ADVERTISEMENT

ಮಳೆಯ ಆರ್ಭಟ: ನಲುಗಿದ ಜನಜೀವನ

ಅಪಾಯದಲ್ಲಿದ್ದ 30ಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 13:51 IST
Last Updated 13 ಅಕ್ಟೋಬರ್ 2021, 13:51 IST
ಉಡುಪಿಯಲ್ಲಿ ಮಂಗಳವಾರ ಸುರಿದ ಬಿರುಸಿನ ಮಳೆಯಿಂದ ಕಲ್ಸಂಕ ಬಳಿ ಹಲವು ಮಳೆಗಳಿಗೆ ನೀರು ನುಗ್ಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.
ಉಡುಪಿಯಲ್ಲಿ ಮಂಗಳವಾರ ಸುರಿದ ಬಿರುಸಿನ ಮಳೆಯಿಂದ ಕಲ್ಸಂಕ ಬಳಿ ಹಲವು ಮಳೆಗಳಿಗೆ ನೀರು ನುಗ್ಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.   

ಉಡುಪಿ: ವಾಯುಭಾರ ಕುಸಿತ ಹಾಗೂ ಚಂಡಮಾರುತ ಪರಿಣಾಮ ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಲ್ಲಿರುವ ನೂರಾರು ಮನೆಗಳಿಗೆ ನೀರುನುಗ್ಗಿದ್ದು, ಹಲವು ಪ್ರದೇಶಗಳಲ್ಲಿ ಕೃತಕ ನೆರೆ ನಿರ್ಮಾಣವಾಗಿತ್ತು. ಉಡುಪಿ ನಗರದಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದರು.

ಮಂಗಳವಾರ ಮಧ್ಯಾಹ್ನ 4ರ ಸುಮಾರಿಗೆ ಆರಂಭವಾದ ಮಳೆ ಮಧ್ಯರಾತ್ರಿವರೆಗೂ ಎಡೆಬಿಡದೆ ಸುರಿದ ಪರಿಣಾಮ ಕಲ್ಸಂಕ, ಮಠದಬೆಟ್ಟು, ಬನ್ನಂಜೆ, ಮೂಡನಿಡಂಬೂರು ಬೈಲಕೆರೆ ಪ್ರದೇಶಗಳು ಜಲಾವೃತವಾಗಿದ್ದವು. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದ ಸುತ್ತಮುತ್ತಲು ಹಲವು ಮನೆಗಳಿಗೆ ನೀರು ನುಗ್ಗಿ, ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಬೋಟ್‌ಗಳ ಸಹಾಯದಿಂದ ಅಪಾಯದಲ್ಲಿದ್ದವರನ್ನು ರಕ್ಷಿಸಿ ಸ್ಥಳಾಂತರ ಮಾಡಿದರು. ನೆರೆ ನೀರು ಇಳಿದ ಬಳಿಕ ಬುಧವಾರ ಸಂತ್ರಸ್ತರು ಮನೆಗಳಿಗೆ ವಾಪಾಸಾದರು. ಕಳೆದ ವರ್ಷ ಕೂಡ ಸೆಪ್ಟೆಂಬರ್‌ನಲ್ಲಿ ಭೀಕರ ನೆರೆ ಸಂಭವಿಸಿತ್ತು. ಈ ವರ್ಷವೂ ನೆರೆ ಭೀತಿ ಉಂಟಾಗಿ, ಬುಧವಾರ ಮಳೆ ಕ್ಷೀಣವಾಗಿದ್ದರಿಂದ ಆತಂಕ ಸ್ವಲ್ಪ ದೂರವಾದಂತಾಗಿದೆ.

ADVERTISEMENT

ಬನ್ನಂಜೆಯಲ್ಲಿರುವ ಸಾರ್ವಜನಿಕ ನಾಗಬನ ಸಂಪೂರ್ಣ ಮುಳುಗಡೆಯಾಗಿದ್ದು ಪೂಜೆ, ಉತ್ಸವ ರದ್ದುಪಡಿಸಲಾಗಿದೆ. ಜಿಲ್ಲೆಯ ಸ್ವರ್ಣಾ, ಸೀತಾ, ಪಾಪನಾಶಿನಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮಳೆ ನೀರು ಕೃಷಿ ಜಮೀನುಗಳಿಗೆ ನುಗ್ಗಿ ಭತ್ತದ ಕೃಷಿ ನಾಶವಾಗಿದೆ. ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಬೆಳೆ ಹಾನಿ ಅಂದಾಜು ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 9.23 ಸೆಂ.ಮೀ ಮಳೆಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ 17.92, ಬ್ರಹ್ಮಾವರದಲ್ಲಿ 14.28, ಕಾಪುವಿನಲ್ಲಿ 19.63, ಕುಂದಾಪುರದಲ್ಲಿ 2.94, ಬೈಂದೂರು 1.62, ಕಾರ್ಕಳದಲ್ಲಿ 13.52 ಹಾಗೂ ಹೆಬ್ರಿಯಲ್ಲಿ 8.89 ಸೆಂ.ಮೀ ಮಳೆ ಬಿದ್ದಿದೆ.

ಮುಂದಿನ ಮೂರು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅ.15 ಹಾಗೂ 16ರಂದು ಯಲ್ಲೊ ಅಲರ್ಟ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.