ADVERTISEMENT

ಎಸ್ಸೆಸ್ಸೆಲ್ಸಿ: ಅನುತೀರ್ಣರಾಗದಂತೆ ಎಚ್ಚರವಹಿಸಿ: ಎನ್‌.ಎಚ್‌.ನಾಗೂರ ಸಲಹೆ

ಪ್ರೇರಣಾ ಶಿಬಿರದಲ್ಲಿ ಶಿಕ್ಷಕರಿಗೆ ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 15:13 IST
Last Updated 4 ಫೆಬ್ರುವರಿ 2021, 15:13 IST
ನಗರದ ಕಡಿಯಾಳಿಯ ಕಮಲಾಬಾಯಿ ಪ್ರೌಢಶಾಲೆಯ ಸಭಾಭವನದಲ್ಲಿ ಗುರುವಾರ ನಡೆದ ಪ್ರೇರಣಾ ಶಿಬಿರದಲ್ಲಿ ಡಿಡಿಪಿಐ ಎನ್‌.ಎಚ್‌.ನಾಗೂರ ಮಾತನಾಡಿದರು.
ನಗರದ ಕಡಿಯಾಳಿಯ ಕಮಲಾಬಾಯಿ ಪ್ರೌಢಶಾಲೆಯ ಸಭಾಭವನದಲ್ಲಿ ಗುರುವಾರ ನಡೆದ ಪ್ರೇರಣಾ ಶಿಬಿರದಲ್ಲಿ ಡಿಡಿಪಿಐ ಎನ್‌.ಎಚ್‌.ನಾಗೂರ ಮಾತನಾಡಿದರು.   

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಹಾಗೂ ಶಿಕ್ಷಣ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಪ್ರೇರಣಾ ಶಿಬಿರಗಳು ನಡೆಯುತ್ತಿದ್ದು, ಗುರುವಾರ ಉಡುಪಿ ಹಾಗೂ ಕಾರ್ಕಳ ತಾಲ್ಲೂಕಿನಲ್ಲಿ ಸಹ ಶಿಕ್ಷಕರಿಗೆ ಪ್ರೇರಣಾ ಶಿಬಿರ ನಡೆಯಿತು.

ನಗರದ ಕಡಿಯಾಳಿಯ ಕಮಲಾಬಾಯಿ ಪ್ರೌಢಶಾಲೆಯ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ ಭೋಧನೆ ಮಾಡುವ ಕನ್ನಡ, ಇಂಗ್ಲೀಷ್‌ ಹಾಗೂ ಭಾಷೆ ಹಿಂದಿ ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಯಿತು. ತಾಲೂಕಿನ 74 ಪ್ರೌಢಶಾಲೆಗಳಿಂದ ಮೂರು ಭಾಷೆಗಳನ್ನು ಬೋಧಿಸುವ 232 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಪಿಐ ಎನ್.ಎಚ್. ನಾಗೂರ ಮಾತನಾಡಿ, ಶಿಕ್ಷಕ ವೃತ್ತಿ ದೇಶಸೇವೆ, ಸಮಾಜಸೇವೆಯಾಗಿದ್ದು, ಶಿಕ್ಷಕರು ವೃತ್ತಿಗೆ ನ್ಯಾಯ ಒದಗಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಸಣ್ಣ ನಿರ್ಲಕ್ಷದ ಬೋಧನೆಯಿಂದ ವಿದ್ಯಾರ್ಥಿ ಜೀವನ ಹಾಳಾಗುತ್ತದೆ. ಇಂತಹ ಪ್ರವೃತ್ತಿ ಕೈಬಿಡಬೇಕು. ತರಗತಿಯ ಎಲ್ಲ ಮಕ್ಕಳ ಕಲಿಕಾ ಗತಿಯನ್ನು ಶಿಕ್ಷಕ ಅರಿತಿರಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚು ಗಮನಹರಿಸಿ ಪಾಠ ಅರ್ಥೈಸಿಕೊಳ್ಳುವಂತೆ ತಿಳಿ ಹೇಳಬೇಕು. ಮಗುವಿನ ನಿಂದನೆ ಸಲ್ಲದು, ಕಲಿಕೆಯಲ್ಲಿ ಮುಂದೆ ಬರುವಂತೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಶಿಕ್ಷಕರು ಮಾಡಬೇಕು ಎಂದು ಸಲಹೆ ನೀಡಿದರು.‌

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಯಾವ ಮಕ್ಕಳು ಅನುತ್ತೀರ್ಣರಾಗದಂತೆ ಎಚ್ಚರವಹಿಸಿ, ಮಗುವಿನ ವೈಯಕ್ತಿಕ ಕಡತದಲ್ಲಿ ಕಲಿಕೆಯ ಮಾಹಿತಿ, ಮಾರ್ಗದರ್ಶನ ಇರಲಿ. ಮಗುವಿನ ಕಲಿಕಾ ಮಾಹಿತಿ ಪೋಷಕರಿಗೆ ತಿಳಿಸಬೇಕು. ಶಿಕ್ಷಕ ವೃತ್ತಿಯನ್ನು ಸಮಾಜ ಸೇವೆಯಂತೆ ಪರಿಗಣಿಸಿ, ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮವಹಿಸಿ ಎಂದು ಸೂಚನೆ ನೀಡಿದರು.‌

ಕಲಿಸುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ಮಗುವಿನ ಭವಿಷ್ಯ ನಾಶವಾಗುತ್ತದೆ. ಬೋಧಿಸುವ ವಿಷಯದ ಬಗ್ಗೆ ಶಿಕ್ಷಕರು ಮೊದಲ ಜ್ಞಾನ ಸಂಪಾದಿಸಿ ನಂತರ ಮಕ್ಕಳಿಗೆ ಹೇಳಿಕೊಡಬೇಕು. ಬೋಧನಾ ಅಭಿರುಚಿಯ ಕೌಶಲಗಳನ್ನು ಬಳಸಿಕೊಂಡು ಮಕ್ಕಳ ಮನಸ್ಸು ಮುಟ್ಟುವಂತೆ ಪಾಠಮಾಡಬೇಕು. ಮಕ್ಕಳಿಗೆ ಪ್ರಶ್ನಿಸಲು ಅವಕಾಶ ನೀಡಬೇಕು. ತಪ್ಪಿದಾಗ ತಿದ್ದಿ, ಸಾಧನೆ ಮಾಡಿದಾಗ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ವಿಷಯಗಳ ಶಿಕ್ಷಕರನ್ನು ಮೂರು ತಂಡಗಳಾಗಿ ವಿಂಗಡಿಸಿ ಬೋಧನಾ ಸಮಸ್ಯೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಶಿಕ್ಷಕರು ಕೇಳಿದ ವಿಷಯವಾರು ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.