ADVERTISEMENT

ಪೇಜಾವರ ಶ್ರೀಗಳ ಷಷ್ಟ್ಯಬ್ಧ ಅಭಿವಂದನೆ

ಅದ್ಧೂರಿ ಪುರಮೆರವಣಿಗೆ: ಶ್ರೀಗಳಿಗೆ ಸುವರ್ಣಾಭಿಷೇಕ, ಪುಷ್ಪಾಭಿಷೇಕ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 21:31 IST
Last Updated 16 ಡಿಸೆಂಬರ್ 2023, 21:31 IST
ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಷಷ್ಟ್ಯಬ್ಧದ ಅಂಗವಾಗಿ ಶನಿವಾರ ಸಂಜೆ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಶ್ರೀಗಳಿಗೆ ಅಭಿವಂದನೆ ಸಲ್ಲಿಸಲಾಯಿತು
ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಷಷ್ಟ್ಯಬ್ಧದ ಅಂಗವಾಗಿ ಶನಿವಾರ ಸಂಜೆ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಶ್ರೀಗಳಿಗೆ ಅಭಿವಂದನೆ ಸಲ್ಲಿಸಲಾಯಿತು   

ಉಡುಪಿ: ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಷಷ್ಟ್ಯಬ್ಧದ ಪ್ರಯುಕ್ತ ಶನಿವಾರ ಸಂಜೆ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅಭಿವಂದನಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

ನಗರದ ಜೋಡುಕಟ್ಟೆಯಿಂದ ಭವ್ಯ ಶೋಭಾಯಾತ್ರೆಯ ಮೂಲಕ ಶ್ರೀಗಳನ್ನು ರಥಬೀದಿಗೆ ಕರೆತರಲಾಯಿತು. ಕುಣಿತ ಭಜನೆ, ಸಾಂಪ್ರದಾಯಿಕ ಬಿರುದಾವಳಿ, ಚಂಡೆ, ಬಣ್ಣದ ಕೊಡೆ, ಕೀಲು ಕುದುರೆ ಸಹಿತ ಸಾಲಂಕೃತ ವಾಹನಗಳಲ್ಲಿ ಪುರ ಮೆರವಣಿಗೆ ನಡೆಯಿತು.

ಬಳಿಕ ನಡೆದ ಅಭಿವಂದನಾ ಸಮಾರಂಭದಲ್ಲಿ ಶ್ರೀಗಳಿಗೆ ಸುವರ್ಣಾಭಿಷೇಕ, ಫುಷ್ಪಾಭಿಷೇಕ ಹಾಗೂ ಕಪ್ಪ ಕಾಣಿಕೆ ಸಲ್ಲಿಸಲಾಯಿತು. ಕೃಷ್ಣಮಠದಲ್ಲಿ ಶ್ರೀಕೃಷ್ಣಮಂತ್ರ ಯಾಗ, ಗೋಸೂಕ್ತ ಯಾಗ, ಅನ್ನ ಸಂತರ್ಪಣೆ ನಡೆಯಿತು.

ADVERTISEMENT

ಅಭಿವಂದನೆ ಸ್ವೀಕರಿಸಿ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ‘ಹಿಂದೂಗಳು ಹಿಂದೂಗಳಾಗಿ ಉಳಿದರೆ ಮಾತ್ರ ಶತಮಾನಗಳ ಹೋರಾಟದಿಂದ ನಿರ್ಮಾಣಗೊಂಡಿರುವ ರಾಮಮಂದಿರ ಶಾಶ್ವತವಾಗಿ ಉಳಿಯುತ್ತದೆ’ ಎಂದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಅಪಸ್ವರಗಳು ಕೇಳಿಬರುತ್ತಿದ್ದು ಮೋದಿ, ಯೋಗಿ ಅಧಿಕಾರದಿಂದ ಕೆಳಗಿಳಿಯುತ್ತಿದ್ಧಂತೆ ಮಂದಿರ ಕಿತ್ತೊಗೆಯುವುದಾಗಿ ಭಂಡ ಧೈರ್ಯದ ಹೇಳಿಕೆ ನೀಡಲಾಗುತ್ತಿದೆ. ಈ ಬಗ್ಗೆ ಹಿಂದೂಗಳೆಲ್ಲ ಜಾಗೃತರಾಗಿರಬೇಕು’ ಎಂದು ಕರೆ ನೀಡಿದರು.

ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.