ADVERTISEMENT

ಮಳೆಗಾಗಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥನೆ

ಪರ್ಜನ್ಯ ಜಪ ಪಠಿಸಿದ ಯತಿಗಳು; ನೀರಿನ ಸಂಕಷ್ಟ ನಿವಾರಿಸುವಂತೆ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 15:18 IST
Last Updated 10 ಮೇ 2019, 15:18 IST
ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಯತಿಗಳು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು
ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಯತಿಗಳು ಶುಕ್ರವಾರ ಪ್ರಾರ್ಥನೆ ಸಲ್ಲಿಸಿದರು   

ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಹಿನ್ನೆಲೆಯಲ್ಲಿ ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಶ್ರೀಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪರ್ಯಾಯಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ವರುಣನ ಕೃಪೆಗೆ ಬೇಡಿಕೊಂಡರು. ಮಠದ ಅರ್ಚಕರು ಪರ್ಜನ್ಯ ಜಪ ಪಠಿಸಿದರು.

ಚಂದ್ರಮೌಳೇಶ್ವರ, ಅನಂತೇಶ್ವರ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮುಖ್ಯಪ್ರಾಣ, ಮಧ್ವಾಚಾರ್ಯರ ಮೂಲಸಂಸ್ಥಾನ ಹಾಗೂ ಸುಬ್ರಹಣ್ಯ ದೇವರ ಸನ್ನಿಧಿಯಲ್ಲೂ ಪೂಜೆ ಸಲ್ಲಿಸಲಾಯಿತು.

ADVERTISEMENT

ಉಡುಪಿಯಲ್ಲಿ ನೀರಿಗೆ ಹಾಹಾಕಾರ ಇದೆ. ಜೀವಜಲಕ್ಕಾಗಿ ಜನರು ಹಾತೊರೆಯುತ್ತಿದ್ದಾರೆ. ಧಾರಾಕಾರವಾಗಿ ಮಳೆ ಸುರಿಯುವಂತೆ ಅನುಗ್ರಹಿಸಬೇಕು ಎಂದು ದೇವರಲ್ಲಿ ಯತಿಗಳು ಬೇಡಿಕೊಂಡರು.

ಬಳಿಕಉಡುಪಿ ಶಾಸಕ ರಘುಪತಿ ಭಟ್‌ ಮಾತನಾಡಿ, ಜೀವನದಿ ಸ್ವರ್ಣ ಬತ್ತಿದ್ದು, ಶೀಘ್ರದಲ್ಲಿ ಮಳೆ ಬರುವಂತಾಗಲಿ ಎಂದು ಪಲಿಮಾರು ಶ್ರೀ, ಅದಮಾರು ಕಿರಿಯ ಶ್ರೀ ಹಾಗೂ ಶಿವಳ್ಳಿ ಪುರೋಹಿತರ ಸಂಘದಿಂದ ದೇವರಲ್ಲಿ ಪ್ರಾರ್ಥಿಸಲಾಯಿತು. ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎಂಬುದು ನಂಬಿಕೆ. ಅವಧಿಗೂ ಮುನ್ನವೇ ಮಳೆ ಬರುವ ವಿಶ್ವಾಸ ಇದೆ ಎಂದರು.

ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿರುವ ವಾರ್ಡ್‌ಗಳಲ್ಲಿ ನಗರಸಭೆಯಿಂದ ನೀರು ಪೂರೈಕೆ ನಡೆಯುತ್ತಿದೆ. 6 ದಿನಗಳಿಗೊಮ್ಮೆ ವಾರ್ಡ್‌ವಾರು ನೀರು ಬಿಡಲಾಗುವುದು. ಸ್ವರ್ಣೆ ಸಂಪೂರ್ಣ ಬರಿದಾಗಿಲ್ಲ. ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು.

ಈ ಸಂದರ್ಭ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಪದಾಧಿಕಾರಿಗಳು, ಪುರೋಹಿತರ ಸಂಘದ ಪದಾಧಿಕಾರಿಗಳು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.