ADVERTISEMENT

ಉಡುಪಿ | 'ಮನುಷ್ಯರನ್ನು ಹೊರಗಿಟ್ಟಿರುವ ವರದಿ'

ಕಸ್ತೂರಿರಂಗನ್ ವರದಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 5:26 IST
Last Updated 25 ಸೆಪ್ಟೆಂಬರ್ 2024, 5:26 IST
ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್, ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು
ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್, ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು   

ಉಡುಪಿ: ‘ಅರಣ್ಯದಂಚಿನಲ್ಲಿರುವ ಜನರು ಕಾಡು ಪ್ರಾಣಿಗಳಿಗೆ ತೊಂದರೆ ನೀಡದೆ ಅವುಗಳ ಜೊತೆಗೆ ಬದುಕಿದವರು. ಆದರೆ ಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಹೊರಗಿಟ್ಟು ಕಸ್ತೂರಿರಂಗನ್ ವರದಿ ಸಿದ್ಧಪಡಿಸಲಾಗಿದೆ’ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಆರೋಪಿಸಿದರು.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್, ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಇದು ಪ್ರಾಣಿ, ಪಕ್ಷಿಗಳ ರಕ್ಷಣೆಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವ ವರದಿ. ಹಾಗಾದರೆ ಆ ಪ್ರದೇಶಗಳಲ್ಲಿ ವಾಸಿಸುವ ಜನರು ಹೇಗೆ ಜೀವನ ಮಾಡಬೇಕು? ಈ ವರದಿ ಜಾರಿಯಾಗಬೇಕು ಎನ್ನುವವರು ಇಂಗ್ಲಿಷ್ ಮಾಧ್ಯಮ ಅಥವಾ ವಿದೇಶಿ ಕೃಪಾಪೋಷಿತ ಪರಿಸರವಾದಿಗಳಾಗಿದ್ದಾರೆ’ ಎಂದರು.

ADVERTISEMENT

ಪಶ್ಚಿಮ ಘಟ್ಟವು ಭಾರತದ ಭೂಪಟದಲ್ಲಿ ಶೇ 5ರಷ್ಟು ಮಾತ್ರ ಇದೆ. ಆದರೆ ಪರಿಸರದ ದೃಷ್ಟಿಯಿಂದ ಇದು ಅತ್ಯಮೂಲ್ಯ ಪ್ರದೇಶ. 56 ನದಿಗಳು ಇಲ್ಲಿಂದಲೇ ಹುಟ್ಟುತ್ತಿವೆ ಎಂದು ಹೇಳಿದರು.

ಹಿಂದೆ ಮಾಧವ ಗಾಡ್ಗೀಳ್ ವರದಿ ಜಾರಿಗೆ ಹೊರಟಾಗ ಕೇರಳದಲ್ಲಿ ವ್ಯಾಪಕ ಹೋರಾಟ ನಡೆದಿತ್ತು. ಆ ಕಾರಣಕ್ಕೆ ಅದರ ಬದಲಾಗಿ ಕಸ್ತೂರಿರಂಗನ್  ವರದಿಯನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿರುವ ಅಂಶಗಳನ್ನೇ ಸ್ವಲ್ಪ ಬದಲಿಸಿ ಇದರಲ್ಲೂ ಬಳಸಲಾಗಿದೆ ಎಂದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ಜಾರಿಯಾಗಿ ನೂರಾರು ಮಂದಿ ಮನೆ ಕಳೆದುಕೊಂಡರು. ಅದರ ಹಿಂದೆ ಇರುವವರೇ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಹಿಂದೆಯೂ ಇದ್ದಾರೆ. ಭೂಕುಸಿತಕ್ಕೂ ಈ ವರದಿಗೂ ಯಾವುದೇ ಸಂಬಂಧವಿಲ್ಲ. ಕೇರಳದ ವಯನಾಡ್‌ನಲ್ಲಿ ಸಂಭವಿಸಿರುವ ಭೂಕುಸಿತವನ್ನು ಮುಂದಿಟ್ಟುಕೊಂಡು ವರದಿಯನ್ನು ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರವು ಈ ವರದಿ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ನಾವು ಎಚ್ಚೆತ್ತು ಸಂಘಟಿತ ಹೋರಾಟ ಮಾಡದಿದ್ದರೆ ಇದನ್ನು ಜಾರಿ ಮಾಡಿಯೇ ಮಾಡುತ್ತಾರೆ ಎಂದು ಹೇಳಿದರು.

ಮಾಜಿ ಶಾಸಕ ಗೋಪಾಲ್‌ ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ವಾಸುದೇವ ಮುದೂರು, ಲಕ್ಷ್ಮಣ ಶೆಟ್ಟಿ ಮುದೂರು, ರಂಜಿತ್‌ ಎಂ.ವಿ., ಜಿ.ಬಿ. ಮೋಹನ್‌ ಜಡ್ಕಲ್‌, ಜೋಯ್ ವಿ.ಜೆ., ಜಯನ್‌ ಮಲ್ಪೆ ಹಾಗೂ ವಿವಿಧ ಚರ್ಚ್‌ಗಳ ಧರ್ಮಗುರುಗಳು ಭಾಗವಹಿಸಿದ್ದರು.

‘ನಮಗೂ ಬದುಕಬೇಕು’ ನಮ್ಮ ಊರು ನಮ್ಮ ಪರಿಸರವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ನಮಗೂ ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿ ಇದೆ ಜೊತೆಗೆ ನಮಗೂ ಬದುಕಬೇಕು ಅದಕ್ಕಾಗಿ ಈ ವರದಿಯನ್ನು ವಿರೋಧಿಸಲಾಗುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಹೇಳಿದರು. ನನ್ನನ್ನೂ ಸೇರಿದಂತೆ ರಾಜಕೀಯದವರನ್ನು ನೀವು ಹೆಚ್ಚಾಗಿ ನಂಬಿ ಕೂರಬೇಡಿ. ನಾವು ಬದಲಾಗುತ್ತಾ ಇರುತ್ತೇವೆ. ಆದರೆ ನೀವು ಅಲ್ಲೇ ಇರುತ್ತೀರಿ ನಿಮ್ಮ ಮನೆ ಹೊಲ ತೋಟವನ್ನು ಉಳಿಬೇಕಾದರೆ ನೀವು ಹೋರಾಟ ನಡೆಸಬೇಕು ಎಂದರು. ಕಸ್ತೂರಿರಂಗನ್‌ ವರದಿ ವಿರುದ್ಧ ಜಡ್ಕಲ್ ಮುದೂರಿನವರು ಹೋರಾಟ ಆರಂಭಿಸಿದ್ದಾರೆ. ಈ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.