ ಬರಹಗಾರರು ತೆಳುವಾದ ಸೈದ್ಧಾಂತಿಕ ನಿಲುವು ಹೊಂದಿದ್ದರು. ಇದರಿಂದ ಪ್ರಗತಿಶೀಲ ಪಂಥಕ್ಕೆ ಹಿನ್ನಡೆ ಉಂಟಾಯಿತು. ಆದರೆ ನಿರಂಜನರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗುಣಮಟ್ಟದ ಕೃತಿಗಳನ್ನು ನೀಡಿದ್ದಾರೆ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಅವುಗಳನ್ನು ಬರೆದಿದ್ದಾರೆ’ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು. ತಾತ್ವಿಕವಾದ ಸ್ಪಷ್ಟತೆ ನಿರಂಜನರ ಕೃತಿಗಳಲ್ಲಿ ಇತ್ತು. ಇಡೀ ಜಗತ್ತಿನ ಸಂಸ್ಕೃತಿಗಳನ್ನು ಅವರು ‘ವಿಶ್ವಕಥಾ ಕೋಶ’ದ ಮೂಲಕ ಕನ್ನಡದ ಓದುಗರಿಗೆ ನೀಡಿದ್ದಾರೆ. ಅಸೀಮವಾದ ಬದ್ಧತೆ ಅವರಲ್ಲಿತ್ತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.