ADVERTISEMENT

ಪಿಪಿಪಿ ಬೇಡ; ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು- ಬಾಲಕೃಷ್ಣ ಶೆಟ್ಟಿ ಒತ್ತಾಯ

ಸಿಪಿಐ (ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 11:51 IST
Last Updated 17 ಆಗಸ್ಟ್ 2021, 11:51 IST
–ಬಾಲಕೃಷ್ಣ ಶೆಟ್ಟಿ, ಸಿಪಿಐ (ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ
–ಬಾಲಕೃಷ್ಣ ಶೆಟ್ಟಿ, ಸಿಪಿಐ (ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ   

ಉಡುಪಿ: ಜಿಲ್ಲೆಗೆ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಬೇಡ; ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂದು ಮಂಜೂರು ಮಾಡಬೇಕು ಎಂದು ಸಿಪಿಐ (ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.

ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು, ಸಂಪೂರ್ಣ ಖಾಸಗಿ ಮೆಡಿಕಲ್ ಕಾಲೇಜಿಗಿಂಗ ಅಪಾಯಕಾರಿ. ಸರ್ಕಾರದ ಭೂಮಿ, ವಿದ್ಯುತ್, ನೀರು ಹಾಗೂ ಇತರೆ ಮೂಲಸೌಕರ್ಯಗಳನ್ನು ಉಚಿತವಾಗಿ ಪಡೆದು ಕನಿಷ್ಟ ಶೇ 50 ಸೀಟುಗಳನ್ನು ಉಳಿಸಿಕೊಳ್ಳುವ ಕುತಂತ್ರ ಖಾಸಗಿ ಸಂಸ್ಥೆಯವರದ್ದು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೀಟು ಕೋಟಿ ಹಣ ಕೊಡುವ ಶ್ರೀಮಂತರ ಮಕ್ಕಳ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

160 ಕೋಟಿ ವೆಚ್ಚದಲ್ಲಿ ಉಡುಪಿಯಲ್ಲಿ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಿಗಲ್ಲು ಹಾಕಿದ್ದಾರೆ. ಅದು ಪೂರ್ಣಗೊಳ್ಳುವ ಸಂದರ್ಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಗೊಳ್ಳಬೇಕು. ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯ ದುಸ್ಥಿತಿಯನ್ನು ಕಂಡು ಪಿಪಿಪಿ ಮಾದರಿಯ ಕೆಟ್ಟ ಅನುಭವ ಜನರಿಗೆ ಆಗಿದೆ.

ADVERTISEMENT

ಲಾಭ ಸಿಕ್ಕಿದಾಗ ದೋಚಿಕೊಂಡು, ನಷ್ಟವಾದಾಗ ಜನರನ್ನು ಬೀದಿ ಪಾಲು ಮಾಡುವ ಖಾಸಗಿ ವ್ಯವಸ್ಥೆ ಉಡುಪಿ ಜಿಲ್ಲೆಗೆ ಅಗತ್ಯವಿಲ್ಲ. ಜಿಲ್ಲಾ ಆಸ್ಪತ್ರೆಗಳು ದೇಶದ ಅತ್ಯಂತ ದುರ್ಬಲ ಹಾಗೂ ಕಡುಬಡವ ರೋಗಿಗಳಿಗೆ ಕೊನೆಯ ತಾಣವಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯಬೇಕು. ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನು ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ನಡೆಸಿದಾಗ ಏನಾಗಿದೆ ಎಂಬುದಕ್ಕೆ ರಾಯಚೂರು ಅಪೋಲೋ ಆಸ್ಪತ್ರೆ ಮತ್ತೊಂದು ಉದಾಹರಣೆಯಾಗಿದೆ ಎಂದು ಬಾಲಕೃಷ್ಣ ಶೆಟ್ಟಿ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿರುವ ಜಯದೇವ, ಕಿದ್ವಾಯಿ, ಹುಬ್ಬಳ್ಳಿಯ ಸರ್ಕಾರಿ ಮೆಡಿಕಲ್ ಕಾಲೇಜು, ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗಳಲ್ಲಿ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದ್ದು, ಸರ್ಕಾರ ಕೂಡ ಖಾಸಗಿಯವರಂತೆ ಗುಣಮಟ್ಟದ ಸೇವೆ ನೀಡಬಲ್ಲದು ಎಂಬುದಕ್ಕೆ ನಿದರ್ಶನ. ಸರ್ಕಾರಿ ವ್ಯವಸ್ಥೆಯಲ್ಲಿ ಲೋಪ ದೋಷಗಳಿದ್ದರೆ ಜನರ ಪ್ರತಿಭಟನೆಯಿಂದ ಸರಿಪಡಿಸಲು ಸಾಧ್ಯವಿದೆ. ಆದರೆ ಖಾಸಗಿ ವ್ಯವಸ್ಥೆಯಲ್ಲಿ ಸಾದ್ಯವಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.