ADVERTISEMENT

ಶಾಸಕ ಸುನಿಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯಬೇಕಿಲ್ಲ: ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 12:40 IST
Last Updated 21 ಜೂನ್ 2025, 12:40 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಉಡುಪಿ: ಶಾಸಕ ಸುನಿಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ. ನೈತಿಕ ಅಧಿಕಾರ ಎಂದರೇನು? ಅವರು ಮೊದಲು ನೈತಿಕತೆಯ ಬಗ್ಗೆ ತಿಳಿದುಕೊಂಡು ಬಳಿಕ ಮಾತನಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತನಾಡುವ ನೈತಿಕತೆ ಸಚಿವೆಗೆ ಇಲ್ಲ ಎಂಬ ಶಾಸಕ ಸುನಿಲ್ ಕುಮಾರ್ ಅವರ ಆರೋಪಕ್ಕೆ ಶನಿವಾರ ಪ್ರತಿಕ್ರಿಯಿಸಿದ ಅವರು, ಸುನಿಲ್ ಕುಮಾರ್ ಬಹಳ ಚಂದ ಮಾತುಗಾರರು, ಅವರನ್ನು ಅವರೇ ಬುದ್ಧಿವಂತ, ಸರ್ವಜ್ಞ ಎಂದು ತಿಳಿದುಕೊಂಡಿದ್ದಾರೆ. ಬೇರೆಯವರನ್ನು ದಡ್ಡರು ಎಂದು ತಿಳಿದುಕೊಂಡಿದ್ದಾರೆ ಎಂದರು‌.

ಎಷ್ಟು ಅಂಗನವಾಡಿಗಳಿವೆ ಲೆಕ್ಕ ಕೊಡಿ ಎಂದು ಸುನಿಲ್ ಕುಮಾರ್ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ರಾಜ್ಯದಲ್ಲಿ ಸುಮಾರು 69,000 ಅಂಗನವಾಡಿ ಕಟ್ಟಡ ಇದೆ, 12,000 ಕಟ್ಟಡ ಬಾಡಿಗೆಯಲ್ಲಿದೆ. ನನ್ನ ಇಲಾಖೆ ಬಗ್ಗೆ ಕೇಳ್ತೀರಾ? ಬನ್ನಿ ನಿಮಗೆ ಎಲ್ಲಾ ಡೀಟೇಲ್ಸ್ ಕೊಡುತ್ತೇನೆ ಎಂದು ಹೇಳಿದರು.

ADVERTISEMENT

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮುಂದೆ ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವುದಕ್ಕೆ ಪರತಿಕ್ರಿಯಿಸಿದ ಸಚಿವೆ, ಆಂತರಿಕ ಕಚ್ಚಾಟದಿಂದ ಬಿಜೆಪಿ ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ. ಅದನ್ನು ಮರೆ ಮಾಚಲು ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರು.

ಪ್ರತಿಭಟನೆ ಸಂವಿಧಾನ ಬದ್ಧ ಹಕ್ಕು. ವಿರೋಧ ಪಕ್ಷಕ್ಕೆ ಮಾಡಲು ಬೇರೆ ಕೆಲಸ ಇಲ್ಲ ಪ್ರತಿಭಟನೆ ಮಾಡಲಿ. ಜಿಎಸ್‌ಟಿ ತರಲು ಆಗಿಲ್ಲ ಅದಕ್ಕೆ ಪ್ರತಿಭಟನೆ ಮಾಡ್ತಾರಾ. ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಅದರ ವಿರುದ್ಧ ಪ್ರತಿಭಟನೆ ಮಾಡ್ತಾರಾ, ಅಸಮರ್ಥ ಸಂಸದರ ವಿರುದ್ಧ ಬಿಜೆಪಿಯವರು ಪ್ರತಿಭಟನೆ ಮಾಡ್ತಾರಾ ಎಂದು ಪ್ರಶ್ನಿಸಿದರು.

ಯಾರನ್ನೂ ಗುರಿಯಾಗಿಸುತ್ತಿಲ್ಲ: ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿಗೆ ಬಾಗಲಕೋಟೆಗೆ ಮೂರು ತಿಂಗಳು ನಿಷೇಧ ಹೇರಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಯಾವ ವಾಗ್ಮಿ, ಭಾಷಣಕಾರರನ್ನು ನಾವು ಗುರಿಯಾಗಿಸುತ್ತಿಲ್ಲ. ಭಾಷಣ ವಿಷಯಧಾರಿತವಾಗಿರಬೇಕು ವಿಷಯಾಂತರ ಆಗಬಾರದು ಎಂದರು.

ಸಮಾಜದ ಕೋಮು ಸೌಹಾರ್ದತೆ ಕೆಡಿಸಬಾರದು. ವಿಷ ಬೀಜ ಬಿತ್ತಿ ಸಮಾಜ ಒಡೆಯಬಾರದು.ಅಂತವರ ವಿರುದ್ಧ ಕಾನೂನು ಕ್ರಮ ಆಗುತ್ತೆ. ಶ್ರೀಕಾಂತ ಶೆಟ್ಟಿ ಹಿಂದಿನ ಭಾಷಣಗಳನ್ನು ತೆಗೆದು ನೋಡಿ ಆಗ ಎಲ್ಲ ವಿಚಾರ ಅರಿವಾಗುತ್ತೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.