ಉಡುಪಿ: ಪದವಿ, ಸ್ನಾತಕೋತ್ತರ ಪದವಿ ಪಠ್ಯಗಳಿಂದ ಇಂದು ಹಳೆಗನ್ನಡ ದೂರವಾಗುತ್ತಿದೆ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಿರೀಶ್ ಭಟ್ ಅಜಕ್ಕಳ ಹೇಳಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಆವರಣದ ಆರ್‌ಆರ್‌ಸಿಯ ಧ್ವನ್ಯಾಲೋಕ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ಕೇಶವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಕಾಲೇಜುಗಳಲ್ಲಿ ಹಳೆಗನ್ನಡ ಪಾಠ ಮಾಡುವವರು ಯಾರು ಎಂಬ ಪ್ರಶ್ನೆಯೂ ಮೂಡುತ್ತಿದೆ. ಈ ಕಾರಣಕ್ಕೆ ಹಳೆಗನ್ನಡ ಸಾಹಿತ್ಯವನ್ನು ಪಠ್ಯದಿಂದ ಕೈಬಿಡಲಾಗುತ್ತಿದೆ ಎಂದರು.
ಕೇಶಿರಾಜನ ‘ಶಬ್ದಮಣಿ ದರ್ಪಣ’ ಕೃತಿ ಕೂಡ ಇಂದು ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪಠ್ಯದಲ್ಲೂ ಕಾಣದಾಗಿದೆ ಎಂದು ಅವರು ಹೇಳಿದರು.
ಇಂದಿನ ಮಕ್ಕಳಿಗೆ ಮಹಾಪ್ರಾಣವಿಲ್ಲದ ಕನ್ನಡ ಅಕ್ಷರ ಮಾಲೆಯನ್ನು ಕಲಿಸಿದರೆ ಅವರು ಹಳೆಗನ್ನಡ ಸಾಹಿತ್ಯವನ್ನು ಓದುವುದಾದರೂ ಹೇಗೆ? ಕೇವಲ ಅಲ್ಪಪ್ರಾಣ ಅಕ್ಷರ ಮಾಲೆಗಳನ್ನಷ್ಟೆ ಕಲಿಸಿದರೆ ಮುಂದೆ ಕನ್ನಡಕ್ಕೂ ಸಂಸ್ಕೃತ ಭಾಷೆಗೆ ಬಂದ ಪರಿಸ್ಥಿತಿ ಬರುವ ಸಾಧ್ಯತೆ ಇದೆ ಎಂದರು.
ಕನ್ನಡದಂತಹ ಸತ್ವ ಇರುವ ಸಾಹಿತ್ಯ ಪರಂಪರೆಯನ್ನು ತಿಳಿಯಬೇಕೆನ್ನುವ ಹಂಬಲ ಅಧ್ಯಯನಾಸಕ್ತರಿಗೆ ಒಂದಲ್ಲ ಒಂದು ಕಾಲದಲ್ಲಿ ಮೂಡಬಹುದು. ಆಗ ಕಾಲ ಮಿಂಚಿ ಹೋಗಿರುತ್ತದೆ ಎಂದು ಹೇಳಿದರು.
ಭಾಷಾ ಕೌಶಲ ಸಿಗಬೇಕಾದರೆ ಸಾಹಿತ್ಯ ಅಧ್ಯಯನ ಅಗತ್ಯವಿದೆ. ಭಾಷಾ ತರಗತಿಗಳ ಉದ್ದೇಶ ಏನು ಎಂಬುದನ್ನು ನಾವು ಅರ್ಥೈಸಿಕೊಂಡಿಲ್ಲ. ಇಂತಹ ತರಗತಿಗಳಲ್ಲಿ ಸಾಹಿತ್ಯದ ಮೂಲಕ ಭಾಷೆಯನ್ನು ಕಲಿಸುವ ಪ್ರಯತ್ನ ಮಾಡಬೇಕು ಎಂದು ಪ್ರತಿಪಾದಿಸಿದರು.
ಭಾಷಾ ತರಗತಿಗಳನ್ನು ನಿರ್ವಹಿಸುವಲ್ಲಿನ ಸಮಸ್ಯೆಯಿಂದಾಗಿ ಇಂದು ನಮ್ಮಲ್ಲಿ ವಿದ್ಯಾರ್ಥಿಗಳು ಮಾನವಿಕ ವಿಷಯಗಳ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಳೆಗನ್ನಡ ಸಾಹಿತ್ಯ ಇಂಗ್ಲಿಷ್ ಭಾಷೆಗೆ ಇನ್ನಷ್ಟು ಅನುವಾದಗೊಳ್ಳಬೇಕು ಎಂದರು.
ತಾಳ್ತಜೆ ವಸಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ. ರಮಾನಂದ ಬನಾರಿ ಅವರಿಗೆ ಕೇಶವ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಾಹೆ ಕುಲಸಚಿವ ಡಾ.ಪಿ. ಗಿರಿಧರ ಕಿಣಿ ಇದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು.ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಆರ್‌ಆರ್‌ಸಿ ಸಂಶೋಧಕ ಅರುಣ್ ಕುಮಾರ್ ಎಸ್.ಆರ್. ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಅನನ್ಯಾ ಎಸ್. ಶಿವತ್ತಾಯ ಪ್ರಾರ್ಥಿಸಿದರು.
ತಾಳ್ತಾಜೆ ಕೇಶವ ಭಟ್ಟರ ಭಾವಚಿತ್ರಕ್ಕೆ ಪುಷ್ಪನಮನ ಹಳಗನ್ನಡ ಓದಿನ ಕುರಿತು ಉಪನ್ಯಾಸ
ತಮ್ಮ ವ್ಯಕ್ತಿತ್ವವನ್ನು ಸಮಾಜದೊಂದಿಗೆ ಸಮೀಕರಿಸಿದ್ದವರು ತಾಳ್ತಾಜೆ ಕೇಶವ ಭಟ್ಟರು. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿರುವುದು ಅತೀವ ಸಂತೋಷ ತಂದಿದೆ
-ಡಾ. ರಮಾನಂದ ಬನಾರಿ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.