ಪಡುಬಿದ್ರಿ: ಪಡುಬಿದ್ರಿ ಫ್ಲೈಓವರ್ ಪ್ರಸ್ತಾವನೆಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರು ಪಡುಬಿದ್ರಿಗೆ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪ್ರಸ್ತಾವನೆ ಬಗೆಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಇಲಾಖೆ ನೇಮಿಸುವ ತಂಡವು ವರದಿ ನೀಡಿದ ಬಳಿಕ ಹಣಕಾಸು ಇಲಾಖೆಯ ಒಪ್ಪಿಗೆ, ಯೋಜನೆಯ ಅನುಷ್ಠಾನ ಮುಂದಿನ ಹಂತದಲ್ಲಿ ನಡೆಯಲಿರುವುದಾಗಿ ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ನಡೆಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಚರ್ಚಿಸಿದರು. ಬಳಿಕ ಮಾತನಾಡಿದ ಜಯಶ್ರೀ ಮಾನೆ, ಪಾದಚಾರಿಗಳ ಸಾವು ನೋವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಡುಬಿದ್ರಿ, ಉಚ್ಚಿಲ ಹಾಗೂ ಮೂಳೂರುಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುವುದು ಎಂದರು.
ಪಾದಚಾರಿಗಳು ಹೆದ್ದಾರಿಯನ್ನು ಕಂಡ ಕಂಡಲ್ಲಿ ದಾಟದಂತೆ ಪಡುಬಿದ್ರಿಯಲ್ಲಿ ರೈಲಿಂಗ್‌ಗಳ ಅಳವಡಿಕೆ, ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಗೆ ಮಂಗಳೂರು ಭಾಗದಿಂದ ಆಗಮಿಸಿ ಪ್ರವೇಶಿಸುವ ವಾಹನಗಳ ನಿಯಂತ್ರಣಗಳಿಗೆ ಟ್ರಾಫಿಕ್ ಡೈವರ್ಶನ್ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಪಡುಬಿದ್ರಿಯಲ್ಲಿ ಯೋಜನಾ ನಿರ್ದೇಶಕ ಜಾವೇದ್ ಅವರೊಂದಿಗೆ ಸ್ಥಳೀಯರೂ ಮಾತಿನ ಚಕಮಕಿ ನಡೆಸಿದರು. ಬಳಿಕ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರ ಮನವಿಯಂತೆ ಪಡುಬಿದ್ರಿಗೆ ವಾಪಾಸಾದ ಪಿ. ಡಿ. ಜಾವೇದ್ ಅವರು ಪಡುಬಿದ್ರಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಇಲಾಖೆಗೆ ಪ್ರಸ್ತಾವನೆಯೊಂದನ್ನು ರವಾನಿಸಿರುವ ಕುರಿತಾಗಿ ಜನರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.