ADVERTISEMENT

ಸಮುದ್ರ ತೀರದಲ್ಲಿ ಪಾರ್ಟಿಗಳಿಗೆ ಕಡಿವಾಣ

ಕಾಪು: ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 5:45 IST
Last Updated 12 ಜುಲೈ 2024, 5:45 IST
ಕಾಪು ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜನರು ಅಹವಾಲು ಸಲ್ಲಿಸಿದರು
ಕಾಪು ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಜನರು ಅಹವಾಲು ಸಲ್ಲಿಸಿದರು   

ಕಾಪು (ಪಡುಬಿದ್ರಿ): ಕರಾವಳಿ ತೀರದಲ್ಲಿ ರಾತ್ರಿ ವೇಳೆ ಮೋಜು, ಮಸ್ತಿ, ಪಾರ್ಟಿಗಳಿಗೆ ಅನುಮತಿ ನೀಡದಂತೆ ಕರಾವಳಿ ತೀರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಗುರುವಾರ ತಾಲ್ಲೂಕು ಆಡಳಿತ ಸೌಧದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ರಾತ್ರಿ ವೇಳೆ ಸಮುದ್ರ ತೀರದಲ್ಲಿ ನಡೆಯುತ್ತಿರುವ ಮೋಜು, ಮಸ್ತಿ ಬಗ್ಗೆ ಅವರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಸೂಚನೆ ನೀಡಿದ ಅವರು, ಚುನಾವಣೆ ಸಂದರ್ಭದಲ್ಲಿಯೇ ಈ ಬಗ್ಗೆ ಆದೇಶಿಸಲಾಗಿತ್ತು. ಸಮುದ್ರ ತೀರದಲ್ಲಿ ಇಂತಹ ಪಾರ್ಟಿಗಳು ನಡೆಯುವುದರಿಂದ ಜಲಚರಗಳಿಗೆ ತೊಂದರೆ, ಪರಿಸರ, ಶಬ್ದ ಮಾಲಿನ್ಯ ಉಂಟಾಗುತ್ತದೆ. ಸ್ಥಳೀಯ ನಿವಾಸಿಗಳಿಗೂ ಸಮಸ್ಯೆ ಆಗುತ್ತದೆ. ಗ್ರಾಮ ಪಂಚಾಯಿತಿ ಸೂಕ್ತ ಸ್ಥಳಾವಕಾಶವ ಗುರುತಿಸಿ ಅಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸಮುದ್ರ ತೀರದಲ್ಲಿ ರಾತ್ರಿ ಪೊಲೀಸರು ಗಸ್ತು ತಿರುಗಬೇಕು. ಅನಧಿಕೃತ ಪಾರ್ಟಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಯ್ಯ ಅವರಿಗೆ ಸೂಚಿಸಿದರು.

ನಂದಿಕೂರಿನಲ್ಲಿ ಕಾರ್ಯಾರಂಭಗೊಂಡಿರುವ ಎಂ11 ತೈಲ ಉತ್ಪಾದನಾ ಘಟಕದಿಂದ ಪರಿಸರ ಮಾಲಿನ್ಯ ಉಂಟಾಗಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ದೂರು ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪರಿಸರಕ್ಕೆ ಹಾನಿ ಉಂಟಾಗದಂತೆ ಕಂಪನಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸ್ಥಳಿಯವಾಗಿ ಪ್ರತಿಭಟನೆ ನಡೆದರೆ ಸೂಕ್ತ ಕ್ರಮ ವಹಿಸಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಮಳೆಯಿಂದ ದೊಡ್ಡ ಮಟ್ಟಿನ ಹಾನಿ ಇಲ್ಲ: ಜಿಲ್ಲೆಯಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಂತಹ ಪ್ರದೇಶದಿಂದ 40 ಜನರ ರಕ್ಷಣೆ ಮಾಡಲಾಗಿದೆ. ನೆರೆ ಇಳಿದ ಬಳಿಕ ಅವರ ಮನೆಗಳಿಗೆ ವಾಪಾಸಾಗಿದ್ದಾರೆ. ದೊಡ್ಡ ಮಟ್ಟದಲ್ಲಿ ಮನೆ ಹಾನಿ, ಸಾವು ನೋವು ಉಂಟಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಬಗ್ಗೆ 3 ತಿಂಗಳಲ್ಲಿ ಸರಿಪಡಿಸುವಂತೆ ಗುತ್ತಿಗೆದಾರರು, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ಬೀದಿ ದೀಪ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲುವವುದು, ರಸ್ತೆ ವಿಭಜಕ, ಸರ್ವೀಸ್ ರಸ್ತೆ ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ ನಂತರ ಮತ್ತೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜನರಿಗೆ ಸೇವೆ ಸಲ್ಲಿಸುವ ಅವಕಾಶ ಪ್ರತಿಯೊಬ್ಬರಿಗೂ ದೊರೆಯುದಿಲ್ಲ. ಸರ್ಕಾರಿ ಅಧಿಕಾರಿಗಳು ತಮಗೆ ದೊರೆತಿರುವ ಅವಕಾಶ ಬಳಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿಗೆ ಶ್ರಮಿಸಬೇಕು. ಜನಸ್ಪಂದನ ಕಾರ್ಯಕ್ರಮದ ಮೂಲಕ ಅಧಿಕಾರಿಗಳು ನಾಗರಿಕರ ಧ್ವನಿಗೆ ಧ್ವನಿಯಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಷ್ಟಗಳನ್ನು ತಿಳಿಯುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗಬೇಕು ಎಂದರು.

ಪಡಿತರ ಚೀಟಿ, ಮೀನುಗಾರಿಕೆ ಇಲಾಖೆಯಿಂದ ಕಿಟ್, ಲೈಫ್ ಜಾಕೆಟ್ ಹಾಗೂ ಪಶುಸಂಗೋಪನೆ ಇಲಾಖೆ ವತಿಯಿಂದ ಉಚಿತ ನೆಲಹಾಸು ವಿತರಣೆಯ ಆಯ್ಕೆ ಪತ್ರ ಫಲಾನುಭವಿಗಳಿಗೆ ವಿತರಿಸಲಾಯಿತು. ಸಭೆಯಲ್ಲಿ 59 ಅರ್ಜಿಗಳು ಸಲ್ಲಿಕೆಯಾಗಿದ್ದು, ರಸ್ತೆ, ಮನೆ ಮಂಜೂರು, ಚರಂಡಿ ವ್ಯವಸ್ಥೆ, ಪ್ಲಾಟಿಂಗ್ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಹಕ್ಕುಪತ್ರ, ಜಮೀನು ಅಳತೆ ಸೇರಿದಂತೆ ಹಲವು ಅಹವಾಲುಗಳು ಸಲ್ಲಿಕೆಯಾಗಿದ್ದವು.

ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಯ್ಯ, ಉಡುಪಿ ವಿಭಾಗೀಯ ಅರಣ್ಯಾಧಿಕಾರಿ ಗಣಪತಿ, ಸರ್ವೇ ಇಲಾಖೆಯ ರವೀಂದ್ರ, ನಾಗರಾಜ್ ಇದ್ದರು. ತಹಶೀಲ್ದಾರ್ ಪ್ರತಿಭಾ ಆರ್. ಸ್ವಾಗತಿಸಿದರು. ಶಿಕ್ಷಕ ಬಿ.ಎಸ್.ಆಚಾರ್ಯ ನಿರೂಪಿಸಿದರು. ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ.ಸಿಲ್ವ ವಂದಿಸಿದರು.

130 ಹೊಸ ಬಸ್‌ಗೆ ಬೇಡಿಕೆ

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಸ್‌ ಕೊರತೆ ಬಗ್ಗೆ ದೂರುಗಳಿವೆ. ರೂಟ್ ಪರವಾನಗಿ ಪಡೆದುಕೊಂಡು ಕೆಲವು ಬಸ್‌ಗಳು ಸೇವೆ ನೀಡದೆ ಇರುವುದು ಗಮನಕ್ಕೆ ಬಂದಿದೆ. ಅಂತಹವರ ಪರವಾನಗಿ ರದ್ದು ಮಾಡುವ ಬಗ್ಗೆಯೂ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವಶ್ಯಕತೆ ಇರುವಲ್ಲಿ ಸರ್ಕಾರಿ ಬಸ್‌ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ 130 ಹೊಸ ಬಸ್‌ಗೆ ಉಡುಪಿ ವಿಭಾಗದಿಂದ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಗೆ ಬೇಡಿಕೆ ಸಲ್ಲಿಸಲಾಗಿದೆ. ಬಸ್‌ ಖರೀದಿಯ ನಂತರ ಅವಶ್ಯ ಇರುವೆಡೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.