ADVERTISEMENT

ನಿಟ್ಟೂರು: ದುರ್ವಾಸನೆಯಿಂದ ಸಿಗುವುದೇ ಮುಕ್ತಿ?

ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಸಮೀಪ ನಿವಾಸಿಗಳ ಬದುಕು ದುಸ್ತರ

ನವೀನ್ ಕುಮಾರ್ ಜಿ.
Published 20 ನವೆಂಬರ್ 2025, 3:13 IST
Last Updated 20 ನವೆಂಬರ್ 2025, 3:13 IST
ಮಹಾಂತೇಶ ಹಂಗರಗಿ
ಮಹಾಂತೇಶ ಹಂಗರಗಿ   

ಉಡುಪಿ: ನಗರದ ನಿಟ್ಟೂರಿನಲ್ಲಿ ಕಾರ್ಯಾಚರಿಸುವ ನಗರಸಭೆಯ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆಯು ಸಮೀಪ ವಾಸಿಗಳಿಗೆ ಬದುಕನ್ನು ದುಸ್ತರವಾಗಿಸಿ, ವರ್ಷಗಳೇ ಕಳೆದರೂ ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ.

ಈ ಘಟಕದಿಂದ ಹೊರಹೊಮ್ಮುವ ದುರ್ವಾಸನೆಯು ಉಡುಪಿ– ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರ ಮೂಗಿಗೂ ಬಡಿಯುತ್ತಿದೆ.

ನಗರ ವ್ಯಾಪ್ತಿಯ ಒಳಚರಂಡಿಗಳ ನೀರನ್ನು ಶುದ್ಧೀಕರಿಸುವ ಈ ಘಟಕವು ತಾಂತ್ರಿಕವಾಗಿ ಮೇಲ್ದರ್ಜೆಗೇರದಿರುವುದು ಈ ಅವ್ಯವಸ್ಥೆಗೆಲ್ಲ ಕಾರಣವಾಗಿದೆ ಎಂದು ಜನರು ದೂರುತ್ತಾರೆ.

ADVERTISEMENT

ಈ ಕೊಳಚೆ ನೀರು ಶುದ್ಧೀಕರಣ ಘಟಕದ ಸುತ್ತಲೂ ಹಲವು ಬಡವಾಣೆಗಳಿದ್ದು, ಅದರಲ್ಲಿ ನೂರಾರು ಜನರು ವಾಸಿಸುತ್ತಿದ್ದಾರೆ. ಸಮೀಪದಲ್ಲೇ ವಾಣಿಜ್ಯ ಕಟ್ಟಡಗಳು, ಆಟೊ ನಿಲ್ದಾಣ, ಅಂಗನವಾಡಿಗಳೂ ಇವೆ.

ಘಟಕದಿಂದ ನಿರಂತರವಾಗಿ ದುರ್ವಾಸನೆ ಹೊರಹೊಮ್ಮುತ್ತಿರುತ್ತದೆ. ಕೆಲವು ಸಂದರ್ಭದಲ್ಲಿ ಅದು ಸಹಿಸಲು ಸಾಧ್ಯವಾಗದಷ್ಟಿರುತ್ತದೆ ಎನ್ನುತ್ತಾರೆ ಸ್ಥಳೀಯರು.

ಈ ಘಟಕದ ವೆಟ್‌ವೆಲ್‌ಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ಇದರಿಂದ ಕೊಳಚೆ ನೀರು ಶುದ್ಧೀಕರಣವಾಗುತ್ತಿಲ್ಲ. ಇದು ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಜನರು ದೂರುತ್ತಾರೆ.

ಘಟಕದಲ್ಲಿ ನಗರದ ಕೊಳಚೆ ನೀರನ್ನು ಶುದ್ಧೀಕರಿಸಿ ಇಂದ್ರಾಣಿ ನದಿಯ ಮೂಲಕ ಸಮುದ್ರಕ್ಕೆ ಹರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳುತ್ತಾರೆ.

2007ರಲ್ಲಿ ಕುಡ್ಸೆಂಪ್‌ ₹5.5 ಕೋಟಿ ವೆಚ್ಚದಲ್ಲಿ ಎಡಿಬಿ ಅನುದಾನದ ಅಡಿಯಲ್ಲಿ ನಿಟ್ಟೂರಿನ 10 ಎಕರೆ ಪ್ರದೇಶದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿತ್ತು. ಪ್ರತಿದಿನ 12 ಎಂಎಲ್‌ಡಿ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.

ಮಳೆಗಾಲದಲ್ಲಿ ದುರ್ವಾಸನೆ ಸ್ವಲ್ಪ ಕಡಿಮೆಯಾದರೂ, ಚಳಿಗಾಲ, ಬೇಸಿಗೆ ಬಂದಾಗ ಅದರ ತೀವ್ರತೆ ಹೆಚ್ಚಾಗಿ ಬದುಕೇ ಅಸಹನೀಯವಾಗುತ್ತದೆ. ಸಂಬಂಧಪಟ್ಟವರು ಇನ್ನಾದರೂ ಈ ಘಟಕವು ಸೂಕ್ತ ರೀತಿಯಲ್ಲಿ ಕಾರ್ಯಾಚರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆ ನಗರಸಭೆಯ ಹಲವು ಸಾಮಾನ್ಯ ಸಭೆಗಳಲ್ಲಿ ಚರ್ಚೆಗಳು ನಡೆದಿದ್ದರೂ ಸಮಸ್ಯೆ ಮಾತ್ರ ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಸಮಸ್ಯೆ ಪರಿಹರಿಸಲು ಯಾರೂ ಮುತುವರ್ಜಿ ವಹಿಸಿಲ್ಲ ಎಂದು ಜನರು ದೂರಿದ್ದಾರೆ.

ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಹೊರಸೂಸುವ ದುರ್ವಾಸನೆ ನಿರಂತರ ಮೂಗಿಗೆ ಬಡಿದು ಈಗ ನನಗೆ ಎಷ್ಟೇ ದುರ್ವಾಸನೆ ಇದ್ದರೂ ಗೊತ್ತಾಗದ ಸ್ಥಿತಿ ಉಂಟಾಗಿದೆ.
– ಶೇಖರ್‌, ಸ್ಥಳೀಯ ನಿವಾಸಿ
ಕೆಲವೊಮ್ಮೆ ಸಂಜೆ ವೇಳೆ ಹೊಟ್ಟೆ ತೊಳೆಸುವಂತಹ ದುರ್ವಾಸನೆ ಬರುತ್ತದೆ. ನಿರಂತರ ದುರ್ವಾಸನೆಯಿಂದಾಗಿ ಯಾವುದಾದರೂ ಕಾಯಿಲೆ ಬರಬಹುದೆಂಬ ಭಯ ಕಾಡುತ್ತಿದೆ
– ಸುನಿತಾ, ಸ್ಥಳೀಯ ನಿವಾಸಿ
ಜೋರು ಮಳೆ ಬರುವಾಗ ಘಟಕದ ಹೊರಭಾಗದಲ್ಲಿರುವ ಚರಂಡಿಯಲ್ಲೂ ಕೊಳಚೆ ನೀರು ಉಕ್ಕಿ ಬರುತ್ತದೆ. ಘಟಕದ ಸುತ್ತಮುತ್ತ ವಾಸಿಸುವವರ ಸ್ಥಿತಿ ಹೇಳ ತೀರದಾಗಿದೆ
– ರವಿ, ಆಟೊ ಚಾಲಕ

‘ಎನ್‌ಜಿಟಿ ನಿಧಿ ಬಳಸಿ ಉನ್ನತೀಕರಣ’

‘ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಸದ್ಯ ಹಳೆಯ ತಂತ್ರಜ್ಞಾನ ಬಳಸಿ ಕೊಳಚೆ ನೀರು ಶುದ್ಧೀಕರಿಸಲಾಗುತ್ತಿದೆ. ಈ ತಂತ್ರಜ್ಞಾನ ಅಷ್ಟು ಸಮರ್ಥವಾಗಿರದ ಕಾರಣ ಸಮಸ್ಯೆಯಾಗುತ್ತಿದೆ. ಘಟಕದ ತಂತ್ರಜ್ಞಾನವನ್ನು ಉನ್ನತೀಕರಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಒಪ್ಪಂದ ಬಾಕಿ ಇದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ₹30 ಕೋಟಿ ಅನುದಾನ ಬಳಸಿ ಘಟಕವನ್ನು ಉನ್ನತೀಕರಿಸಲಾಗುವುದು’ ಎಂದು ನಗರ ಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು.

‘ಎನ್‌ಜಿಟಿ ಅನುದಾನವಾಗಿರುವುದರಿಂದ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್‌ಸಿ) ಮೂಲಕ ಕಾಮಗಾರಿ ನಡೆಸಬೇಕಾಗಿದೆ. ಈ ಮೂಲಕ ಹೈಟೆಕ್‌ ತಂತ್ರಜ್ಞಾನವನ್ನು ಬಳಸಲಾಗುವುದು’ ಎಂದರು.

‘ಬಯೋ ಕಲ್ಚರ್‌ ವಿಧಾನದ ಮೂಲಕವೂ ಕೊಳಚೆ ನೀರು ಶುದ್ಧೀಕರಣಕ್ಕೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಚೆನ್ನೈನ ಕಂಪನಿಯೊಂದು ನೀರಿನ ಮಾದರಿಯನ್ನು ಸಂಗ್ರಹಿಸಿ ಕೊಂಡೊಯ್ದಿದೆ. ಈ ವಿಧಾನದಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಬಳಸಿ ನೀರು ಶುದ್ಧೀಕರಿಸಲಾಗುತ್ತದೆ. ಕಂಪನಿಯವರು ಒಪ್ಪಿಕೊಂಡರೆ ಆ ವಿಧಾನವನ್ನೂ ಬಳಸಲಾಗುವುದು. ಘಟಕದಲ್ಲಿ ಕೊಳಚೆ ನೀರು ಸಮರ್ಪಕವಾಗಿ ಶುದ್ಧೀಕರಣಗೊಂಡರೆ ಆ ನೀರನ್ನು ಉದ್ಯಾನಗಳಿಗೆ ಬಳಸಬಹುದಾಗಿದೆ. ನದಿಗೂ ಹರಿಸಬಹುದು’ ಎಂದು ಅವರು ಹೇಳಿದರು.

‘ಉತ್ತಮ ಯಂತ್ರಗಳ ಬಳಕೆಯಾಗಲಿ’

ನಿಟ್ಟೂರಿನ ಕೊಳಚೆ ನೀರು ಶುದ್ಧೀಕರಣ ಘಟಕದ ಯಂತ್ರಗಳು ಕೆಟ್ಟು ಹೋಗುತ್ತಿರುವುದರಿಂದ ಅದು ಸರಿಯಾಗಿ ಕಾರ್ಯಾಚರಿಸದೆ ದುರ್ವಾಸನೆ ಬೀರುತ್ತಿದೆ. ಯಂತ್ರಗಳು ಕಳಪೆಯಾಗಿರುವ ಸಾಧ್ಯತೆಯೂ ಇದೆ. ಈ ಘಟಕಕ್ಕೆ ಗುಣಮಟ್ಟದ ಯಂತ್ರಗಳನ್ನು ಬಳಸಿ ಕೊಳಚೆ ನೀರು ಶುದ್ಧೀಕರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಹೇಳಿದರು.

‘ಹಲವು ವರ್ಷಗಳಿಂದ ಈ ಘಟಕದ ಸುತ್ತಮುತ್ತ ದುರ್ವಾಸನೆ ಹೊರ ಸೂಸುವ ಸಮಸ್ಯೆ ಇದೆ. ಅಲ್ಲಿನ ಜನರ ಗೋಳು ಹೇಳ ತೀರದಾಗಿದೆ. ರೋಗಭೀತಿಯೂ ಅವರನ್ನು ಕಾಡುತ್ತಿದೆ. ಸಂಬಂಧಪಟ್ವರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.