ADVERTISEMENT

ಆದಿತ್ಯ ಆದಿಲ್ ಆಗಿದ್ದರೆ ಚಿತ್ರಣವೇ ಬದಲು: ಅಶ್ರಫ್‌ ಮಾಚಾರ್

ಬಾಂಬ್ ಷಡ್ಯಂತ್ರ ಬಯಲಾಗಲಿ: ಎಸ್‌ಡಿಪಿಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:10 IST
Last Updated 24 ಜನವರಿ 2020, 16:10 IST

ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇರಿಸಿದ್ದ ವ್ಯಕ್ತಿ ಆದಿತ್ಯ ರಾವ್ ಬದಲಿಗೆ ಆದಿಲ್ ಆಗಿದ್ದರೆ, ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿತ್ತು ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್‌ ಮಾಚಾರ್ ಟೀಕಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದಾಗ ಮಾಧ್ಯಮಗಳು, ರಾಜಕೀಯ ನಾಯಕರು ಇಸ್ಲಾಂ ಭಯೋತ್ಪಾದನೆ, ಎನ್‌ಆರ್‌ಸಿಗೆ ಪ್ರತೀಕಾರ ಎಂದೆಲ್ಲ ಕಲ್ಪಿತ ಸುದ್ದಿಗಳನ್ನು ಸಮಾಜದಲ್ಲಿ ಹರಿಬಿಟ್ಟರು.

ಆರೋಪಿ ಮುಸ್ಲಿಮೇತರ ಎಂದು ಖಚಿತವಾಗುತ್ತಿದ್ದಂತೆ ಬಾಂಬ್ ಇಟ್ಟವನಿಗೆ ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟಲಾಯಿತು. ಮಾಧ್ಯಮಗಳು ರಾಗ ಬದಲಿಸಿದ್ದು, ಬಾಂಬ್‌ ಅಲ್ಲ ಪಟಾಕಿ ಎಂದು ಬೊಬ್ಬೆ ಹೊಡೆಯುತ್ತಿವೆ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.

ADVERTISEMENT

ಆರೋಪಿ ಯಾರು ಎಂದು ತಿಳಿಯುವ ಮೊದಲೇ ಮಂಗಳೂರು ಗಲಭೆ ಹಿಂದೆ ಇದ್ದವರೇ ಬಾಂಬ್ ಇಟ್ಟಿರಬಹುದು ಎಂದುಸಂಸದ ಪ್ರಲ್ಹಾದ್ ಜೋಷಿ ಹೇಳಿದರೆ, ಮಂಗಳೂರು ಭಯೋತ್ಪಾದಕರ ಅಡ್ಡೆಯಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಆರೋಪಿ ಹಿಂದೂ ಎಂದು ತಿಳಿಯುತ್ತಿದ್ದಂತೆ ಎಲ್ಲರ ಬಾಯಿ ಬಂದ್ ಆಗಿದೆ ಎಂದು ವ್ಯಂಗ್ಯವಾಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಒಂದು ಹೆಜ್ಜೆ ಮುಂದೆ ಹೋಗಿ ಆದಿತ್ಯರಾವ್ ಮಾನಸಿಕ ಅಸ್ವಸ್ಥ ಎಂಬ ಹೇಳಿಕೆ ಕೊಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಬೇಜವಾಬ್ದಾರಿಯುತ ಹೇಳಿಕೆ ನೀಡಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದು, ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಾಂಬ್‌ ಕೃತ್ಯದ ಹಿಂದಿರುವ ಕಿಡಿಗೇಡಿಗಳು ಯಾರು, ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಬಾಂಬ್ ಸಾಗಿಸಿದ್ದು ಹೇಗೆ ಹಾಗೂ ಕೆಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸದಿರುವುದಕ್ಕೆ ಕಾರಣ ಏನು ಎಂಬ ಸತ್ಯ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಸೀಫ್‌ ಕೋಟೇಶ್ವರ, ಮುಖಂಡರಾದ ಅಬ್ದುಲ್ ರೆಹಮಾನ್‌ ಮಲ್ಪೆ, ಇಲಿಯಾಸ್ ಸಾಸ್ತಾನ, ಹಸನ್‌ ಕಟಪಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.