ಉಡುಪಿ: ನಗರದ ತುಂಬೆಲ್ಲ ಹೊಂಡ ಗುಂಡಿಗಳು ಬಿದ್ದಿದ್ದು, ಅವ್ಯವಸ್ಥೆ ವಿರುದ್ಧ ಜಿಲ್ಲಾ ನಾಗರಿಕ ಸಮಿತಿ ಗುರುವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿತು.
ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಹೊಂಡ ಗುಂಡಿಗಳ ಪಕ್ಕದಲ್ಲಿ ಆಂಬುಲೆನ್ಸ್ ನಿಲ್ಲಿಸಿ, ತಾಯಿ ಹಾಗೂ ಮಗುವಿನ ಗೊಂಬೆಗಳನ್ನು ಸ್ಟ್ರೆಚ್‌ರ್‌ನಲ್ಲಿಟ್ಟುಕೊಂಡು ಗುಂಡಿಬಿದ್ದ ರಸ್ತೆಯಲ್ಲಿ ಸಾಗಿಸುವ ಮೂಲಕ ಅಣಕು ಪ್ರದರ್ಶನ ನೀಡಿತು.
ನಗರಸಭೆ ವ್ಯಾಪ್ತಿಯ ಗುಂಡಿಬೈಲಿನಿಂದ ಅಡ್ಕದಕಟ್ಟೆ ಸಂಪರ್ಕಿಸುವ ರಸ್ತೆಯಲ್ಲಿ ನಡೆದ ಅಣಕು ಪ್ರದರ್ಶನ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಹಿಡಿದಂತಿತ್ತು.
ಬಳಿಕ ಮಾತನಾಡಿದ ನಿತ್ಯಾನಂದ ಒಳಕಾಡು, ಗುಂಡಿಬೈಲು ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವುದು ಸವಾಲಿನ ಕೆಲಸವಾಗಿದೆ. ಸ್ವತಃ ಆಂಬುಲೆನ್ಸ್‌ನಲ್ಲಿ ಗರ್ಭಿಣಿಯನ್ನು ಸಾಗಿಸುವಾಗ ಹೊಂಡ ಗುಂಡಿಗಳನ್ನು ತಪ್ಪಿಸಿ ವಾಹನ ಓಡಿಸುವುದು ಸವಾಲಾಗಿತ್ತು ಎಂದು ಅನುಭವ ಹಂಚಿಕೊಂಡರು.
ಶಾಲಾ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದಾಡಲು ತುಂಬಾ ಕಷ್ಟಪಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಗುಂಡಿಗಳಿಗೆ ಕಾಂಕ್ರೀಟ್ ಹಾಕಬೇಕು ಎಂದು ಒಳಕಾಡು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.