ADVERTISEMENT

ಪೇಜಾವರರ ಅನಾರೋಗ್ಯ ಹಿನ್ನೆಲೆ: ಇಂದು, ನಾಳೆ ಉಡುಪಿಯಲ್ಲೇ ಇರಲಿರುವ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 16:52 IST
Last Updated 28 ಡಿಸೆಂಬರ್ 2019, 16:52 IST
   

ಉಡುಪಿ: ಪೇಜಾವರ ಶ್ರೀಗಳ ಮಿದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಣಿಪಾಲದ ಆಸ್ಪತ್ರೆಗ ದೌಡಾಯಿಸಿದ್ದಾರೆ. ಸ್ಥಳದಲ್ಲಿಆತಂಕದ ವಾತಾವರಣ ಮನೆ ಮಾಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಪೇಜಾವರರ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ. ವೈದ್ಯರ ಪ್ರಯತ್ನ ಮುಂದುವರಿದೆ. ಆದರೆ ಸುಧಾರಣೆ ಕಾಣುತ್ತಿಲ್ಲ. ನಾನು ಇಂದು ಮತ್ತು ನಾಳೆ ಉಡುಪಿಯಲ್ಲೇ ಇರಲಿದ್ದೇನೆ,’ ಎಂದು ಹೇಳಿದರು.

ಹೆಲ್ತ್ ಬುಲೆಟಿನ್ ಬಿಡುಗಡೆ

ADVERTISEMENT

ಮಣಿಪಾಲ ಆಸ್ಪತ್ರೆಯು ಸ್ವಾಮೀಜಿ ಆರೋಗ್ಯ ಸ್ಥಿತಿಗತಿಯ ಮಾಹಿತಿ ನೀಡುವ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. ‘ಸ್ವಾಮೀಜಿ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಮತ್ತಷ್ಟು ಕ್ಷೀಣಿಸಿದೆ. ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ನಡೆಸಿದ ಪರೀಕ್ಷೆಗಳ ಪ್ರಕಾರ ಮಿದುಳುತೀವ್ರನಿಷ್ಕ್ರಿಯವಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಗಣ್ಯರ ಭೇಟಿ: ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿದ್ದು,ಆಸ್ಪತ್ರೆಗ ಗಣ್ಯರು ಭೇಟಿ ನೀಡುತ್ತಿದ್ದಾರೆ. ಉಮಾಭಾರತಿ ಅವರೂಆಸ್ಪತ್ರೆಗೆ ತೆರಳಿದ್ದಾರೆ.

ಡಿಸೆಂಬರ್ 20ರಂದು ನಸುಕಿನ 3 ಗಂಟೆ ವೇಳೆ ಪೇಜಾವರ ಮಠದಲ್ಲಿ ಅಸ್ವಸ್ಥಗೊಂಡ ಶ್ರೀಗಳಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಜನರಲ್‌ ಮೆಡಿಸನ್‌ ವಿಭಾಗದ ಮುಖ್ಯಸ್ಥ ಡಾ.ರವಿರಾಜ ವಿ.ಆಚಾರ್ಯ, ಡಾ.ಮಂಜುನಾಥ್ ಹಂದೆ, ಕಾರ್ಡಿಯಾಲಜಿಸ್ಟ್‌ ಡಾ.ಪದ್ಮಕುಮಾರ್‌, ಕ್ರಿಟಿಕಲ್‌ ಕೇರ್ ಮೆಡಿಸನ್‌ ವಿಭಾಗದ ಡಾ.ಶ್ವೇತಪ್ರಿಯ ಹಾಗೂ ಡಾ.ವಿಶಾಲ್‌ ಶಾನುಭಾಗ್‌ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ .

ಶ್ರೀಗಳು ಶೀಘ್ರ ಗುಣಮುಖರಾಗುವಂತೆ ಹಲವೆಡೆ ಪೂಜೆ, ಪ್ರಾರ್ಥನೆಗಳು ನಡೆದವು. ಸೋಸಲೆ ವ್ಯಾಶಸರಾಜ ಮಠ ಹಾಗೂ ಶಾಖಾಮಠಗಳಲ್ಲಿ ವಿಶೇಷ ಪಾರಾಯಣ ನಡೆಯಿತು. ಮಂತ್ರಾಲಯ ವಿದ್ಯಾಪೀಠದಲ್ಲಿ ಋಗ್ವೇದ, ಯಜುರ್ವೇದ ಸಹಿತ ಪಾರಾಯಣ, ಸಹಸ್ರನಾಮ, ವಾಯುಸ್ತುತಿ ಗುರುಸ್ತೋತ್ರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.