ADVERTISEMENT

‘ಮೂಕಜ್ಜಿ’ಯ ಆಯುಸ್ಸು ಪ್ರೇಕ್ಷಕರ ಕೈನಲ್ಲಿ

ಸಧಭಿರುಚಿಯ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ: ನಿರ್ದೇಶಕ ಪಿ.ಶೇಷಾದ್ರಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 9:47 IST
Last Updated 31 ಡಿಸೆಂಬರ್ 2019, 9:47 IST
ಮಣಿಪಾಲದ ಭಾರತ್ ಸಿನಿಮಾಸ್‌ ಚಿತ್ರಮಂದಿರದಲ್ಲಿ ಮೂಕಜ್ಜಿಯ ಕನಸು ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ ಸುದ್ದಿಗೋಷ್ಠಿ ನಡೆಸಿದರು.
ಮಣಿಪಾಲದ ಭಾರತ್ ಸಿನಿಮಾಸ್‌ ಚಿತ್ರಮಂದಿರದಲ್ಲಿ ಮೂಕಜ್ಜಿಯ ಕನಸು ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಅಕ್ಷರ ರೂಪಕ್ಕೆ ಇಳಿದು ಅರ್ಧ ಶತಮಾನ ಕಳೆದಿದೆ. ಇಂತಹ ಅದ್ಭುತ ಕಾದಂಬರಿಯನ್ನು ಬೆಳ್ಳಿತೆರೆ ಮೇಲೆ ತಂದರೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ ಬೇಸರ ವ್ಯಕ್ತಪಡಿಸಿದರು.

ಮಣಿಪಾಲದ ಭಾರತ್ ಸಿನಿಮಾಸ್‌ ಚಿತ್ರಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೂಕಜ್ಜಿಯ ಕನಸು ಚಿತ್ರ ಈ ವಾರಚಿತ್ರಮಂದಿರಗಳಲ್ಲಿ ಉಳಿಯದಿದ್ದರೆ ‘ಮೂಕಜ್ಜಿ’ಯ ಆಯುಸ್ಸು ವಾರಕ್ಕೆ ಮುಕ್ತಾಯವಾಗಲಿದೆ ಎಂದು ನೋವು ತೋಡಿಕೊಂಡರು.

‘ಕಾರಂತರು ನಡೆದಾಡಿದ ಪರಿಸರದಲ್ಲಿ ಚಿತ್ರ ನಿರ್ಮಿಸಲಾಗಿದೆ. ಸ್ಥಳೀಯ ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ಆದರೂ, ಕಾರಂತರ ಹುಟ್ಟೂರಿನಲ್ಲಿ ಪ್ರೇಕ್ಷಕರ ಬೆಂಬಲ ನಿರೀಕ್ಷಿತ ಮಟ್ಟದಲ್ಲಿಲ್ಲ.ಕಾರಂತರ ಅಭಿಮಾನಿಗಳು ಎಲ್ಲಿ ಹೋದರು ಎಂಬ ಅನುಮಾನ ಕಾಡುತ್ತಿದೆ’ ಎಂದರು.

ADVERTISEMENT

ಕುಂದಾಪುರದ ವಿನಾಯಕ ಚಿತ್ರಮಂದಿರ ಹಾಗೂ ಮಣಿಪಾಲದ ಭಾರತ್ ಮಲ್ಪಿಪ್ಲೆಕ್ಸ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಹರಸಾಹಸ ಪಡಬೇಕಾಯಿತು.ಸಧಬಿರುಚಿಯ ಹಾಗೂ ಕುಂದಾಪುರ ಭಾಷೆಯ ಸೊಗಡು ತುಂಬಿರುವ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಶೇಷಾದ್ರಿ ಮನವಿ ಮಾಡಿದರು.

ಅವಾರ್ಡ್‌ ಅಥವಾ ಆರ್ಟ್‌ ಸಿನಿಮಾವಲ್ಲ:ಮೂಕಜ್ಜಿಯ ಕನಸು ಚಿತ್ರಕ್ಕೆ ಆರ್ಟ್‌ ಅಥವಾ ಅವಾರ್ಡ್‌ ಸಿನಿಮಾ ಎಂಬ ಹಣೆಪಟ್ಟಿ ಕಟ್ಟಬೇಡಿ. ಚಿತ್ರರಂಗದಲ್ಲಿ ಇರುವುದು ಒಳ್ಳೆಯ ಹಾಗೂ ಕೆಟ್ಟ ಚಿತ್ರಗಳು ಮಾತ್ರ. ಈ ಪೈಕಿ ‘ಮೂಕಜ್ಜಿಯ ಕನಸುಗಳು’ ಅರ್ಥಪೂರ್ಣ, ಸದಭಿರುಚಿಯ ಒಳ್ಳೆಯ ಚಿತ್ರ ಎಂದು ಧೈರ್ಯವಾಗಿ ಹೇಳುತ್ತೇನೆ ಎಂದು ಹೇಳಿದರು.

ಕನ್ನಡ ನೆಲದಲ್ಲಿಯೇ ಸವಾಲು:ನ.29ರಲ್ಲಿ ರಾಜ್ಯದಲ್ಲಿ ಬಿಡುಗಡೆಯಾದ45 ಚಿತ್ರಗಳಲ್ಲಿ ಕನ್ನಡ ಸಿನಿಮಾಗಳು ಕೇವಲ 9. ಉಳಿದವು ತೆಲುಗು, ಹಿಂದಿ, ತಮಿಳು, ಬೆಂಗಾಲಿ, ಭೋಜಪುರಿ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆಮಾಡುವುದು ಸವಾಲಿನ ಕೆಲಸವಾಗಿದೆ ಎಂದರು.

ರಾಜ್ಯದಲ್ಲಿ ಪರಭಾಷೆಯ ಚಿತ್ರಗಳು ಬಿಡುಗಡೆಯಾದಂತೆ,10 ಲಕ್ಷ ಕನ್ನಡಿಗರು ತುಂಬಿರುವ ಚೆನ್ನೈನಲ್ಲಿ, 20 ಲಕ್ಷ ಕನ್ನಡಿಗರು ನೆಲೆಸಿರುವ ಮುಂಬೈನಲ್ಲಿ, 7 ಲಕ್ಷ ಇರುವ ದೆಹಲಿಯಲ್ಲಿ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ ಎಂದರು.

ಕನ್ನಡ ಸಿನಿಮಾ ಬಿಡುಗಡೆಯಾದ ಮೂರು ದಿನಗಳಲ್ಲಿ ಅದರ ಆಯುಷ್ಯ ನಿರ್ಧಾರವಾಗುತ್ತದೆ. ಶುಕ್ರವಾರ, ಶನಿವಾರ, ಭಾನುವಾರ ಸಿನಿಮಾ ಓಡಿದರೆ ಸೋಮವಾರ ಉಳಿಯುತ್ತದೆ. ಇಲ್ಲವಾದರೆ ಎತ್ತಂಗಡಿಯಾಗುತ್ತದೆ. ಮಲ್ಪಿಪ್ಲೆಕ್ಸ್‌ಗಳಲ್ಲಿ ಚಿತ್ರ ಉಳಿಯಬೇಕಾದರೆ ಪ್ರೇಕ್ಷಕರ ಹಾಜರಾತಿ ಮುಖ್ಯ ಎಂದರು.

ಬೆಂಗಳೂರಿನಲ್ಲಿ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ ಉತ್ತಮವಾಗಿದೆ. ಮೈಸೂರಿನಲ್ಲಿ ಪರ್ವಾಗಿಲ್ಲ. ಉಡುಪಿ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ನೀರಸವಾಗಿದೆ. ಚಿತ್ರಮಂದಿರದಲ್ಲಿ ಮೂಕಜ್ಜಿಯನ್ನು ಉಳಿಸಿಕೊಳ್ಳಬೇಕಾದ ಹೊಣೆ ಪ್ರೇಕ್ಷಕರದ್ದು ಎಂದು ಮನವಿ ಮಾಡಿದರು.

ನಟರಾದ ಪ್ರದೀಪ್ ಚಂದ್ರ ಕುತ್ಪಾಡಿ, ಅರವಿಂದ ಕುಪ್ಳೀಕರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.