
ಬ್ರಹ್ಮಾವರ: ವೃತ್ತಿಯಲ್ಲಿ ಶಿಕ್ಷಕನಾದರೂ, ಕೃಷಿ ಕುಟುಂಬವಾದ ಕಾರಣ ವೃತ್ತಿಯೊಂದಿಗೆ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ತನ್ನ 3 ಎಕರೆ ಕೃಷಿ ಭೂಮಿಯಲ್ಲಿ ಭತ್ತದ ಕೃಷಿ ಮಾಡುತ್ತಿರುವುದಲ್ಲದೇ, ಆಸುಪಾಸಿನ ಇತರೆ ಕೃಷಿಕರ ಹಡಿಲು ಬಿದ್ದ ಭೂಮಿಯಲ್ಲೂ ಭತ್ತದ ನಾಟಿ ಕಾರ್ಯ ಮಾಡುತ್ತಿರುವ ಬಾರ್ಕೂರು ಹೊಸಾಳ ಗ್ರಾಮದ ನಾಗರಮಠದ ನಿವಾಸಿ ಶ್ಯಾಮಸುಂದರ ಶೆಟ್ಟಿ ಮಾದರಿಯಾಗಿದ್ದಾರೆ.
ಮಾರ್ಚ್, ಏಪ್ರಿಲ್ ತಿಂಗಳಿನಿಂದಲೇ ಕೃಷಿ ಚಟುವಟಿಕೆ ಆರಂಭಿಸುವ ಇವರು 60 ಎಕರೆ ಪ್ರದೇಶದಲ್ಲಿ 5ಸಾವಿರ ಮ್ಯಾಟ್ ಬಳಸಿ ಚಾಪೆ ನೇಜಿ ತಯಾರಿಸಿ ಬ್ರಹ್ಮಾವರ ಮತ್ತು ಕುಂದಾಪುರ ತಾಲ್ಲೂಕಿನ ಅನೇಕ ರೈತರಿಗೆ ಚಾಪೆ ನೇಜಿಯನ್ನು ಮಾರಾಟ ಮಾಡುತ್ತಿದ್ದಾರೆ.
ಅಲ್ಲದೇ ಆಸುಪಾಸಿನ ಬ್ರಹ್ಮಾವರ ತಾಲ್ಲೂಕಿನ ಚೇರ್ಕಾಡಿಯಿಂದ ಹಿಡಿದು ಕುಂದಾಪುರ ತಾಲ್ಲೂಕಿನ ಕೆರಾಡಿಯವರೆಗೆ ಏಳೆಂಟು ಎಕರೆ ಕೃಷಿ ಭೂಮಿಯಲ್ಲಿ ಸ್ವತಃ ಯಂತ್ರದಿಂದ ನಾಟಿ ಕಾರ್ಯ ಮಾಡುತ್ತಿದ್ದಾರೆ.
ಕೂಲಿಯಾಳುಗಳ ಸಮಸ್ಯೆಗೆ ಪರಿಹಾರ: ಒಂದು ಮ್ಯಾಟ್ ಚಾಪೆ ನೇಜಿಗೆ ಸುಮಾರು ₹115 ರಿಂದ ₹120 ಖರ್ಚು ಬೀಳುತ್ತಿದ್ದು, ಒಂದು ಎಕರೆಗೆ ಸುಮಾರು 70 ರಿಂದ 75 ಮ್ಯಾಟ್ ಬೇಕಾಗುತ್ತದೆ. ಭತ್ತದ ಕೃಷಿಗೆ ಕೂಲಿಯಾಳುಗಳ ಸಮಸ್ಯೆ ಇಂದು ಹೆಚ್ಚಿದ್ದು, ಅದನ್ನು ಈ ಚಾಪೆ ನೇಜಿಯಿಂದ ತಪ್ಪಿಸಬಹುದು. ಇದಲ್ಲದೇ ಯಂತ್ರಗಳ ಸಹಾಯದಿಂದ ನಾಟಿ ಕಾರ್ಯ ಮಾಡುವುದರಿಂದ ಸಮಯವೂ ಉಳಿತಾಯವಾಗುತ್ತದೆ. ಒಂದು ಯಂತ್ರದಿಂದ ದಿನಕ್ಕೆ ಸುಮಾರು 3 ಎಕರೆ ನಾಟಿ ಮಾಡಬಹುದು ಎಂದು ಶ್ಯಾಮಸುಂದರ್ ಪ್ರಜಾವಾಣಿಗೆ ತಿಳಿಸಿದ್ದಾರೆ.
ನೆರೆಗೂ ಬಗ್ಗದ, ಕೊಳೆಯದ ಗಿಡ: ಕಳೆದ ಹಲವಾರು ವರ್ಷಗಳಿಂದ ಎಂ.ಒ 4 ಭತ್ತದ ಬೀಜದಿಂದ ನೇಜಿ ತಯಾರಿಸುತ್ತಿರುವ ಇವರು ಸ್ವತಃ ತಾವೇ ಗುಣಮಟ್ಟದ ಬೀಜವನ್ನು ಶೇಖರಿಸಿ ನಾಟಿ ಕಾರ್ಯಕ್ಕೆ ಭತ್ತದ ಸಸಿ ಮಾಡುತ್ತಿದ್ದಾರೆ. ಕೃಷಿಕರ ಬೇಡಿಕೆಯಿದ್ದಲ್ಲಿ ಇತರೆ ಬೀಜಗಳ ನೇಜಿಯನ್ನು ಇವರು ತಯಾರಿಸಿ ಕೊಡುತ್ತಿದ್ದಾರೆ. ಮ್ಯಾಟ್‌ಗಳಿಂದ ತಯಾರಿಸಿದ ಚಾಪೆ ನೇಜಿ ಗದ್ದೆಯಲ್ಲಿ ನಾಟಿ ಮಾಡಿದಲ್ಲಿ ನೆರೆ ಬಂದರೂ ಬಗ್ಗದೆ, ಕೊಳೆಯದೇ ಉತ್ತಮ ಫಸಲು ನೀಡುತ್ತಿರುವುದು ಗಮನಾರ್ಹ.
ಆಂಧ್ರದ ಕೆಲಸಗಾರರು: ಪ್ರಸ್ತುತ ಭತ್ತದ ನಾಟಿಗೆ ನಾಲ್ಕು ಯಂತ್ರಗಳಿದ್ದು, ಅದನ್ನು ಆಂದ್ರ ಮೂಲದ ಕೆಲಸಗಾರರು ನಿರ್ವಹಿಸುತ್ತಿದ್ದಾರೆ. ಗದ್ದೆ ಉಳುಮೆಯಿಂದ ಹಿಡಿದು ನಾಟಿ ಕಟಾವು ಕಾರ್ಯದವರೆಗೂ ಇವರೇ ಆಸಕ್ತಿ ವಹಿಸಿ ಕೆಲಸ ಮಾಡಿಕೊಡುತ್ತಿರುವುದು ಶ್ಯಾಮಸುಂದರ ಅವರ ವಿಶೇಷತೆ.
ಅತಿ ಕಡಿಮೆ ಅವಧಿ: ಕೇವಲ 11 ರಿಂದ 20 ದಿನದೊಳಗೆ ಈ ಭತ್ತದ ಸಸಿಗಳನ್ನು ನಾಟಿ ಮಾಡುವುದು ಉತ್ತಮ. ಕಡಿಮೆ ಅವಧಿಯಲ್ಲಿ ಈ ಭತ್ತದ ಸಸಿಗಳನ್ನು ತಯಾರಿಸಬಹುದಾದರೂ, ಇದನ್ನು ಸಿದ್ದಪಡಿಸಲು ತಯಾರಿ ಹೆಚ್ಚಿದೆ.
ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಯನ್ನು ಇನ್ನೂ ಕೂಡಾ ಮುಂದುವರಿಸಿಕೊಂಡು ಹೋಗುತ್ತಿದ್ದು ಅದರಲ್ಲಿ ಖುಷಿಯೊಂದಿಗೆ ಲಾಭವನ್ನೂ ಪಡೆಯುತ್ತಿದ್ದೇನೆ.– ಶ್ಯಾಮಸುಂದರ ಶೆಟ್ಟಿ
ವರ್ಷದಿಂದ ವರ್ಷಕ್ಕೆ ಬೇಡಿಕೆ
ಹೆಚ್ಚು ಪ್ರತಿ ವರ್ಷ ಮ್ಯಾಟ್‌ನಿಂದ ತಯಾರಿಸಿದ ಭತ್ತದ ಸಸಿಗಳಿಗೆ ಕೃಷಿಕರಿಂದ ಬೇಡಿಕೆ ಹೆಚ್ಚುತ್ತಿದೆ. ಕಳೆದ ವರ್ಷ 8 ಸಾವಿರದಿಂದ 9ಸಾವಿರ ಬೇಡಿಕೆ ಇತ್ತು. ಈ ಬಾರಿ 13 ರಿಂದ 16ಸಾವಿರಕ್ಕೆ ಬೇಡಿಕೆ ಇದೆ ಎನ್ನುವ ಶ್ಯಾಮಸುಂದರ ಶೆಟ್ಟಿ ಕೃಷಿ ಲಾಭದಾಯಕ ಅಲ್ಲಅನ್ನುವ ಮಾತು ಎಲ್ಲೆಡೆ ಇಂದು ಕೇಳಿ ಬರುತ್ತಿದೆ. ಆದರೆ ಯಾಂತ್ರೀಕೃತ ನಾಟಿ ಕಾರ್ಯ ಮಾಡುವುದರಿಂದ ಉತ್ತಮ ಫಸಲು ಇಳುವರಿಯೊಂದಿಗೆ ಅಧಿಕ ಲಾಭವೂ ಸಿಗುತ್ತದೆ ಎನ್ನುತ್ತಾರೆ.
ಯುವ ಸಮೂಹಕ್ಕೆ ಕೃಷಿಯತ್ತ ಒಲವು ಮೂಡಿಸಲು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳುತ್ತಾರೆ. ಮಾಹಿತಿಗೆ ಬಾರ್ಕೂರು ನಾಗರಮದ ದುರ್ಗಾಗೋಧರತಿ ರೈಸ್ ಟ್ರಾನ್ಸ್‌ಪ್ಲಾಂಟರ್ಸ್ ಅವರನ್ನು ಸಂಪರ್ಕಿಸಬಹುದು 8105817727
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.