ADVERTISEMENT

ಉಡುಪಿ: ಸಮುದ್ರ ಸೇರಿದ ಕಡಲಾಮೆ ಮರಿಗಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ಮೊಟ್ಟೆಯಿಂದ ಹೊರಬಂದ ಮರಿಗಳು ಸುರಕ್ಷಿತವಾಗಿ ಸಮುದ್ರಕ್ಕೆ ತೆರಳಿದವು
ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ಮೊಟ್ಟೆಯಿಂದ ಹೊರಬಂದ ಮರಿಗಳು ಸುರಕ್ಷಿತವಾಗಿ ಸಮುದ್ರಕ್ಕೆ ತೆರಳಿದವು   

ಉಡುಪಿ: ಬೈಂದೂರು ವ್ಯಾಪ್ತಿಯ ಮರವಂತೆಯ ಕಡಲ ತೀರದಲ್ಲಿ ಸಂರಕ್ಷಿಸಲಾಗಿದ್ದ ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ಮೊಟ್ಟೆಯಿಂದ ಮರಿಗಳು ಹೊರಬಂದು ಕಡಲು ಸೇರಿವೆ.

ಮರವಂತೆ ಕಡಲ ತೀರದಿಂದ ಗುರುವಾರ ರಾತ್ರಿ 115 ಮರಿಗಳು ಸಮುದ್ರಕ್ಕೆ ಸೇರಿದವು.  ಕಡಲ ತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಟ್ಟಿದ್ದನ್ನು ಗಮನಿಸಿದ್ದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಮೀನುಗಾರರು ಕಡಲಾಮೆಯ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಿದರು.

ADVERTISEMENT

‘ಸಾಮಾನ್ಯವಾಗಿ 42 ರಿಂದ 60 ದಿವಸಗಳಲ್ಲಿ ಕಡಲಾಮೆ ಮರಿಗಳು ಮೊಟ್ಟೆಯೊಡೆದು ಹೊರ ಬರುತ್ತವೆ.  ಕಡಲಾಮೆ ಮೊಟ್ಟೆಯಿಟ್ಟ ಸ್ಥಳವನ್ನು ಗುರುತಿಸಿದ ಬಳಿಕ ನಾವು ಮೊಟ್ಟೆಗಳ ಸಂರಕ್ಷಣೆಗಾಗಿ ಗೂಡು ಮುಚ್ಚಿದ್ದೆವು. ಸ್ಥಳೀಯರಾದ ಕೊರಗು ಖಾರ್ವಿ ಮತ್ತಿತರರು ಸಹಕಾರ ನೀಡಿದ್ದಾರೆ’ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್‌ ಕುಮಾರ್‌ ತಿಳಿಸಿದರು.

‘ಸೆಪ್ಟೆಂಬರ್‌ನಿಂದ ಫೆಬ್ರುವರಿ ವರೆಗೆ ಕಡಲಾಮೆಗಳು ತೀರಕ್ಕೆ ಬಂದು ಮೊಟ್ಟೆ ಇಡುತ್ತವೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ರಾತ್ರಿ  ಕೂಂಬಿಂಗ್‌ ನಡೆಸಿ ಮೊಟ್ಟೆ ಇಟ್ಟ ಜಾಗವನ್ನು ಗುರುತಿಸಿ ಸಂರಕ್ಷಿಸುತ್ತೇವೆ’ ಎಂದೂ ಅವರು ವಿವರಿಸಿದರು.

‘ಮೊಟ್ಟೆಗಳಿರುವ ಪ್ರದೇಶದಲ್ಲಿ ಗೂಡಿನಿಂದ ಮುಚ್ಚದಿದ್ದರೆ ನಾಯಿಗಳು ಮೊಟ್ಟೆಗಳಿಗೆ ಹಾನಿ ಉಂಟು ಮಾಡುತ್ತವೆ. ಜನರು ನಡೆದಾಡುವಾಗಲೂ ಮೊಟ್ಟೆಗಳು ಒಡೆದುಹೋಗುವ ಅಪಾಯವಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಡಲಾಮೆ ಮೊಟ್ಟೆ ಇಡುವ ಅವಧಿಯಲ್ಲಿ ನಾವು ಕಡಲ ತೀರದಲ್ಲಿ ನಿಗಾ ಇರಿಸಿದ್ದೆವು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.