ADVERTISEMENT

7 ದಿನ ಪೂರೈಸಿದವರಿಗೆ ಹೋಂ ಕ್ವಾರಂಟೈನ್‌

14 ದಿನ ಪೂರ್ಣಗೊಳಿಸಿದವರು ಮನೆಯಲ್ಲಿ 14 ದಿನ ನಿಗಾ: ಜಿಲ್ಲಾಧಿಕಾರಿ ಜಿ.ಜಗದೀಶ್‌

​ಪ್ರಜಾವಾಣಿ ವಾರ್ತೆ
Published 28 ಮೇ 2020, 14:37 IST
Last Updated 28 ಮೇ 2020, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ:ವಿದೇಶ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದು 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಆದರೆ, ಅವರೆಲ್ಲರೂ 7 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚನೆ ನೀಡಿದ್ದಾರೆ.

ಹೋಂ ಕ್ವಾರಂಟೈನ್ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.ಕಡ್ಡಾಯವಾಗಿ ಕ್ವಾರಂಟೈನ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡೇ ತೆರಳಬೇಕು. ಈ ಆ್ಯಪ್‌ನಲ್ಲಿ ಜಿಯೋ ಫೆನ್ಸಿಂಗ್ ವ್ಯವಸ್ಥೆಯಿದ್ದು, ಹೋಂಕ್ವಾರಂಟೈನ್‌ನಲ್ಲಿರುವವ್ಯಕ್ತಿ ಮನೆಬಿಟ್ಟು ಹೊರಬಂದರೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಗುತ್ತದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ಎಚ್ಚರಿಕೆ ಕೊಟ್ಟು, ಎರಡನೇ ಬಾರಿ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರನ್ನು ನೇರವಾಗಿ ಮನೆಗೆ ಕಳುಹಿಸಲಾಗುತ್ತಿದ್ದು, ಇವರೆಲ್ಲ ಮುಂದಿನ 14 ದಿನಗಳ ಕಾಲ ರಿಪೋರ್ಟಿಂಗ್‌ನಲ್ಲಿರಬೇಕು. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು. ಜ್ವರ, ಶೀತ ಸೇರಿದಂತೆ ಯಾವುದೇ ರೋಗದ ಲಕ್ಷಣಗಳು ಕಂಡುಬಂದರೂ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಕೋವಿಡ್‌ ಪರೀಕ್ಷೆಗೊಳಪಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ADVERTISEMENT

ಹೊರಗಿನಿಂದ ಬಂದವರು 8,010 ಮಂದಿ:ಹೊರ ರಾಜ್ಯ ಹಾಗೂ ವಿದೇಶಗಳಿಂದ ಜಿಲ್ಲೆಗೆ 8,010 ಮಂದಿ ಬಂದಿದ್ದು, ಎಲ್ಲರೂ ಹೋಟೆಲ್ ಹಾಗೂ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದರು. 14 ದಿನಗಳ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಕಳುಹಿಸುತ್ತಿಲ್ಲ ಎಂದು ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಜಿಲ್ಲಾಡಳಿತ ಕ್ವಾರಂಟೈನ್‌ನಲ್ಲಿದ್ದವರ ಗಂಟಲ ದ್ರವದ ಮಾದರಿ ಬರುವವರೆಗೂ ಮನೆಗೆ ಕಳುಹಿಸದಿರಲು ನಿರ್ಧರಿಸಿತ್ತು. ಈಗ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ವಾರಂಟೈನ್‌ ಅವಧಿ ಮುಗಿಸಿದವರನ್ನು ಮನೆಗಳಿಗೆ ಕಳುಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.