ಪಡುಬಿದ್ರಿ: ಇಲ್ಲಿನ ಠಾಣೆ ಉಚ್ಚಿಲ ಪೇಟೆಯಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ, ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಪಾದಚಾರಿ ಶಂಕರ ಶೆಟ್ಟಿ (65), ಬೈಕ್ ಸವಾರ ದರ್ಶನ್‌ರಾಜ್ (21) ಮೃತಪಟ್ಟವರು. ನತಾಶಾ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು- ಉಡುಪಿ ಏಕಮುಖ ರಸ್ತೆ ಬದಿ ನಿಂತಿದ್ದ ಶಂಕರ ಶೆಟ್ಟಿ ಅವರಿಗೆ ಬೈಕ್ ಡಿಕ್ಕಿಯಾಗಿ ಅವಘಡ ನಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದಾರೆ. ಹೆದ್ದಾರಿಗೆ ಬಿದ್ದ ಬೈಕ್ ಸವಾರ ದರ್ಶನ್‌ರಾಜ್ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ ವೇಳೆಗೆ ಅವರು ಮೃತಪಟ್ಟರು.
ಶಂಕರ್ ಶೆಟ್ಟಿ ಅವರು ಹೋಟೆಲ್ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದರು. ಕಾಪುವಿನ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದರು. ಎರ್ಮಾಳಿನ ಮೂಲ ಮನೆಗೆ ಬಂದಿದ್ದ ಅವರು ರಾತ್ರಿ ಕಾಪುವಿಗೆ ಹಿಂತಿರುಗುವಾಗ ಅಪಘಾತ ನಡೆದಿದೆ. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.
ದರ್ಶನ್‌ರಾಜ್ ಮಂಗಳೂರಿನ ಪಾಂಡೇಶ್ವರ ನಿವಾಸಿಯಾಗಿದ್ದು, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಯ ಹೋಟೆಲ್ ಮ್ಯಾನೇಜ್‌ಮೆಂಟ್‌ನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.