ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರ (ವರ್ಧಂತಿ) ಅಂಗವಾಗಿ ಶನಿವಾರ ಶ್ರೀಕೃಷ್ಣನಿಗೆ ವಿಶ್ವರೂಪ ದರ್ಶನ ಅಲಂಕಾರದ ಚಿನ್ನದ ಕವಚ ತೊಡಿಸಲಾಯಿತು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕವಚವನ್ನು ಶ್ರೀಕೃಷ್ಣನಿಗೆ ತೊಡಿಸಿದರು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ವಿಶ್ವತೋಮುಖಃ ಅಲಂಕಾರ ಮಾಡಿದರು. ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನಡೆಸಿದರು.
ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ವಿಶ್ವರೂಪ ದರ್ಶನದ ಚಿನ್ನದ ಕವಚವನ್ನು ಶುಕ್ರವಾರ ಮೆರವಣಿಗೆ ಮೂಲಕ ತರಲಾಗಿತ್ತು.
ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಂಗವಾಗಿ ಧನ್ವಂತ್ರಿ ಹೋಮ, ವಿರಜಾ ಹೋಮ, ಆಯುಷ್ಯ ಹೋಮ ಇತ್ಯಾದಿ ಹವನಾದಿಗಳನ್ನು ನಡೆಸಲಾಯಿತು. ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ನಡೆಸಲಾಯಿತು.
ಇಂದು ಜಗತ್ತಿನಲ್ಲಿ ಬಲ ಪಂಥ ಎಡ ಪಂಥಗಳು ಪ್ರಸಿದ್ಧವಾಗಿವೆ. ಆದರೆ ಮಧ್ವಾಚಾರ್ಯರ ಸಿದ್ಧಾಂತ ನಡುಪಂಥೀಯವಾಗಿತ್ತು. ಎಲ್ಲವನ್ನೂ ಸಮತೋಲನದಲ್ಲಿ ಕೊಂಡೊಯ್ಯಬೇಕು ಎಂಬುದು ಆಚಾರ್ಯರ ಸಿದ್ಧಾಂತವಾಗಿತ್ತು ಅದು ಇಂದು ಜಗತ್ತಿಗೆ ಅಗತ್ಯವಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಶ್ರೀಮನ್ಮಧ್ವಾಚಾರ್ಯರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತಿನಲ್ಲಿ ಎಡ ಬಲ ಸಿದ್ಧಾಂತಗಳ ಅತಿರೇಕಗಳನ್ನು ನಾವು ನೋಡಿದ್ದೇವೆ. ಜಗತ್ತು ಸಮತ್ವದ ಮೇಲೆ ನಿಂತಿದೆ ಅದು ಒಂದು ಕಡೆ ವಾಲಬಾರದು ಎಂದು ತಿಳಿಸಿದರು. ಮಧ್ವಾಚಾರ್ಯರ ಧ್ವೈತ ಸಿದ್ಧಾಂತವನ್ನು ಜಗತ್ತಿನ 8ನೇ ಅದ್ಭುತ ಎಂದರೂ ತಪ್ಪಾಗಲಾರದು. ಇದು ಜಗತ್ತಿಗೆ ಅತ್ಯಂತ ಉಪಯುಕ್ತ ಸಿದ್ಧಾಂತ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀಗಳಿಗೆ ಆಫ್ರಿಕಾದ ಮೈಲ್ಸ್ ಲೀಡರ್‌ಶಿಪ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.