ADVERTISEMENT

ಪಡುಬಿದ್ರಿ: 790 ವಿದ್ಯಾರ್ಥಿಗಳಿಗೆ ₹ 25 ಲಕ್ಷ ವಿತರಣೆ

ಸರ್ಕಾರಿ ಶಾಲೆಗಳ 8 ಸಾವಿರ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಪರಿಕರ ವಿತರಣೆ: ಅದಾನಿ ಸಮೂಹದ ಕಿಶೋರ್ ಆಳ್ವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:49 IST
Last Updated 1 ಮಾರ್ಚ್ 2026, 8:49 IST
ವಿದ್ಯಾರ್ಥಿ ವೇತನ ಪಡೆದವರು ಗಣ್ಯರ ಜೊತೆ ನಗೆಸೂಸಿದರು
ವಿದ್ಯಾರ್ಥಿ ವೇತನ ಪಡೆದವರು ಗಣ್ಯರ ಜೊತೆ ನಗೆಸೂಸಿದರು   

ಪಡುಬಿದ್ರಿ: ಎಲ್ಲೂರಿನ ಅದಾನಿ ವಿದ್ಯುತ್ ಸ್ಥಾವರ ಯೋಜನಾ ಪ್ರದೇಶದ ವ್ಯಾಪ್ತಿಯ 12 ಗ್ರಾಮ ಪಂಚಾಯಿತಿಗಳ 790 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು ₹ 25 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಸಂಸ್ಥೆ ಪ್ರತಿವರ್ಷ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆರವು ನೀಡಿ ಸ್ಥಾವರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.

ವೈಯಕ್ತಿಕ ಬೆಳವಣಿಗೆಗೆ ಹಾಗೂ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಬಲವಾದ ಅಡಿಪಾಯ ಹಾಕುತ್ತದೆ. ನಿರಕ್ಷರರಾಗಿರುವ ಸ್ಥಿತಿಯನ್ನು ಇಲ್ಲದೆ ಮಾಡುವುದು ಹಾಗೂ ಗ್ರಾಮೀಣ, ಸೌಲಭ್ಯ ಸಿಗದ ಸಮುದಾಯಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲು ಮಹತ್ವ ನೀಡಿ ಅದಾನಿ ಫೌಂಡೇಷನ್ ಸಿಎಸ್‌ಆರ್ ಚಟುವಟಿಕೆಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.

ADVERTISEMENT

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ 8 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯುತ್ ಸ್ಥಾವರದ ಭೇಟಿ ಮೂಲಕ ಕೈಗಾರಿಕಾ ಪರಿಸರದ ಅರಿವು ಪಡೆಯುವ ಅವಕಾಶವನ್ನೂ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ವಿದ್ಯಾರ್ಥಿ ಜೀವನದಲ್ಲೇ ಸೇವಾಮನೋಭಾವ ಬೆಳೆಯಬೇಕು. ಟಾಪರ್‌ಗಳಾಗಲು ಸಮಯ ಮೀಸಲಿಡದೆ ಜೀವನದಲ್ಲಿ ಸಾಧಕರಾಗಲು ಮುಂದೆ ಬರಬೇಕು ಎಂದರು.

ತೆಂಕ ಗ್ರಾಮ ಪಂಚಾಯಿತಿಯ ಸುರೇಖಾ, ಕಸ್ತೂರಿ ಪ್ರವೀಣ್, ಮಜೂರು ಗ್ರಾಮ ಪಂಚಾಯಿತಿಯ ಜನಾರ್ದನ ಆಚಾರ್ಯ, ಹೆಜಮಾಡಿ ಗ್ರಾಮ ಪಂಚಾಯಿತಿಯ ರೇಷ್ಮಾ ಮೆಂಡನ್, ಇನ್ನಾ ಗ್ರಾಮ ಪಂಚಾಯಿತಿಯ ಸರಿತಾ ಶೆಟ್ಟಿ, ಬಳ್ಕುಂಜೆ ಗ್ರಾಮ ಪಂಚಾಯಿತಿಯ ಮಮತಾ ಪೂಂಜಾ, ಎಲ್ಲೂರು ಗ್ರಾಮ ಪಂಚಾಯಿತಿಯ ಉಷಾ, ಪಡುಬಿದ್ರಿ ಗ್ರಾಮ ಪಂಚಾಯಿತಿಯ ಹೇಮಚಂದ್ರ, ಅದಾನಿ ಸಂಸ್ಥೆಯ ಎಜಿಎಂ ರವಿ ಆರ್ ಜೀರೆ, ಅನುದೀಪ್, ಶುಭಮಂಗಲ ಪಾಲ್ಗೊಂಡಿದ್ದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.