ADVERTISEMENT

ಆಸ್ಕರ್ ಫೆರ್ನಾಂಡಿಸ್‌: ಧರ್ಮ, ಜಾತಿ ಮೀರಿದ ರಾಜಕಾರಣಿ

ಪ್ರಜಾವಾಣಿ ವಿಶೇಷ
Published 14 ಸೆಪ್ಟೆಂಬರ್ 2021, 4:41 IST
Last Updated 14 ಸೆಪ್ಟೆಂಬರ್ 2021, 4:41 IST
ಆಸ್ಕರ್ ಫೆರ್ನಾಂಡಿಸ್‌ ಪತ್ನಿ ಬ್ಲಾಂ ಫೆರ್ನಾಂಡಿಸ್‌ ಜತೆ
ಆಸ್ಕರ್ ಫೆರ್ನಾಂಡಿಸ್‌ ಪತ್ನಿ ಬ್ಲಾಂ ಫೆರ್ನಾಂಡಿಸ್‌ ಜತೆ   

ಉಡುಪಿ: ಉಡುಪಿಯ ಮುನ್ಸಿಪಲ್‌ ಕೌನ್ಸಿಲ್‌ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಆಸ್ಕರ್ ಫರ್ನಾಂಡಿಸ್ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ನಪ್ರಭಾವಿ ನಾಯಕನಾಗಿ ಬೆಳೆದವರು. ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಆಸ್ಕರ್‌ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದವರು.

ಯುಪಿಎ ಸರ್ಕಾರದ ಅವಧಿಯಲ್ಲಿ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಕಾರ್ಮಿಕ ಸಚಿವರಾಗಿ ಮಹತ್ವದ ಹೊಣೆಗಾರಿಕೆ ನಿಭಾಯಿಸಿದ್ದರು. ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದ ಆಸ್ಕರ್ ಧರ್ಮ, ಜಾತಿ ರಾಜಕಾರಣವನ್ನು ಮೀರಿ ಬೆಳೆದವರು. 1980, 1984, 1989, 1991 ಹಾಗೂ 1996ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸಿದ್ದು ಅವರ ಹೆಗ್ಗಳಿಕೆ.

ಕರಾವಳಿಯಲ್ಲಿ ಕ್ರೈಸ್ತ ಸಮುದಾಯದ ಪ್ರಾಬಲ್ಯ ತೀರಾ ಕಡಿಮೆ ಇದ್ದರೂ ಇಲ್ಲಿನ ಮತದಾರರು ಐದು ಬಾರಿ ಆಸ್ಕರ್ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದರು. ಚುನಾವಣಾ ಪ್ರಚಾರ ಭಾಷಣಗಳಲ್ಲಿ ಎಂದಿಗೂ ಮಾತಿನ ಎಲ್ಲೆ ಮೀರದ ಅವರ ವ್ಯಕ್ತಿತ್ವ ವಿರೋಧ ಪಕ್ಷಗಳ ನಾಯಕರನ್ನೂ ಸೆಳೆದಿತ್ತು.

ADVERTISEMENT

ಕೇಂದ್ರ ಸಚಿವರಾದ ಬಳಿಕ ರಾಜ್ಯಕ್ಕೆ ಸಂಬಂಧಪಟ್ಟ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಸ್ಕರ್ ಶ್ರಮಿಸಿದ್ದರು. ಸಣ್ಣ ಉದ್ಯಮಿಗಳಿಗೆ ಹಾಗೂ ಕೃಷಿಕರಿಗೆ ಬ್ಯಾಂಕ್‌ನಲ್ಲಿ ಸುಲಭವಾಗಿ ಸಾಲ ಸಿಗಬೇಕು ಎಂಬ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದ್ದರು.

ಕೇಂದ್ರ ಸಾರಿಗೆ ಸಚಿವರಾಗಿದ್ದಾಗ ಕರಾವಳಿ ಭಾಗಕ್ಕೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೆದ್ದಾರಿಗಳ ನಿರ್ಮಾಣಕ್ಕೆ ಹೆಚ್ಚು ಪ್ರಾತಿನಿಧ್ಯ ದೊರೆಯಿತು. ಕೊಂಕಣ ರೈಲ್ವೆ ಯೋಜನೆಗಳ ಅನುಷ್ಠಾನ, ಶಾಲಾ, ಕಾಲೇಜುಗಳ ನಿರ್ಮಾಣ, ಸೇತುವೆ ಕಾಮಗಾರಿಗಳಿಗೆ ಆದ್ಯತೆ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಆಸ್ಕರ್ ನೀಡಿದ ಕೊಡುಗೆ ದೊಡ್ಡದು.

ವೈಯಕ್ತಿಯ ಜೀವನ:ಮಾರ್ಚ್‌ 27, 1941ರಲ್ಲಿ ರೋಖಿ ಫರ್ನಾಂಡಿಸ್‌ ಹಾಗೂ ಲಿಯೊನಿಸಾ ದಂಪತಿಯ ಪುತ್ರನಾಗಿ ಆಸ್ಕರ್ ಫರ್ನಾಂಡಿಸ್‌ ಉಡುಪಿಯಲ್ಲಿ ಜನಿಸಿದರು. ಕ್ಯಾಥೊಲಿಕ್ ಪಂಗಡಕ್ಕೆ ಸೇರಿರುವ ಆಸ್ಕರ್ 1981ರಲ್ಲಿ ಬ್ಲಾಸಂ ಅವರನ್ನು ವಿವಾಹವಾಗಿದ್ದು, ದಂಪತಿಗೆ ಪುತ್ರ ರೋಶನ್‌ ಹಾಗೂ ಪುತ್ರಿ ರೋಶನಿ ಇದ್ದಾರೆ.

ಪ್ರಾಥಮಿಕ ಶಿಕ್ಷಣ:ಉಡುಪಿಯ ಸೇಂಟ್‌ ಸಿಸಿಲಿಸ್ ಶಾಲೆ ಹಾಗೂ ಬೋರ್ಡ್‌ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಎಂಜಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.

1998ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ ಬಳಿಕ ಆಸ್ಕರ್ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಆದರೆ, ರಾಜ್ಯಸಭಾ ಸದಸ್ಯರಾಗಿ ಸಕ್ರಿಯವಾಗಿದ್ದರು. ಈಚೆಗೆ ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು.

ಪತ್ನಿಯನ್ನು ಬಿಟ್ಟಿರುತ್ತಿರಲಿಲ್ಲ:ಯಾವುದೇ ಸಮಾರಂಭದಲ್ಲಿ ಭಾಗವಹಿಸಿದ್ದರೂ ಆಸ್ಕರ್ ಅವರ ಜತೆಗೆ ಪತ್ನಿ ಬ್ಲಾಸಂ ಸದಾ ಜತೆಗಿರುತ್ತಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ವೇದಿಕೆಯಲ್ಲೂ ಪತಿ, ಪತ್ನಿ ಒಟ್ಟಾಗಿ ಕಾಣಿಸಿಕೊಳ್ಳುವುದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.