ADVERTISEMENT

ತಾಳೆ ಬೆಳೆಗೂ ಕೆಂಪು ಮೂತಿ ಹುಳ ಕಾಟ

ಸಾಯುತ್ತಿವೆ ತಾಳೆ ಮರಗಳು: ಪ್ರಯೋಗಾತ್ಮಕ ಕೃಷಿ ಮಾಡಿದ್ದ ರೈತರಿಗೆ ಸಂಕಷ್ಟ

ನವೀನ್ ಕುಮಾರ್ ಜಿ.
Published 31 ಅಕ್ಟೋಬರ್ 2025, 6:03 IST
Last Updated 31 ಅಕ್ಟೋಬರ್ 2025, 6:03 IST
ಕೆಂಪುಮೂತಿ ಹುಳು ಬಾಧಿಸಿರುವ ತಾಳೆ ಮರ
ಕೆಂಪುಮೂತಿ ಹುಳು ಬಾಧಿಸಿರುವ ತಾಳೆ ಮರ   

ಉಡುಪಿ: ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆಯನ್ನಷ್ಟೇ ಅಲ್ಲದೆ ತಾಳೆ ಕೃಷಿಯತ್ತವೂ ಚಿತ್ತಹರಿಸಿದ್ದ ರೈತರು ಈಗ ಕೆಂಪು ಮೂತಿ ಹುಳದ ಕಾಟದಿಂದ ಬೇಸತ್ತಿದ್ದಾರೆ.

ಈ ಬಾರಿ ಅತಿಯಾದ ಮಳೆಯಿಂದಾಗಿ ತಾಳೆಮರಗಳಲ್ಲೂ ಸುಳಿರೋಗ ಕಾಣಿಸಿಕೊಂಡಿತ್ತು. ಸುಳಿರೋಗ ಕಾಣಿಸಿಕೊಂಡ ತಾಳೆ ಮರಗಳಿಗೆ ಅನಂತರ ಕೆಂಪುಮೂರ್ತಿ ಹುಳ ದಾಳಿ ನಡೆಸಿ ಕಾಂಡವನ್ನು ಕೊರೆಯುತ್ತಿದೆ. ಕೆಂಪುಮೂತಿ ಹುಳದ ಕಾಟದಿಂದ ಮರಗಳೇ ಸಾಯುತ್ತಿವೆ ಎಂದು ತಾಳೆ ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ತಾಳೆ ಕೃಷಿಕರಿದ್ದಾರೆ. ಬೈಂದೂರು, ಕುಂದಾಪುರ, ಉಡುಪಿ, ಕಾರ್ಕಳ ಮೊದಲಾದ ತಾಲ್ಲೂಕುಗಳಲ್ಲಿ ಈ ಕೃಷಿಯನ್ನು ನೆಚ್ಚಿರುವ ರೈತರಿದ್ದಾರೆ.

ADVERTISEMENT

ನಿರ್ವಹಣೆ ಕಡಿಮೆ ಮತ್ತು ಹೆಚ್ಚು ಲಾಭದಾಯಕ ಎನ್ನುವ ಕಾರಣಕ್ಕೆ ಇಲ್ಲಿನ ರೈತರು ಈ ಬೆಳೆಯುತ್ತ ಆಕರ್ಷಿತರಾಗಿದ್ದರು. ಬಹು ಬೆಳೆ ಪದ್ಧತಿಯನ್ನು ಅನುಸರಿಸಿರುವ ಹಲವು ರೈತರು ತಾಳೆ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕೆಂಪು ಮೂತಿ ಹುಳುವಿನ ಕಾಟದಿಂದ ರೈತರು ಕಂಗಾಲಾಗಿದ್ದಾರೆ.

ತೋಟಗಾರಿಕಾ ಇಲಾಖೆ, ಖಾಸಗಿ ಕಂಪನಿ ಹಾಗೂ ರೈತರ ಸಹಭಾಗಿತ್ವದ ಯೋಜನೆ ಅಡಿಯಲ್ಲಿ 3ಎಫ್ ಆಯಿಲ್ ಪಾಮ್ ಕಂಪನಿಯ ಸಹಕಾರದಲ್ಲಿ ಜಿಲ್ಲೆಯ ರೈತರು ಈ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಬೆಳೆಯುವ ತಾಳೆ ಹಣ್ಣುಗಳನ್ನು ಕಂಪನಿಯವರೇ ಖರೀದಿಸುತ್ತಾರೆ. ತಾಳೆ ಎಣ್ಣೆಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಇದು ಹೆಚ್ಚು ಲಾಭದಾಯಕ ಎಂದು ರೈತರು ಹೇಳುತ್ತಾರೆ.

ಪ್ರಯೋಗಾತ್ಮಕವಾಗಿ ಹಲವು ರೈತರು ತಾಳೆ ಬೆಳೆಯನ್ನು ಆರಂಭಿಸಿರುವುದರಿಂದ ಅದಕ್ಕೆ ಬರುವ ರೋಗಗಳ ನಿಯಂತ್ರಣ ಮೊದಲಾದ ವಿಚಾರಗಳು ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲ ಎನ್ನುತ್ತಾರೆ ತಾಳೆ ಕೃಷಿಕರು. ತಾಳೆ ಬೆಳೆಗೆ ಕೆಂಪು ಮೂತಿ ಹುಳದ ಕಾಟದ ಬಗ್ಗೆ ವಿಜ್ಞಾನಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

‘ನಾನು 2012 ರಿಂದಲೂ ತಾಳೆ ಕೃಷಿ ಮಾಡುತ್ತಿದ್ದೇನೆ. ಈ ಬಾರಿ ಅತಿಯಾದ ಮಳೆಯಿಂದಾಗಿ ಆರಂಭದಲ್ಲಿ ತಾಳೆ ಮರಗಳಲ್ಲಿ ಸುಳಿ ರೋಗ ಕಾಣಿಸಿಕೊಂಡಿತ್ತು. ಅನಂತರ ಕೊಂಪುಮೂತಿ ಹುಳುಗಳ ಕಾಟದಿಂದ  ಈಗಾಗಲೇ ಏಳು ಮರಗಳು ಸತ್ತು ಹೋಗಿವೆ. ಸಂಬಂಧಪಟ್ಟ ಇಲಾಖೆಗಳೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ’ ಎಂದು ಎಡಮೊಗೆಯ ತಾಳೆ ಕೃಷಿಕ ಮಹೇಶ್‌ ಭಟ್‌ ತಿಳಿಸಿದ್ದಾರೆ.

‘ಹೊಸದಾಗಿ ತಾಳೆ ಕೃಷಿ ಆರಂಭಿಸುವ ರೈತರಿಗೆ ಈಗ ತರಬೇತಿಯನ್ನೂ ನೀಡುವುದಿಲ್ಲ. ಇದರಿಂದ ಅವರಿಗೆ ಮಾಹಿತಿ ಕೊರತೆ ಇರುತ್ತದೆ. ಬೆಳೆಗೆ ರೋಗ ಬಂದರೆ ಅವರು ಈ ಕೃಷಿಯಿಂದಲೇ ವಿಮುಖರಾಗುವ ಸಾಧ್ಯತೆಯೂ ಇರುತ್ತದೆ’  ಎಂದೂ ಅವರು ಹೇಳಿದರು.

ಕೆಂಪುಮೂತಿ ಹುಳ
ಕೆಂಪುಮೂತಿ ಹುಳದಿಂದಾಗಿ ಹಾನಿಗೊಳಗಾದ ತಾಳೆ ಮರ 

‘ಫೆರೋಮೋನ್ ಟ್ರ್ಯಾಪ್ ಬಳಸಿ’

‘ಪಾಲ್ಮೇಸಿ ಕುಟುಂಬಕ್ಕೆ ಸೇರಿದ ತೆಂಗು ಅಡಿಕೆ ತಾಳೆ ಮೊದಲಾದ ಮರಗಳಿಗೆ ಕೆಂಪು ಮೂತಿ ಹುಳುವಿನ ಕಾಟವಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾದ ಮತ್ತು ಪೋಷಕಾಂಶ ಕೊರತೆ ಇರುವ ಮರಗಳಿಗೆ ಕೆಂಪು ಮೂತಿ ಹುಳಗಳು ದಾಳಿ ನಡೆಸುತ್ತವೆ’ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ತಿಳಿಸಿದ್ದಾರೆ. ‘ತಾಳೆ ಮರಗಳ ಸುಳಿಯಲ್ಲಿ ಗಾಯವಾಗಿದ್ದರೆ ಮತ್ತು ಸುಳಿರೋಗದಿಂದ ಕೊಳೆತಿದ್ದರೆ ಅಲ್ಲಿ ಕೆಂಪು ಮೂತಿ ಹುಳುಗಳು ಮೊಟ್ಟೆ ಇಡುತ್ತವೆ. ಮರಿಗಳು ಹೊರಬಂದ ಬಳಿಕ ಅವುಗಳು ಕಾಂಡವನ್ನು ಕೊರೆಯುತ್ತವೆ’ ಎಂದೂ ಅವರು ತಿಳಿಸಿದರು. ‘ಕೆಂಪು ಮೂತಿ ಹುಳ ನಿಯಂತ್ರಿಸಲು ರೈತರು ಫೆರೋಮೋನ್ ಟ್ರ್ಯಾಪ್ ಬಳಸಬಹುದು. ತಾಳೆ ತೋಟ ಸಮೀಪವಿರುವ ಇತರ ತೋಟಗಳಲ್ಲಿ ಅಥವಾ ಮರಗಳಲ್ಲಿ ಇದನ್ನಿರಿಸಬೇಕು. ಇದರ ಆಕರ್ಷಣೆಗೆ ಬರುವ ಕೆಂಪು ಮೂತಿ ಹುಳುಗಳು ಇದರೊಳಗೆ ಬಿದ್ದು ಸಾಯುತ್ತವೆ. ಕೆಂಪು ಮೂತಿ ಹುಳು ದಾಳಿ ಮಾಡಿರುವ ಮರಗಳಿಗೆ ಲೀಟರ್‌ ನೀರಿಗೆ 10 ಎಂ.ಎಲ್‌. ಇಮಿಡಾಕ್ಲೋಪ್ರಿಡ್‌ 10 ಎಂ.ಎಲ್‌. ಕ್ಲೋರ್‌ಪೈರಿಪಾಸ್‌ ಸೇರಿಸಿ ದ್ರಾವಣ ಸಿದ್ಧಪಡಿಸಿ ರಂಧ್ರಗಳಿಗೆ ಸಿಂಪಡಿಸಬೇಕು ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.