
ಕಾಪು (ಪಡುಬಿದ್ರಿ): ಬೆಳೆಯುತ್ತಿರುವ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಅಗತ್ಯವಾಗಿದ್ದು ಇದಕ್ಕಾಗಿ ಜಾಗ ಗುರುತಿಸಿ ಶೀಘ್ರ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳು ಮತ್ತು ಸದಸ್ಯರಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚಿಸಿದರು.
ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಮೂಳೂರಿನಲ್ಲಿ ಘಟಕ ನಿರ್ಮಾಣಕ್ಕೆ ಮೀಸಲಾದ 1.78 ಎಕರೆ ಜಾಗ ಜಲಾವೃತವಾಗುವ ಪ್ರದೇಶವಾಗಿದ್ದು ಎಸ್‌ಟಿಪಿಗೆ ಯೋಗ್ಯವಲ್ಲ ಎಂದು ಕೆಯುಐಡಿಎಪ್‌ಸಿ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ನಾಗರಾಜ್ ಮಾತನಾಡಿ ಯೋಜನೆಗೆ ನೀಡಿರುವ ₹4.34 ಕೋಟಿ ಪರಿಸರ ಪರಿಹಾರ ನಿಧಿ, ನಿಗದಿತ ಅವಧಿಯಲ್ಲಿ ಬಳಸದೇ ಹೋದರೆ ಅನುದಾನ ವಾಪಸ್ ಆಗಿ ಮುಂದಿನ ಅನುದಾನ ಕಡಿತದ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಗೂಡಂಗಡಿ ಬಗ್ಗೆ ಅಸಮಾಧಾನ: ಕಾಪು ಪೇಟೆಯಲ್ಲಿ ಎಲ್ಲೆಂದರಲ್ಲಿ ನಿರ್ಮಾಣವಾಗುತ್ತಿರುವ ಗೂಡಂಗಡಿಗಳು ನೈರ್ಮಲ್ಯ ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿವೆ ಎಂದು ಸದಸ್ಯರಾದ ಮೊಹಮ್ಮದ್ ಆಸೀಫ್ ಮತ್ತು ಸತೀಶ್ ಮೂಳೂರು ಬೇಸರ ವ್ಯಕ್ತಪಡಿಸಿದರು. ಉತ್ತರಿಸಿದ ಅಧಿಕಾರಿಗಳು ಪುರಸಭೆ ವ್ಯಾಪ್ತಿಯಲ್ಲಿ 67 ಗೂಡಂಗಡಿಗಳು ದಾಖಲಾಗಿದ್ದು ದೂರು ಬಂದಿಲ್ಲ ಎಂದು ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಗೂಡಂಗಡಿಗಳ ಗಾತ್ರ ಮತ್ತು ಸ್ಥಳಕ್ಕೆ ನಿಬಂಧನೆ ಹಾಕಿ ಮುಂದಿನ ಸಭೆಯಲ್ಲಿ ಈ ವಿಷಯ ಮತ್ತೆ ಬಾರದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಬೀದಿ ನಾಯಿಗಳ ಸಮಸ್ಯೆ:ಪುರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಇದ್ದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪ್ರತಿವರ್ಷ ₹5 ಲಕ್ಷ ಅನುದಾನ ಮೀಸಲಾಗಿದೆ. ಒಂದು ನಾಯಿಗೆ ₹2000 ವೆಚ್ಚವಾಗುತ್ತಿದ್ದು, ಟೆಂಡರ್‌ದಾರರು ಮುಂದೆ ಬರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಪಶು ವೈದ್ಯಾಧಿಕಾರಿ, ಮಣಿಪಾಲದ ಖಾಸಗಿ ಏಜೆನ್ಸಿಯೊಂದರ ಜೊತೆ ಮಾತುಕತೆ ನಡೆಯುತ್ತಿದ್ದು ಪುರಸಭೆಯ ಅನುಮೋದನೆ ದೊರೆತ ಬಳಿಕವೇ ಕಾರ್ಯಾರಂಭವಾಗಲಿದೆ ಎಂದರು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ ಇದ್ದರು.
ಅಂಗನವಾಡಿಗಳಲ್ಲಿ ಸೌಕರ್ಯ ಕೊರತೆ: ಪುರಸಭೆ ವ್ಯಾಪ್ತಿಯಲ್ಲಿ 19 ಅಂಗನವಾಡಿಗಳಿದ್ದು 10 ಸ್ವಂತ ಕಟ್ಟಡ ಹೊಂದಿವೆ. 3 ಬಾಡಿಗೆ 1 ಪರ್ಯಾಯ 1 ಸಮುದಾಯಭವನ 1 ಪಂಚಾಯಿತಿ ಕಟ್ಟಡದಲ್ಲಿದೆ. ಕೆಲ ಅಂಗನವಾಡಿಗಳಿಗೆ ಪಹಣಿಯೇ ಇಲ್ಲ ಎಂದು ಅಂಗನವಾಡಿ ಮೇಲ್ವಿಚಾರಕಿ ಗಮನಕ್ಕೆ ತಂದರು. ಪುರಸಭೆ ವ್ಯಾಪ್ತಿಯ ಅಂಗನವಾಡಿಗಳ ನಿರ್ವಹಣೆಗೆ ಇಲಾಖೆಯಿಂದ ಅನುದಾನ ಲಭ್ಯವಾಗುತ್ತಿಲ್ಲ ಎಂದರು. ಅಂಗನವಾಡಿಗಳ ಸಮಸ್ಯೆಗಳ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಅನಿಲ್ ಸೂಚಿಸಿದರು. ಅನಧಿಕೃತ ಕಟ್ಟಡ ತೆರವುಗೆ ಸೂಚನೆ: ಪುರಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡ ತೆರವುಗೆ ತಹಸೀಲ್ದಾರ್ ಸೂಚನೆ ನೀಡಿದ್ದು ಇದರ ಬಗ್ಗೆ ಸದಸ್ಯ ಅಮೀರ್ ಪ್ರಶ್ನೆ ಎತ್ತಿದರು. ಮುಖ್ಯಾಧಿಕಾರಿ ನಾಗರಾಜ್ ಅವರು ಅಗತ್ಯ ದಾಖಲೆಗಳ ಪರಿಶೀಲನೆಯ ಬಳಿಕ ನಿಯಮಾನುಗತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.