ADVERTISEMENT

2026ರ ಪರ್ಯಾಯಕ್ಕೆ ದಿನಕ್ಕೊಂದು ತಳಿಯ ಅಕ್ಕಿಯ ನೈವೇದ್ಯ: ಈಶಪ್ರಿಯತೀರ್ಥ ಸ್ವಾಮೀಜಿ

‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮದಲ್ಲಿ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 16:16 IST
Last Updated 2 ಜೂನ್ 2023, 16:16 IST
ಉಡುಪಿಯ ರಥಬೀದಿಯಲ್ಲಿರುವ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿದರು.
ಉಡುಪಿಯ ರಥಬೀದಿಯಲ್ಲಿರುವ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿದರು.   

ಉಡುಪಿ: ‘ಜೀವ ವೈವಿಧ್ಯ ಉಳಿವು ಇಂದಿನ ತುರ್ತು ಅಗತ್ಯವಾಗಿದ್ದು ನಶಿಸುವ ಹಂತದಲ್ಲಿರುವ ಭತ್ತದ ತಳಿಗಳನ್ನು ಉಳಿಸಿ ಬೆಳೆಸಬೇಕಿದೆ’ ಎಂದು ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಹಣವೇ ಮುಖ್ಯವಲ್ಲ; ಸಂತೃಪ್ತಿಯೇ ದೊಡ್ಡ ಸಂಪತ್ತು. ಮೂಲ ಬೇರುಗಳನ್ನು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.

ಭತ್ತದ ತಳಿಗಳನ್ನು ಉಳಿಸಿ ಬೆಳೆಸುವುದು ಪುಣ್ಯದ ಕೆಲಸ, ಅದಮಾರು ಮಠವೂ ಈ ಕೈಂಕರ್ಯಕ್ಕೆ ಕೈಜೋಡಿಸಲಿದೆ. ಶ್ರೀಮಠದ ಜಾಗದಲ್ಲಿ ಕೆಲವು ಭತ್ತದ ತಳಿಗಳನ್ನು ಬೆಳೆಸಿ ಮುಂದಿನ ಪರ್ಯಾಯಕ್ಕೆ ಅಕ್ಕಿ ಕೊಡಲಾಗುವುದು ಎಂದು ಸ್ವಾಮೀಜಿ ಹೇಳಿದರು.

ADVERTISEMENT

ಆರೋಗ್ಯಯುತ ಜೀವನಕ್ಕೆ ಸಾವಯವ ಕೃಷಿಯತ್ತ ಹೊರಳಬೇಕಾಗಿದೆ. ರಾಸಾಯನಿಕ ಮುಕ್ತ ಆಹಾರ ದೇವರ ಪ್ರಸಾದಕ್ಕೆ ಸಮನಾಗಿರುತ್ತದೆ. ಬೆಳೆದು ತಿನ್ನುವ ಸಂಸ್ಕೃತಿ ಹೆಚ್ಚಾಗಲಿ, ಸ್ಥಳೀಯ ಆಹಾರಗಳ ಬಳಕೆಗೆ ಒತ್ತು ಸಿಗಬೇಕು ಎಂದು ಆಶಿಸಿದರು.

ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ಟ್ರಸ್ಟಿ ಶ್ರೀವತ್ಸ ಚಕ್ಕೋಡಬೈಲು ಮಾತನಾಡಿ, ಪ್ರಕೃತಿಯಲ್ಲಿರುವ ವೈವಿಧ್ಯವನ್ನು ಅರಿತು ಸಂರಕ್ಷಿಸಿಕೊಳ್ಳುವ ಕಾರ್ಯ ತುರ್ತಾಗಿ ಆಗಬೇಕು. ಮನುಷ್ಯನ ತಪ್ಪು ನಿರ್ಧಾರಗಳಿಂದ ವೈವಿಧ್ಯ ನಾಶವಾದರೆ ಜಗತ್ತು ನಾಶವಾದಂತೆ ಎಂದು ಎಚ್ಚರಿಸಿದರು.

ಕೃಷಿ ಪ್ರಯೋಗ ಪರಿವಾರ ವೈವಿಧ್ಯಗಳ ದಾಖಲಾತಿಯನ್ನು ದಶಕಗಳಿಂದ ಮಾಡಿಕೊಂಡು ಬಂದಿದ್ದು 2000ದಲ್ಲಿ 106 ಜಾತಿಯ ಮಿಡಿ ಮಾವಿನ ತಳಿಗಳನ್ನು ಗುರುತಿಸಿ ದಾಖಲೀಕರಣ ಮಾಡಿತು. 2002ರಲ್ಲಿ 77 ಜಾತಿಯ ಹಲಸುಗಳನ್ನು ಗುರುತಿಸಿ ದಾಖಲಿಸಿತು. ಮುಂದುವರಿದು 33 ದೇಸಿ ತಳಿಯ ಆಕಳುಗಳನ್ನು ಗುರುತಿಸಿ ದೇಸಿ ಗೋವುಗಳನ್ನು ಉಳಿಸುವ ಸಂಕಲ್ಪ ಮಾಡಿತು.

ನಂತರ ಭತ್ತದ ತಳಿಗಳ ಬಗ್ಗೆ ಅಧ್ಯಯನ ನಡೆಸಿದಾಗ ಮಲೆನಾಡು ಹಾಗೂ ಕರಾವಳಿಯಲ್ಲಿ ಬಳಕೆಯಲ್ಲಿದ್ದು ನೇಪಥ್ಯಕ್ಕೆ ಸರಿದಿದ್ದು ಬಹಳಷ್ಟು ತಳಿಗಳ ಮಾಹಿತಿ ಸಿಕ್ಕವು. 2004ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಅಧ್ಯಯನ ನಡೆಸಿದಾಗ 72 ಭತ್ತದ ತಳಿಗಳ ಮಾಹಿತಿ ಸಂಗ್ರಹಿಸಲಾಯಿತು. ಭತ್ತದ ಗಾತ್ರ, ಕಟಾವಿನ ಅವಧಿ, ಇಳುವರಿ, ಹುಲ್ಲಿನ ಗಾತ್ರ, ಯಾವ ಭಾಗದಲ್ಲಿ ಬೆಳೆಯಲಾಗುತ್ತದೆ, ಗುಣ ಲಕ್ಷಣ ಹೀಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಪುಸ್ತಕ ಪ್ರಕಟಿಸಲಾಯಿತು.

20 ವರ್ಷಗಳ ಹಿಂದೆ ಸಾಗದರಲ್ಲಿ ಬಳಕೆಯಲ್ಲಿದ್ದ 60 ಭತ್ತದ ತಳಿಗಳ ಪೈಕಿ ಸದ್ಯ 30ಕ್ಕಿಂತ ಕಡಿಮೆ ತಳಿಗಳು ಉಳಿದುಕೊಂಡಿವೆ. ತೀರ್ಥಹಳ್ಳಿಯಲ್ಲಿ 2006ರಲ್ಲಿ ಬಳಕೆಯಲ್ಲಿದ್ದ 26 ಭತ್ತದ ತಳಿಗಳಲ್ಲಿ ಪ್ರಸ್ತುತ ಐದಾರು ತಳಿಗಳು ಮಾತ್ರ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಭತ್ತದ ತಳಿಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಿದ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ರೈತರ ಮಕ್ಕಳಿಗೆ ‘ಅನ್ನದ ಅರಿವು’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಬೀಜ ಸಂರಕ್ಷರ ಸಮಾವೇಶಗಳನ್ನು ಮಾಡಿ ಭತ್ತದ ತಳಿಗಳ ವಿನಿಯಮ ಮಾಡಿಕೊಳ್ಳಲಾಯಿತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಸಾಗಿ, 2026ರ ಸೋದೆ ಮಠದ ಪರ್ಯಾಯದಲ್ಲಿ ಪ್ರತಿದಿನ ಕೃಷ್ಣನಿಗೆ ಒಂದೊಂದು ಭತ್ತದ ತಳಿಯ ನೈವೇದ್ಯ ಅರ್ಪಿಸಲು ಸಂಕಲ್ಪಿಸಲಾಗಿದೆ ಎಂದರು.

ಟ್ರಸ್ಟ್‌ನ ಸಂಕಲ್ಪಕ್ಕೆ ಸೋದೆ ಮಠದ ಶ್ರೀಗಳು ಕೈಜೋಡಿಸಿದ್ದು ‘ಶುದ್ಧ ನೈವೇದ್ಯ ಸಮರ್ಪಣಂ’ ಹೆಸರಿನಲ್ಲಿ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ. ಬೊಗಸೆ ಭತ್ತ ಬೀಜ ಪ್ರದಾನ ಕಾರ್ಯಕ್ರಮದಲ್ಲಿ ಭತ್ತದ ತಳಿಗಳನ್ನು ಉತ್ಸಾಹಿ ರೈತರಿಗೆ ವಿತರಿಸಲಾಗುತ್ತಿದೆ. ಭತ್ತದ ಬೀಜ ಪಡೆದವರು 2026ರ ಹೊತ್ತಿಗೆ ಅಕ್ಕಿಯನ್ನು ದೇವರಿಗೆ ಅರ್ಪಿಸಲಿದ್ದಾರೆ. ಈ ಕಾರ್ಯಕ್ಕೆ ಭಾರತೀಯ ಕಿಸಾನ್ ಸಂಘ, ಸಾವಯವ ಕೃಷಿ ಪರಿವಾರ, ಕೇದಾರೋತ್ಥಾನ ಟ್ರಸ್ಟ್ , ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಸಹಕಾರ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಧನಜಂಯ್‌, ತಳಿ ಸಂರಕ್ಷಕರಾದ ಅಸ್ಮಾ ಭಾನು,‌ ಕೃಷಿ ಪ್ರಯೋಗ ಪರಿವಾರದ ವಿಶ್ವಸ್ತರಾದ ಶ್ರೀನಿವಾಸ ಭಟ್ ಇರ್ವತ್ತೂರು, ಕೇದಾರೋತ್ಥಾನ ಟ್ರಸ್ಟ್ ಅಧ್ಯಕ್ಷರಾದ ರಘುಪತಿ ಭಟ್‌ ಇದ್ದರು. ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರೂಪಿಸಿದರು.

‘ಬೊಗಸೆ ಭತ್ತ ಬೀಜ ಪ್ರದಾನ’ ಕಾರ್ಯಕ್ರಮದಲ್ಲಿದ್ದ ಭತ್ತದ ತಳಿಗಳು

Highlights - quality engineer

Cut-off box - ಪ್ರದರ್ಶನದಲ್ಲಿದ್ದ ಭತ್ತದ ತಳಿಗಳು ಹೊನ್ನೆಕಟ್ಟು ಬಾಳೆಸುಳಿ ಬಿಳಿಕಗ್ಗ ಮಣಿಪುರ ಭತ್ತ ಬಾಸುಮತಿ ಮೇಘಾಲಯ–2 ಹಾಲುಬೈಲು ಬೆನಕ ಗಿಡ್ಡಭತ್ತ ಶಂಕಿತ ದೊಡ್ಡಿಗ್ಯಾ ಕುಟ್ಟಿಮಂಜ ಮಗದ್ ಸುಗಂಧ ಅಮೃತ ಕರ್ಣ ಪೆನ್ನಿ ಮಾರ್ನಾಮಿ ಶಿವಾದಪ್ಪವಾಳ್ಯ ಸುಹಾಸ ಜೋಹಾ ಕೈಸಾರಿ ಚಳ್ಳಿ ಮಟ್ಟಳಗ ಮಕ್ಕಿಣ್ಣ ಸಣ್ಣ ಬಿಳಿನೆಲ್ಲು ಕರಿಯದಡಿ ದೊಡ್ಡಿ ಹಾಲ್ ದೊಡ್ಡಿಗ ಮಟ್ಟಳಗ ನಾಗಭತ್ತ ಥೈಲಾಂಡ್ ಭತ್ತ ಚಿನ್ನಪೊನ್ನಿ ಪಾಲಕ್‌ ಪಾಕಿಸ್ತಾನಿ ಬಾಸುಮತಿ ಸಾಂಬೋಮೊಸಮ್ ಕಾರ್ತಿಕ ಕೆಎಂಪಿ ಮುಂಡೋನಿ ಅಂಬೆಮೊಹರಿ ಗೋಪಿಕಾ ವಲ್ತಿಗ ಅಂಕುರ ಸೋನಾ ಎಂಒ–4 ಮಲ್ಲಿಗೆ ಎಚ್‌ಎಂಟಿ ಮಾರ್ನಾಮಿ ದೊಡ್ಡಿಗ ಗಡ್ರಗದ್ಲ ಬಿಳಜಡ್ಡು ಕಾಲಜೀರಾ ಮೇಘಾಲಯ ಚಿನಾಮಣಿ ಕೆಂಪು ಸುಣ್ಣ ಸಣ್ಣಕ್ಕಿ ಸಿದ್ದಣ್ಣ ನಟ್ಟಿಜಡ್ಡು ದೊಡ್ಡಭತ್ತಕಬ್ಬಗ ಉದುರು ಮಲ್ಲಿಗೆ ಕಪ್ಪು ಭತ್ತ ಚಿನಕಾಮಣಿ ಕೀರ್ವಾಣಿ ಜ್ಯೋತಿ ರಾಜಮುಡಿ ಜಿಗ್ ಮರಾಟಿಗ ಆಂಡ್ರಿಸಾಲ್‌ ಹಳಗ ಹಳಗ –1 ಕೆಂಪುಕಾರ್ ಬಂಗಾರ ಗುಂಡು ನಾಟಿಭತ್ತ ಗಂಧಸಾಲೆ ಸೇಲಂ ಸಣ್ಣ ಕರಿದಡಿಪಾಳ್ಯ ಪದ್ಮರೇಖಾ ಬರ್ಮಾ ಮೇಘಾಲಯ ಕಪ್ಪು ತುಂಗಾ ಬೋರಾ ಹೊನಸು ನೇಸರ ಮಹಾಲಯ ಮಂಜಗುಣಿ ಸಣ್ಣ ಗುಲ್ವಾಡಿ ಸಣ್ಣಕ್ಕಿ ಕೊಯಮತ್ತೂರು ಸಣ್ಣ ಕೆಂಪುದಡಿ ಡಾಂಬಾರ್ ಸಾಳಿಬಿಕೆಬಿಎಂ 23 ಸುಮ ಮಸೂರಿ ಕುಲಂಗಿ ಪಿಳ್ಳೆ ಸಿದ್ದಸಾಲ ಆನಂದಿ ಉದರಸಾಲಿ ಮಂಜುಳಾ ಸೋನಾ ದಬ್ಬಣಸಾಲ ಮುಳ್ಳುಭತ್ತ ಎಚ್‌.ಆರ್‌.ಐಸೂರು ಕರಿಕಂಟಕ ಚಿಪ್ಪಗ ಸೇರಿದಂತೆ 250ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.