ADVERTISEMENT

ಪಿಯುಸಿ ಫಲಿತಾಂಶ: ಉಡುಪಿಗೆ ದ್ವಿತೀಯ ಸ್ಥಾನ

ಶೇ 86.38 ಫಲಿತಾಂಶ; 13 ವರ್ಷಗಳಿಂದ ಮೊದಲೆರಡು ಸ್ಥಾನ ಕಾಯ್ದುಕೊಂಡ ಉಡುಪಿ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 14:30 IST
Last Updated 18 ಜೂನ್ 2022, 14:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಶೇ 86.38 ಫಲಿತಾಂಶ ಪಡೆದುಕೊಂಡಿರುವ ಉಡುಪಿ ಜಿಲ್ಲೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಸತತ 13 ವರ್ಷಗಳಿಂದ ಉಡುಪಿ ಮೊದಲ ಎರಡು ಸ್ಥಾನಗಳನ್ನು ಕಾಯ್ದುಕೊಂಡು ಬಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.

ಈ ವರ್ಷ 14,582 (ಫ್ರೆಷರ್ಸ್‌) ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಅವರಲ್ಲಿ 12,604 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 326 ಖಾಸಗಿ ವಿದ್ಯಾರ್ಥಿಗಳ ಪೈಕಿ 117 ಮಂದಿ ಪಾಸಾದರೆ, 349 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 96 ಮಂದಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗ ಮೇಲುಗೈ:

ADVERTISEMENT

ಕಲಾ ಹಾಗೂ ವಾಣಿಜ್ಯ ವಿಭಾಗಕ್ಕಿಂತ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 5,346 ವಿದ್ಯಾರ್ಥಿಗಳಲ್ಲಿ 4,773 ಮಂದಿ ಉತ್ತೀರ್ಣರಾಗಿದ್ದು ಶೇ 89.28ರಷ್ಟು ಫಲಿತಾಂಶ ದಾಖಲಾಗಿದೆ.

ಕಲಾ ವಿಭಾಗದಲ್ಲಿ 1,680 ವಿದ್ಯಾರ್ಥಿಗಳಲ್ಲಿ 1,114 ಮಂದಿ ಪಾಸಾಗಿದ್ದು ಶೇ 66.31 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 8,241 ವಿದ್ಯಾರ್ಥಿಗಳಲ್ಲಿ 6,930 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 84.09 ಫಲಿತಾಂಶ ಸಿಕ್ಕಿದೆ.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ:

ನಗರ ಪ್ರದೇಶಗಳಿಗೆ ಹೋಲಿಸಿದರೆ ಹಳ್ಳಿ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮುಂದಿದ್ದಾರೆ. 7,974 ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ 6,810 ಮಂದಿ ಪಾಸಾಗಿದ್ದು ಶೇ 85.4 ರಷ್ಟು ಫಲಿತಾಂಶ ಬಂದಿದೆ. ನಗರ ಪ್ರದೇಶಗಳಿಂದ ಪರೀಕ್ಷೆ ಬರೆದಿದ್ದ 7,293 ವಿದ್ಯಾರ್ಥಿಗಳಲ್ಲಿ 6,007 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 82.37 ಫಲಿತಾಂಶ ಸಿಕ್ಕಿದೆ.

ಹೆಣ್ಮಕ್ಕಳೇ ಸ್ಟ್ರಾಂಗ್‌:

ಈ ಬಾರಿಯೂ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 7,552 ಬಾಲಕರಲ್ಲಿ 6,038 ಮಂದಿ ಪಾಸಾಗಿದ್ದು ಶೇ 79.95 ಫಲಿತಾಂಶ ಬಂದರೆ, 7,715 ಬಾಲಕಿಯರ ಪೈಕಿ 6,779 ಪಾಸಾಗಿದ್ದು, ಶೇ 87.87ರಷ್ಟು ಫಲಿತಾಂಶ ಬಂದಿದೆ.

ಇಂಗ್ಲೀಷ್ ಮಾಧ್ಯಮ ಮುಂದು:

ಉತ್ತೀರ್ಣರಾದವರಲ್ಲಿ ಕನ್ನಡ ಮಾಧ್ಯಮಕ್ಕಿಂತ ಇಂಗ್ಲೀಷ್ ಮಾಧ್ಯಮದವರು ಹೆಚ್ಚಾಗಿದ್ದಾರೆ. 12,421 ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಲ್ಲಿ 10,872 ಮಂದಿ ಪಾಸಾಗಿದ್ದು, ಶೇ 87.53ರಷ್ಟು ಫಲಿತಾಂಶ ಬಂದರೆ, 2,846 ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ 1,945 ಮಂದಿ ಉತ್ತೀರ್ಣರಾಗಿದ್ದು ಶೇ 68.34 ಫಲಿತಾಂಶ ಬಂದಿದೆ.

1,030 ಎಸ್‌ಸಿ ವರ್ಗದ ವಿದ್ಯಾರ್ಥಿಗಳ ಪೈಕಿ 767, 672 ಎಸ್‌ಟಿಗೆ ಸೇರಿದ ವಿದ್ಯಾರ್ಥಿಗಳಲ್ಲಿ 522, ಪ್ರವರ್ಗ 1ಕ್ಕೆ ಸೇರಿದ 1,798 ವಿದ್ಯಾರ್ಥಿಗಳಲ್ಲಿ 1,502, ಪ್ರವರ್ಗ 2 ಎಗೆ ಸೇರಿದ 5898 ವಿದ್ಯಾರ್ಥಿಗಳಲ್ಲಿ 5,049, ಪ್ರವರ್ಗ 2 ಬಿಗೆ ಸೇರಿದ 1,322 ವಿದ್ಯಾರ್ಥಿಗಳಲ್ಲಿ 1,005 ಪ್ರವರ್ಗ 3 ಎಗೆ ಸೇರಿದ 343 ವಿದ್ಯಾರ್ಥಿಗಳಲ್ಲಿ 312, ಪ್ರವರ್ಗ 3 ಬಿಗೆ ಸೇರಿದ 2,615 ವಿದ್ಯಾರ್ಥಿಗಳಲ್ಲಿ 2,351, ಇತರೆ ವರ್ಗಗಳಿಗೆ ಸೇರಿದ 1,589 ವಿದ್ಯಾರ್ಥಿಗಳಲ್ಲಿ 1,309 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ಪ್ರಮಾಣ ಕುಸಿತ

2021ರಲ್ಲಿ ಕೋವಿಡ್–19 ಕಾರಣದಿಂದ ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲಾಗಿತ್ತು. ಈ ಶೈಕ್ಷಣಿಕ ಸಾಲಿನಲ್ಲಿ ಉತ್ಸಾಹದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹಿಂದಿನ 10 ವರ್ಷಗಳ ಫಲಿತಾಂಶ ಗಮನಿಸಿದರೆ ಜಿಲ್ಲೆಯ ಫಲಿತಾಂಶ ಪ್ರಮಾಣದಲ್ಲಿ ಕುಸಿತವಾಗಿದೆ. 2020ರಲ್ಲಿ ಉಡುಪಿ ಶೇ 90.71ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿತ್ತು. ಕಳೆದ 8 ವರ್ಷಗಳಲ್ಲಿ ಒಮ್ಮೆಯೂ ಶೇ 90ಕ್ಕಿಂತ ಕಡಿಮೆ ಫಲಿತಾಂಶ ಬಂದಿರಲಿಲ್ಲ.

ಕಳೆದ 13 ವರ್ಷಗಳ ಫಲಿತಾಂಶ

–––––––––––––

ವರ್ಷ–ಫಲಿತಾಂಶ–ಸ್ಥಾನ

2010–ಶೇ89.08–1

2011–ಶೇ87.15–1

2012–ಶೇ85.32–2

2013–ಶೇ92.72–1

2014–ಶೇ90.93–2

2015–ಶೇ92.32–2

2016–ಶೇ90.35–2

2017–ಶೇ90.01–1

2018–ಶೇ90.67–2

2019–ಶೇ92.20–1

2020–ಶೇ90.71–1

2021–ಪರೀಕ್ಷೆ ಇಲ್ಲ

2022–ಶೇ86.38–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.