ADVERTISEMENT

ಪಡುಬಿದ್ರಿ: ದಸರಾ ಕಳೆ ಹೆಚ್ಚಿಸಿದ ವಸ್ತು ಪ್ರದರ್ಶನ

ಉಡುಪಿ ಉಚ್ಚಿಲ ದಸರಾ: ಜನಾಕರ್ಷಣೆಯ ಜನಜಾಗೃತಿ ಮೂಡಿಸುವ ಕಲಾಕೃತಿಗಳು

ಹಮೀದ್ ಪಡುಬಿದ್ರಿ
Published 26 ಸೆಪ್ಟೆಂಬರ್ 2025, 5:11 IST
Last Updated 26 ಸೆಪ್ಟೆಂಬರ್ 2025, 5:11 IST
ವಸ್ತುಪ್ರದರ್ಶನದ ಪ್ರವೇಶ ದ್ವಾರ
ವಸ್ತುಪ್ರದರ್ಶನದ ಪ್ರವೇಶ ದ್ವಾರ   

ಪಡುಬಿದ್ರಿ: ಸಮುದ್ರದ ಮತ್ತು ಹೊಳೆಯ ಮೀನುಗಳು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ, ನಿರುಪಯುಕ್ತ ವಸ್ತುಗಳಿಂದ ತಯಾರಿಸಿರುವ ಕಲಾಕೃತಿಗಳು, ತೆಂಗಿನ ಸೋಗೆಯ ದ್ವಾರ, ಕುಬ್ಜ ಅಣ್ಣ –ತಂಗಿಯರು ರಚಿಸಿರುವ ಬಗೆ ಬಗೆಯ ವಸ್ತುಗಳು...

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ ಉಡುಪಿ– ಉಚ್ಚಿಲ ದಸರಾದಲ್ಲಿ ಹಮ್ಮಿಕೊಂಡಿರುವ ವಸ್ತುಪ್ರದರ್ಶನದಲ್ಲಿ ಈ ಕಲಾಕೃತಿಗಳು ಜನರನ್ನು ಸೆಳೆಯುತ್ತಿವೆ.

ತೆಂಗಿನಗರಿ ಮತ್ತು ನಿರುಪಯುಕ್ತ ಬಾಟಲಿಗಳನ್ನು ಸಂಗ್ರಹಿಸಿ ಅವುಗಳ ಮೂಲಕ ರಚಿಸಿದ ಸ್ವಾಗತ ದ್ವಾರ ಆಕರ್ಷಣೀಯವಾಗಿದೆ. ಇಲ್ಲಿಗೆ ಭೇಟಿ ನೀಡುವವರನ್ನು ಪ್ರಮುಖವಾಗಿ ಆಕರ್ಷಸುತ್ತಿದೆ. ಪ್ರವೇಶ ದ್ವಾರದ ಪಕ್ಕದಲ್ಲಿಯೇ ಎತ್ತಿನ ಗಾಡಿ ಗಮನಸೆಳೆಯುತ್ತಿದೆ.

ADVERTISEMENT

ಫಲಪುಷ್ಪ ಪ್ರದರ್ಶನ: ವಸ್ತುಪ್ರದರ್ಶನದ ಒಳ ಪ್ರವೇಶಿಸಿದಂತೆ ಆಕರ್ಷಿಸುವುದೇ ಫಲಪುಷ್ಪ ಪ್ರದರ್ಶನ. ವಿವಿಧ ಬಗೆಯ ಹೂವು, ಹಣ್ಣುಗಳಿಂದ ತಯಾರಿಸಿದ ಕಲಾಕೃತಿಗಳ, ವಿವಿಧ ಬಗೆಯ ಪ್ರಾಣಿ, ಪಕ್ಷಿಗಳನ್ನು ಹೋಲುವ ಹೂವು, ಹಣ್ಣುಗಳಿಂದ ತಯಾರಿಸಿದ ಕಲಾಕೃತಿಗಳು ಮೆರುಗು ನೀಡುತ್ತಿವೆ.

ಕಲ್ಲುಗಳಿಗೆ ಜೀವ: ವಸ್ತು ಪ್ರದರ್ಶನದ ರೂವಾರಿ ಯತೀಶ್ ಕಿದಿಯೂರು ದಂಪತಿ  ನಿರ್ಮಿಸಿರುವ ಕಲ್ಲಿನ ಕಲಾಕೃತಿ, ತರಕಾರಿ ಮತ್ತು ಹಣ್ಣು ಹಂಪಲುಗಳಿಂದ ಸಿದ್ದಗೊಂಡ ಕಲಾಕೃತಿಗಳು ಜನಾಕರ್ಷಣೆಯ ಕೇಂದ್ರವಾಗಿವೆ. ಹೊಳೆಯಲ್ಲಿ ಸಿಗುವ ಸಾಮಾನ್ಯ ಕಲ್ಲುಗಳಿಗೆ ಜೀವ ತುಂಬಲಾಗಿದೆ.

ಮಂಡಲ ಆರ್ಟ್, ಕುಪ್ಪಿ ಅರ್ಟ್, ಫೋಟೋ ಗ್ಯಾಲರಿ,  ಬುಟ್ಟಿ ತಯಾರಿ, ಜಲಪೂರಣ ಪ್ರಾತ್ಯಕ್ಷಿಕೆ, ಉಡುಪಿ ಕೈಮಗ್ಗ, ಆವೆ ಮಣ್ಣಿನಿಂದ ಮಡಕೆ ತಯಾರಿ, ಕತ್ತಿ ತಯಾರಿ, ಮರಳು ಶಿಲ್ಪ, ಗಾಣದ ಎತ್ತುಗಳ ಮೂಲಕ ತಾಜಾ ಕಬ್ಬಿನ ರಸ ತೆಗೆಯುವುದು,  ಪುಸ್ತಕ ಪ್ರದರ್ಶನ, ಮಡಕೆ ಮೇಲೆ ಚಿತ್ತಾರಗಳು ಗಮನ ಸೆಳೆದಿವೆ. ಎಂಜಿನಿಯರಿಂಗ್ ಪದವೀಧರ ಶಂಕರ್ ಕುಲಾಲ್ ಅವರ ಮಡಕೆ ತಯಾರಿ ಪ್ರಮುಖ ಆಕರ್ಷಣೆಯಾಗಿದೆ.

ಜನಜಾಗೃತಿಯ ಕಲಾಕೃತಿಗಳು: ಕುಡಿತದ ಚಟದ ದುಷ್ಪರಿಣಾಮದ ಬಗೆಗಿನ ಕಲಾಕೃತಿ ಬಲುಮೆಚ್ಚುಗೆ ಗಳಿಸಿದೆ. ಪರಿಸರದ ಉಳಿಸಿ, ಸ್ವಚ್ಛಭಾರತ್, ಆರೋಗ್ಯದ ಬಗ್ಗೆ, ಪ್ಲಾಸ್ಟಿಕ್ ವಿರುದ್ಧ ಜಾಗೃತಿ, ಹೃದಯಾಘಾತ, ಅತಿಯಾದ ಮೊಬೈಲ್ ಬಳಕೆ, ಪರಿಸರ ನಾಶ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕಲಾಕೃತಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಜಲಚರಗಳ ರಕ್ಷಣೆ, ಕಡಲಾಮೆಯ ಸಂರಕ್ಷಣೆ, ಹಕ್ಕಿಗಳ ಸಂತತಿ ರಕ್ಷಣೆ  ಬಗ್ಗೆ ಕಲಾವಿದ ವೆಂಕಿ ಪಲಿಮಾರ್ ಅವರು ಆವೆ ಮಣ್ಣಿನಿಂದ ತಯಾರಿಸಿದ ಕಲಾಕೃತಿಗಳು  ವಿಶಿಷ್ಟವಾಗಿವೆ. ಪ್ರತಿಯೊಂದು ಕಲಾಕೃತಿಯೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತಿದೆ.

ಕುಬ್ಜ ಅಣ್ಣತಂಗಿಯರ ಕಲಾಕೃತಿಗಳು: ಶಿರ್ವದ ಪಂಜಿಮಾರು ಗ್ರಾಮದ ಅಣ್ಣ ತಂಗಿಯರಾದ ಕುಬ್ಜರಾದ ಗಣೇಶ್ ಪಂಜಿಮಾರು ಮತ್ತು ಸುಮಾ ತಯಾರಿಸಿದ ಕಲಾಕೃತಿಗಳು ಬಲು ಬೇಡಿಕೆ ಪಡೆದಿವೆ. ವಿಶೇಷ ಮಕ್ಕಳ ಕಲಾಕೃತಿಗಳೂ ಪ್ರದರ್ಶನದಲ್ಲಿದೆ. ಜಿಲ್ಲಾ ಪಾಣಾರ ಸಂಘದ ತೆಂಗಿನ ಸಿರಿಯ ಕಲಾಕೃತಿಗಳು ಇಲ್ಲಿವೆ.

ಮೊಗವೀರ ದಾಖಲೆಗಳು: 101 ವರ್ಷಗಳ ಇತಿಹಾಸದ ಮೊಗವೀರ ಮಹಾಜನ ಸಂಘದ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ದಾಖಲೀಕರಣಗೊಳಿಸಿ ಪ್ರದರ್ಶನಕ್ಕೆ ಇಡಲಾಗಿದೆ.  ವಿ.ಕೆ. ಯಾದವ್ ಅವರು ಇತಿಹಾಸ ಅಧ್ಯಯನ ಆಸಕ್ತರಿಗಾಗಿ  ಇವುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟದ್ದಾರೆ. ಮೊಗವೀರ ಸಂಘಟನೆಗಳ ಬಗ್ಗೆ ಸಂಶೋಧನೆ ನಡೆಸುವವರಿಗೆ  ದಾಖಲೆಗಳೂ ಲಭ್ಯವಾಗಿದೆ. 

ವಿವಿಧ ಪಕ್ಷಿಗಳು: ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ಬ್ಲೂ ಗೋಲ್ಡ್ ಮೆಕಾವ್ ಪ್ರಮುಖ ಆಕರ್ಷಣೆಯಾಗಿದೆ. ಕಪ್ಪು ಬಾತುಕೋಳಿ, ಕೊಕೆಟೋ, ಸೆನೆಗಲ್, ಗ್ರೇ ಪ್ಯಾರೆಟ್,  ಫಲೋಮಿ ಸಹಿತ 500ಕ್ಕೂ  ಹೆಚ್ಚು ಪಕ್ಷಿಗಳಿವೆ.

ವೆಂಕಿ ಪಲಿಮಾರ್ ಅವರಿಂದ ಜನಜಾಗೃತಿಯ ಕಲಾಕೃತಿ
ಕುಬ್ಜ ಅಣ್ಣ ತಂಗಿಯರು ರಚಿಸಿದ ವಸ್ತು ಪ್ರದರ್ಶನ.
ದೈವದ ಮನೆ
ಜಿಲ್ಲಾ ಪಾಣಾರ ಸಂಘದ ತೆಂಗಿನ ಸಿರಿಯ ಕಲಾಕೃತಿಗಳ ರಚನೆ
ಉಡುಪಿ-ಉಚ್ಚಿಲ ದಸರಾ ಸಂಭ್ರಮದಲ್ಲಿ ಹೊಸ ರೀತಿಯಲ್ಲಿ ವಸ್ತುಪ್ರದರ್ಶನ ನಡೆಸುವ ಚಿಂತನೆ ನಡೆಸಲಾಗಿತ್ತು. ಹಾಗಾಗಿ ವಿಶಿಷ್ಠ ರೀತಿಯ ಜನಜಾಗೃತಿ ಮೂಡಿಸುವ ಕಲಾಕೃತಿಗಳನ್ನು ಪ್ರದರ್ಶನಕ್ಕಿರಿಸಲಾಗಿದೆ
ಯತೀಶ್ ಕಿದಿಯೂರು ವಸ್ತುಪ್ರದರ್ಶನ ಉಸ್ತುವಾರಿ

ಗಮನ ಸೆಳೆಯುತ್ತಿವೆ ಸಮುದ್ರದ ಮೀನುಗಳು

 ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಜೀವಂತ ಸಮುದ್ರ ಮೀನುಗಳನ್ನು ಕೃತಕ ಕೊಳದಲ್ಲಿ ಬಿಟ್ಟಿರುವುದು ಜನರನ್ನು ಹೆಚ್ಚು ಆಕಷ್ಟಿಸುತ್ತಿದೆ. ಬಂಗುಡೆ ಟೈಗರ್ ಸಿಗಡಿ ಏಡಿ ಕಾಣೆ ಸೀಬಾಸ್ ಏರಿ ತೊರಕೆ ಸಹಿತ ಹಲವು ಜಾತಿಯ ಮೀನುಗಳ ಜತೆಗೆ ಹೊಳೆ ಮೀನು ಅಲಂಕಾರಿಕ ಮೀನುಗಳೂ ಇಲ್ಲಿವೆ. ಹಾಯಿ ದೋಣಿ ಸೆಲ್ಪಿ ಪಾಯಿಂಟ್ ಕೈರಂಪಣಿ ದೋಣಿ ಪರ್ಸೀನ್ ಬೋಟ್ ಹಳೇ ದೋಣಿಗಳು ಬೃಹತ್ ಗಾತ್ರದ ಆಮೆ ಲೈಟ್ ಹೌಸ್ ಮಾದರಿಗಳು ಗಮನ ಸೆಳೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.