ADVERTISEMENT

ಬೋಟ್‌ ಸಿಕ್ಕಿದ್ದು ಸಂತೋಷವಲ್ಲ; ಸಮಾಧಾನ

ಸಾಗರದಾಳದಲ್ಲಿ ನಾಲ್ಕು ದಿನ ನಡೆದ ಬೋಟ್‌ ಶೋಧ ಕಾರ್ಯ: ಶಾಸಕ ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 4 ಮೇ 2019, 1:42 IST
Last Updated 4 ಮೇ 2019, 1:42 IST
ಶುಕ್ರವಾರ ಮಲ್ಪೆಯ ಮೀನುಗಾರರ ಸಮುದಾಯ ಭವನದಲ್ಲಿ ಶಾಸಕ ರಘುಪತಿ ಭಟ್‌ ಸುದ್ದಿಗೋಷ್ಠಿ ನಡೆಸಿದರು.
ಶುಕ್ರವಾರ ಮಲ್ಪೆಯ ಮೀನುಗಾರರ ಸಮುದಾಯ ಭವನದಲ್ಲಿ ಶಾಸಕ ರಘುಪತಿ ಭಟ್‌ ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ಸ್ಥಳೀಯ ಮೀನುಗಾರರ ಜ್ಞಾನ ಹಾಗೂ ನಿವೃತ್ತ ಕ್ಯಾಪ್ಟನ್‌ ಜಯಪ್ರಕಾಶ್‌ ಮೆಂಡನ್ ಅವರ ಅನುಭವ ಸುವರ್ಣ ತ್ರಿಭುಜ ಬೋಟ್‌ ಪತ್ತೆಗೆ ನೆರವಾಯಿತು ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ಶುಕ್ರವಾರ ಮಲ್ಪೆಯ ಮೀನುಗಾರರ ಸಮುದಾಯ ಭವನದಲ್ಲಿ ಮಾತನಾಡಿದ ಅವರು,ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದಲ್ಲಿ ಹಿಂದೆಯೂ ಐಎನ್‌ಎಸ್‌ ನಿರೀಕ್ಷಕ್‌ 10 ದಿನ ನಿರಂತರವಾಗಿ ಶೋಧ ನಡೆಸಿತ್ತು. ಆದರೆ ಪ್ರಯೋಜನವಾಗಿರಲಿಲ್ಲ. ಈ ಬಾರಿಯ ಕಾರ್ಯಾಚರಣೆ ಯಶಸ್ಸಾಗಲು ಅನುಭವಿ ಮೀನುಗಾರರು ಹಾಗೂ ನಿವೃತ್ತ ಕ್ಯಾಪ್ಟನ್‌ ಕಾರಣ ಎಂದರು.

ಕಾರ್ಯಾಚರಣೆ ಹೇಗಿತ್ತು:ಏ.29ರಂದು ಮಧ್ಯರಾತ್ರಿ 10 ಜನರನ್ನೊಳಗೊಂಡ ತಂಡ ಕಾರವಾರದ ನೌಕಾನೆಲೆ ತಲುಪಿತು. ಅಲ್ಲಿಂದ ಐಎನ್‌ಎಸ್‌ ನಿರೀಕ್ಷಕ್‌ ಹಡಗಿನ ಮೂಲಕ ಶೋಧ ಕಾರ್ಯ ಆರಂಭವಾಯಿತು. ಸೋನಾರ್ ತಂತ್ರಜ್ಞಾನದ ನೆರವಿನಿಂದ 30 ಹಾಗೂ ಮೇ 1ರಂದು ಸಮುದ್ರಾಳದಲ್ಲಿ ಹುಡುಕಾಟ ನಡೆಸಲಾಯಿತು. ಯಾವ ಸುಳಿವೂ ಸಿಗಲಿಲ್ಲ ಎಂದರು.

ADVERTISEMENT

ಬುಧವಾರ ಸಿಕ್ಕಿತು ಸುಳಿವು:ಬುಧವಾರ ಸೋನಾರ್‌ ರೇಡಾರ್‌ಗೆ ಕಂಪನಗಳು ಲಭ್ಯವಾದವು. ಆ ಜಾಗದಲ್ಲಿ 16 ಮೀಟರ್‌ ಆಳದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಆಗ ಕ್ಯಾಮೆರಾ ಕಣ್ಣಿಗೆ ಹಡಗಿನ ಬಲೆಯ ಅವಶೇಷ ಸೆರೆ ಸಿಕ್ಕಿತು. ಸೂಕ್ಷ್ಮವಾಗಿ ಅವಲೋಕಿಸಿದಾಗ ಹಡಗಿನ ಮೇಲಿದ್ದ ಅಕ್ಷರಗಳು ಗೋಚರಿಸಿದವು ಎಂದು ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿದರು.

ಮುಳುಗು ತಜ್ಞರಿಂದ ದೃಢ

ಗುರುವಾರನೌಕಾಪಡೆಯ ಮುಳುಗು ತಜ್ಞರು 65 ಮೀಟರ್‌ ಆಳಕ್ಕೆ ಇಳಿದು ಶೋಧ ನಡೆಸಿದಾಗ ಸುವರ್ಣ ತ್ರಿಭುಜ ಬೋಟ್‌ ಪತ್ತೆಯಾಯಿತು. ಅವಶೇಷಗಳ ಫೋಟೊ, ವಿಡಿಯೋಗಳನ್ನು ಅಧಿಕಾರಿಗಳು ತಂಡಕ್ಕೆ ಪ್ರದರ್ಶಿಸಿದರು ಎಂದು ತಿಳಿಸಿದರು.

ಮೀನುಗಾರರು ಬದುಕುಳಿದಿರುವ ಸಾಧ್ಯತೆ ಇಲ್ಲ:ಬೋಟ್ ಮಗುಚಿಕೊಂಡಿದ್ದು, ಕ್ಯಾಬೀನ್‌ಗಳು ತೆರೆದುಕೊಂಡಿರುವುದು ಕಂಡುಬಂತು. ಬೋಟ್‌ ಒಳಗೆ ಮೃತದೇಹಗಳು ಸಿಗಲಿಲ್ಲ. ಮೇಲ್ನೋಟಕ್ಕೆ ಮೀನುಗಾರರು ಬದುಕುಳಿದಿರುವ ಸಾಧ್ಯತೆಗಳು ಇಲ್ಲ. ಬೋಟ್‌ ಮುಳುಗಡೆಯಾದಾಗ ಸಮೀಪದ ಹಡಗಿನಿಂದ ರಕ್ಷಣೆ ಪಡೆದಿದ್ದರೆ ಇಷ್ಟೊತ್ತಿಗೆ ಮನೆಗೆ ಮರಳಬೇಕಿತ್ತು ಎಂದು ಶಾಸಕರು ಅಭಿಪ್ರಾಯಪಟ್ಟರು.

ನಿವೃತ್ತ ಕ್ಯಾಪ್ಟನ್‌ ಜಯಪ್ರಕಾಶ್ ಕುಂದರ್ ಮಾತನಾಡಿ, ಮಾಲ್ವಾನ್ ಪ್ರದೇಶದಲ್ಲಿ ಸಂಶಯ ಬಂದ 1.5 ನಾಟಿಕಲ್‌ ಮೈಲು ಸಮುದ್ರವನ್ನು ಇಂಚಿಂಚೂ ಪರಿಶೀಲನೆ ನಡೆಸಲಾಯಿತು. ಅಂತಿಮವಾಗಿ ಪ್ರಯತ್ನಕ್ಕೆ ಫಲ ದೊರೆಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್, ಸಹಾಯಕ ನಿರ್ದೇಶಕ ಚಂದ್ರಶೇಖರ್, ಕಿರಣ್‌, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.