ADVERTISEMENT

ಮುಜರಾಯಿ ಇಲಾಖೆಗೆ ಸಾವಿರ ಸಿಬ್ಬಂದಿ ನೇಮಕಾತಿಗೆ ಪ್ರಸ್ತಾವ:ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 13:53 IST
Last Updated 7 ನವೆಂಬರ್ 2019, 13:53 IST
ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ಮುಜರಾಯಿ ಇಲಾಖೆಗೆ 1 ಸಾವಿರ ಸಿಬ್ಬಂದಿ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಸಾವಿರ ಸಿಬ್ಬಂದಿ ಪೈಕಿ650 ಮಂದಿಗೆ ದೇವಸ್ಥಾನಗಳಿಂದ ಬರುವ ಆದಾಯದಲ್ಲಿ ವೇತನ ನೀಡಲಾಗುವುದು. 350 ಮಂದಿಗೆ ಸರ್ಕಾರ ವೇತನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

‘ಬಿ’ ಹಾಗೂ ‘ಸಿ’ ದರ್ಜೆಯ ಪ್ರಮುಖ ದೇವಸ್ಥಾನಗಳಿಗೆ ತುರ್ತಾಗಿ 650 ಸಿಬ್ಬಂದಿ ನೇಮಕ ಮಾಡುವ ಅಗತ್ಯವಿದ್ದು, ನಿಯಮಾನುಸಾರ ಶೀಘ್ರ ನೇಮಕಾತಿ ನಡೆಯಲಿದೆ. 350 ಸಿಬ್ಬಂದಿಯನ್ನು ಸರ್ಕಾರ ನಿಯೋಜಿಸಲಿದೆ ಎಂದರು.

ADVERTISEMENT

ಕಾಯಂ ಸಿಬ್ಬಂದಿಗೆ 6ನೇ ವೇತನ ಆಯೋಗ ಜಾರಿ ಬೇಡಿಕೆಯಿದ್ದು, ಅದರಂತೆ ಕೆಲವು ದೇಗುಲಗಳ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. ದೇವಸ್ಥಾನದ ಆದಾಯದ ಶೇ 35ರಷ್ಟು ಮಾತ್ರ ಸಿಬ್ಬಂದಿಯ ವೇತನಕ್ಕೆ ವ್ಯಯಿಸಬೇಕು ಎಂಬ ನಿಯಮವಿದೆ. ಅದರಂತೆ ದೇಗುಲದ ಆರ್ಥಿಕ ಶಕ್ತಿಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದರು.

ಗುತ್ತಿಗೆ ಆಧಾರದಲ್ಲಿರುವ ಸಿಬ್ಬಂದಿಯ ವೇತನ ಪರಿಷ್ಕರಣೆ, ಕಾಯಂ ಹಾಗೂ ಪಿಎಫ್‌, ಇಎಸ್‌ಐ ಸೌಲಭ್ಯ ನೀಡಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಿ, ಅದರ ವರದಿಯ ಆಧಾರದಲ್ಲಿ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

100 ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸರ್ಕಾರವನ್ನು ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅವರ ಧ್ವನಿಯಲ್ಲಿ ಹಿಂದಿನ ಸಂಘಟನಾತ್ಮಕ ಚತುರತೆ ಕಳೆಗುಂದಿದ್ದು, ಏಕಾಂಗಿಯಾಗಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದವರು, ಅವರನ್ನು ಪಕ್ಷ ಗೌರವಿಸುತ್ತದೆ. ಆದರೆ, ಉಪ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಒಳ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿ ರದ್ಧತಿ ಹಾಗೂ ಟಿಪ್ಪು ವಿಚಾರ ಪಠ್ಯಪುಸ್ತಕದಿಂದ ತೆರವು ಈ ವಿಷಯಗಳು ಪುನರ್‌ ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.