ADVERTISEMENT

ಉಮಿಕಲ್‌ ಬೆಟ್ಟದಲ್ಲಿ ಪರಶುರಾಮ: ₹ 2 ಕೋಟಿ ವೆಚ್ಚದಲ್ಲಿ ಕಂಚಿನ ಪ್ರತಿಮೆ

₹ 2 ಕೋಟಿ ವೆಚ್ಚದಲ್ಲಿ 33 ಅಡಿ ಎತ್ತರದ ಕಂಚಿನ ಪ್ರತಿಮೆ

ಬಾಲಚಂದ್ರ ಎಚ್.
Published 25 ಜನವರಿ 2023, 21:15 IST
Last Updated 25 ಜನವರಿ 2023, 21:15 IST
ಪರಶುರಾಮ ಥೀಂ ಪಾರ್ಕ್‌ನ ವಿನ್ಯಾಸ
ಪರಶುರಾಮ ಥೀಂ ಪಾರ್ಕ್‌ನ ವಿನ್ಯಾಸ   

ಉಡುಪಿ: ‘ತುಳುನಾಡಿನ ಸೃಷ್ಟಿಕರ್ತ’ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕಾರ್ಕಳ ತಾಲ್ಲೂಕಿನ ಬೈಲೂರು ಯರ್ಲಪಾಡಿಯ ಉಮಿಕಲ್‌ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗುತ್ತಿದೆ.

ಒಂದು ಕೈನಲ್ಲಿ ಬಿಲ್ಲು ಮತ್ತೊಂದು ಕೈನಲ್ಲಿ ಕೊಡಲಿ ಹಿಡಿದಿರುವ ಭಂಗಿಯಲ್ಲಿ ಆಕರ್ಷಕವಾಗಿ ಪರಶುರಾಮನ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು ಜ.27ರಿಂದ 29ರವರೆಗೆ ನಡೆಯುವ ಪರಶುರಾಮ ಥೀಂ ಪಾರ್ಕ್‌ ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗುವುದು.

15 ಟನ್ ತಾಮ್ರವನ್ನು ಬಳಸಿ ₹ 2 ಕೋಟಿ ವೆಚ್ಚದಲ್ಲಿ ಶಿಲ್ಪಿ ಕೃಷ್ಣಾನಾಯ್ಕ ಪ್ರತಿಮೆ ತಯಾರಿಸಿದ್ದಾರೆ. ಬೆಂಗಳೂರಿನಿಂದ ಉಮ್ಮಿಕಲ್‌ ಬೆಟ್ಟಕ್ಕೆ ಪರಶುರಾಮನ ಪ್ರತಿಮೆಯನ್ನು ತಂದು ಅಳವಡಿಕೆ ಕಾರ್ಯ ನಡೆಯುತ್ತಿದೆ.

ADVERTISEMENT

ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪರಶುರಾಮನ ಪ್ರತಿಮೆಯ ಜತೆಗೆ ₹ 15 ಕೋಟಿ ವೆಚ್ಚದಲ್ಲಿ ಥೀಂ ಪಾರ್ಕ್‌ ಸಹ ನಿರ್ಮಿಸಲಾಗಿದೆ. 1,000 ಮಂದಿ ಕೂರುವ ಸಾಮರ್ಥ್ಯವಿರುವ ವೀಕ್ಷಣಾ ಗ್ಯಾಲರಿ, ಪರಶುರಾಮನ ಜೀವನ ವೃತ್ತಾಂತವನ್ನು ಸಾರುವ ವಿಶೇಷ ಕಲಾ ಗ್ಯಾಲರಿ ಥೀಂ ಪಾರ್ಕ್‌ನ ಪ್ರಮುಖ ಆಕರ್ಷಣೆ.

ಕಲಾವಿದ ಪುರುಷೋತ್ತಮ ಅಡ್ವೆ ಸಾರಥ್ಯದಲ್ಲಿ ಫೈಬರ್ ಗ್ಲಾಸ್‌ ಮ್ಯೂರಲ್‌ನಲ್ಲಿ ಪರುಶುರಾಮನ ಕುರಿತು ವಿವರಗಳನ್ನು ಅಚ್ಚು ಹಾಕಿಸಲಾಗಿದೆ. ಉಮಿಕಲ್‌ ಬೆಟ್ಟದ ಕೆಳ ಭಾಗದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಪ್ರತ್ಯೇಕ ವೇದಿಕೆ ಹಾಗೂ ಕಲಾ ಪ್ರದರ್ಶನಕ್ಕೆ ತಯಾರಾಗಲು ಗ್ರೀನ್ ರೂಂಗಳ ವ್ಯವಸ್ಥೆ ಮಾಡಲಾಗಿದೆ.

ನೆಲಮಟ್ಟದಿಂದ ಸುಮಾರು 400 ಅಡಿ ಎತ್ತರದ ಮೇಲಿರುವ ಬೆಟ್ಟದಿಂದ ಪ್ರವಾಸಿಗರು ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕುದುರೆಮುಖ, ಆಗುಂಬೆಯ ಮಳೆ ಕಾಡು, ಪಶ್ಚಿಮಘಟ್ಟದ ಸೊಬಗನ್ನು ಸವಿಯಬಹುದು ಎನ್ನುತ್ತಾರೆ ಕಾಮಗಾರಿ ಹೊಣೆ ಹೊತ್ತಿಕೊಂಡಿರುವ ನಿರ್ಮಿತಿ ಕೇಂದ್ರದ ಅಧಿಕಾರಿ ಅರುಣ್‌.

ಅಂಗವಿಕಲರು ಹಾಗೂ ವೃದ್ಧರಿಗೆ ಲಿಫ್ಟ್‌ ವ್ಯವಸ್ಥೆಯೂ ಇದೆ. ಗ್ಯಾಲರಿಯಿಂದ ಪ್ರತಿಮೆ ಇರುವ ಜಾಗಕ್ಕೆ ಪ್ರವೇಶಿಸಲು ರ‍್ಯಾಂಪ್‌ ಮಾಡಲಾಗಿದೆ. ಪ್ರತಿಮೆಗೆ ಸಿಡಿಲು ಬಡಿಯದಂತೆ ಸಿಡಿಲು ನಿರೋಧಕ ವ್ಯವಸ್ಥೆ ಅಳವಡಿಸಲಾಗಿದೆ.

ರೆಸ್ಟೋರೆಂಟ್‌ನಲ್ಲಿ ಕುಳಿತು ಭೋಜನ ಸವಿಯುತ್ತಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಜತೆಗೆ ಥೀಂ ಪಾರ್ಕ್‌ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.