ADVERTISEMENT

ಪಡುಬಿದ್ರಿ | ಎಂ11 ಕಂಪನಿಯಿಂದ ಮಾಲಿನ್ಯ: ಹೋರಾಟಗಾರರಿಗೆ ಪ್ರವೇಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 6:55 IST
Last Updated 20 ಜುಲೈ 2024, 6:55 IST

ಪಡುಬಿದ್ರಿ: ನಂದಿಕೂರು ಪರಿಸರದಲ್ಲಿ ಕಾರ್ಯಾರಂಭಗೊಂಡಿರುವ ಬಯೋ ಡೀಸೆಲ್ ಉತ್ಪಾದನಾ ಘಟಕ ಎಂ11 ಕಂಪನಿಯಿಂದ ಮಾಲಿನ್ಯ ಉಂಟಾಗುತ್ತಿದೆ ಎಂಬ ಸ್ಥಳೀಯರ ಆರೋಪದ ಮೇರೆಗೆ ಗುರುವಾರ ಪಲಿಮಾರು ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯ ನಿರ್ಣಯದಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು.

ಮಾಲಿನ್ಯಕ್ಕೆ ಸಂಬಂಧಿಸಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗೆ, ಕಂಪನಿ ಸುತ್ತಮುತ್ತಲ ಪರಿಸರದಲ್ಲಿನ ತಾಂಬೊಟ್ಟು ಬಳಿಯ ದೊಡ್ಡಣ್ಣ ಶೆಟ್ಟಿ ಮನೆಯ ಪಕ್ಕದ ತೋಡು, ಶ್ಯಾಮರಾಯ್ ಆಚಾರ್ಯ ಶೆಟ್ಟಿ ಗುಡ್ಡೆ ಬಳಿಯ ತೋಡುವಿನಲ್ಲಿ ಬರುವ ನೀರಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು.

ಆದರೆ ಮಳೆ ಜೋರಾಗಿರುವುದರಿಂದ ನೀರಿನ ಮಾದರಿಯನ್ನು ಸಂಗ್ರಹಿಸಿದಲ್ಲಿ ಯಾವುದೇ ಪರೀಕ್ಷೆಯಿಂದ ದೃಢಪಡದು, ಮಳೆ ಕಡಿಮೆಯಾದ ಬಳಿಕ ನೀರು ಸಂಗ್ರಹಿಸುವುದಾಗಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಕೀರ್ತಿಕುಮಾರ್ ತಿಳಿಸಿದರು.

ADVERTISEMENT

ಕಂಪನಿ ಒಳಗೆ ಸ್ಥಳೀಯರಿಗೆ ವಿರೋಧ: ಕಂಪನಿ ಒಳಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡ, ಸ್ಥಳೀಯಾಡಳಿತ ಹಾಗೂ ಸ್ಥಳೀಯ ಹೋರಾಟಗಾರರನ್ನು ಸೇರಿಸಿ ಮಾಹಿತಿ ಸಂಗ್ರಹಿಸಲು ಒಳಗೆ ಹೋಗಲು ಮುಂದಾಯಿತು. ಈ ವೇಳೆ ಕಂಪನಿ ಅಧಿಕಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಯಾವುದೇ ಪತ್ರಗಳಿಲ್ಲದೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಕಂಪನಿ ಅಧಿಕಾರಿಗಳು ಹೇಳಿದರು. ಬಳಿಕ ಪಂಚಾಯಿತಿ ಪತ್ರವನ್ನು ಸಿದ್ಧಪಡಿಸಿ ಕಂಪನಿಗೆ ನೀಡಿತು.

ಆದರೆ ಇದರಲ್ಲಿ ಸ್ಥಳೀಯ ಹೋರಾಟಗಾರ ನಾಗೇಶ್ ರಾವ್ ಅವರ ಹೆಸರನ್ನು ತೆಗೆದು ಇತರ ಮಾಲಿನ್ಯ ನಿಯಂತ್ರ ಮಂಡಳಿಯ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ, ಸದಸ್ಯರಿಗೆ ಹಾಗೂ ಸ್ಥಳೀಯ ಹೋರಾಟಗಾರರಾದ ದಿನೇಶ್ ಪಲಿಮಾರು, ಲಕ್ಷ್ಮಣ್ ಶೆಟ್ಟಿ ಅವರನ್ನು ಹೊರತು ಪಡಿಸಿ ಇತರರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿತು.

ಇದರಿಂದ ಕಂಪೆನಿ ಗೇಟ್ ಮುಂಭಾಗ ಕೆಲಕಾಲ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿ ನಾಗೇಶ್ ರಾವ್ ಅವರನ್ನು ಬಿಡಬೇಕು ಎಂದು ಪಟ್ಟು ಹಿಡಿದರು. ಆದರೆ ನಾಗೇಶ್ ರಾವ್ ಬೆದರಿಕೆ ಒಡ್ಡಿದ್ದಾರೆ ಆದ್ದರಿಂದ ಅವರನ್ನು ಬಿಡಲು ಸಾಧ್ಯವಿಲ್ಲ ಎಂದು ಕಂಪನಿ ಅಧಿಕಾರಿಗಳು ಹೇಳಿದರು.

ಬಳಿಕ ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷ ಸೌಮ್ಯಲತಾ, ಉಪಾಧ್ಯಕ್ಷ ರಾಯೇಶ್ ಪೈ, ಪಿಡಿಒ ಹಾಗೂ ಮಾಲಿನ್ಯ ನಿಯಂತ್ರ ಮಂಡಳಿಯ ಅಧಿಕಾರಿಗಳು ಕಂಪನಿಯ ಒಳಗೆ ತೆರಳಿ ಮಾಲಿನ್ಯದಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.